ಬೆಂಗಳೂರು(ಡಿ.08): ಕೃಷಿ ಮಸೂದೆ ಕಾಯ್ದೆ ವಿರೋಧಿಸಿ ಇಂದು ದೇಶಾದ್ಯಂತ ಭಾರತ್ ಬಂದ್ಗೆ ಕರೆ ನೀಡಿದ್ದು, ರೈತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ ನಾಯಕರು ಕೂಡ ಭಾರತ್ ಬಂದ್ಗೆ ಬೆಂಬಲ ನೀಡಿದ್ದಾರೆ. ಬೆಳಗ್ಗೆಯಿಂದಲೇ ವಿವಿಧ ರೈತ ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ರಾಜ್ಯ ಕಾಂಗ್ರೆಸ್ ನಾಯಕರು ರೈತ ಮಸೂದೆ ಕಾಯ್ದೆ ವಿರೋಧಿಸಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್, ಟೌನ್ಹಾಲ್ ಸೇರಿದಂತೆ ಹಲವೆಡೆ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದು ಹಾಗೂ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರು. ಸಮಯ ಮೀರಿ ರಸ್ತೆ ತಡೆ ನಡೆಸಿ, ರಸ್ತೆ ಮಧ್ಯೆ ಪ್ರತಿಭಟನೆಗೆ ಕುಳಿತ ಕಾರಣ ವಾಟಾಳ್ ನಾಗರಾಜ್ ಹಾಗೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದಿದ್ದಾರೆ.
Bharath Bandh: ಸೆಕ್ಷನ್ 144 ನಡುವೆಯೂ ವಿಧಾನಸೌಧದ ಬಳಿ ಕಪ್ಪು ಬಾವುಟ ಹಿಡಿದು ಕಾಂಗ್ರೆಸ್ ನಾಯಕರ ಪ್ರತಿಭಟನೆ
ಇಂದು ಬೆಳಗ್ಗೆಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಂದ್ ಕಾವು ಹೆಚ್ಚಾಗಿತ್ತು. ವಿವಿಧ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು.
ಇನ್ನು, ರೈತ ಸಂಘಟನೆಗಳ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸದ್ಯ ಮುಕ್ತಾಯವಾಗಿದೆ. ಕುರುಬೂರು ಶಾಂತಕುಮಾರ್ ಹಾಗೂ ಇತರೆ ಸಂಘಟನೆಗಳು ಪ್ರತಿಭಟನೆ ಮುಗಿಸಿ ಹೊರಟರು. ಬಳಿಕ ಪೊಲೀಸರು ಬ್ಯಾರಿಕೇಡ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬ್ಯಾರಿಕೇಡ್ ತೆರವುಗೊಳಿಸಲಾಯಿತು. ಸುಮಾರು 7 ತಾಸುಗಳಿಂದ ಬ್ಲಾಕ್ ಆಗಿದ್ದ ರಸ್ತೆ ಈಗ ಸಂಚಾರಕ್ಕೆ ಓಪನ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ