ಹುಬ್ಬಳ್ಳಿ: ಕೇಂದ್ರ ಸರ್ಕಾರ ರೈತರು, ಬಡವರು, ಕೂಲಿ ಕಾರ್ಮಿಕರ ಪರವಾಗಿದೆ. ರೈತರ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಾರತ್ ಬಂದ್ ಕರೆಯನ್ನು ಕೈಬಿಡುವಂತೆ ಪ್ರತಿಭಟನಾ ನಿರತ ರೈತರಲ್ಲಿ ಮನವಿ ಮಾಡಿದ್ದಾರೆ. ನೂತನ ಕಾಯ್ದೆಗಳ ಬಗ್ಗೆ ಲೋಕಸಭೆಯಲ್ಲಿ ಸ್ಪಷ್ಟವಾದ ಭರವಸೆ ನೀಡಿದ್ದೇವೆ. ರೈತರಿಗೆ ಏನಾದರೂ ಅನುಮಾನಗಳೀದ್ದರೆ ಅದನ್ನೂ ಬಗೆಹರಿಸಲು ಸಿದ್ಧರಿದ್ದೇವೆ. ರೈತರು ತಮ್ಮ ಹೋರಾಟ ಹಿಂಪಡೆಯುವಂತೆ ಮನವಿ ಮಾಡುತ್ತೇನೆ. ಒಂಭತ್ತನೆಯ ತಾರೀಖು ಸಭೆಯಿದ್ದು ರೈತರ ಎಲ್ಲಾ ಸಮಸ್ಯೆಗಳು ಬಗೆಹರಿಯುವ ಭರವಸೆ ಇದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಪಕ್ಷದ ಬಲೆಗೆ ಬಿದ್ದು ಕೆಟ್ಟೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಪ್ರಲ್ಹಾದ್ ಜೋಷಿ, ಕಾಂಗ್ರೆಸ್ ಪಕ್ಷ ಭಸ್ಮಾಸುರ ಇದ್ದಂತೆ ಅನ್ನೋದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಡವಾಗಿಯಾದರೂ ಗೊತ್ತಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್ಗೆ ಹೋಟೆಲ್, ಎಪಿಎಂಸಿ ಬೆಂಬಲ ಇಲ್ಲ; ಬೀದಿಬದಿ ವ್ಯಾಪಾರಿಗಳು, ಖಾಸಗಿ ಶಾಲೆಗಳ ಬೆಂಬಲ
ಕಾಂಗ್ರೆಸ್ ಪಕ್ಷವನ್ನು ನಂಬಿ ಮೋಸ ಹೋಗಿರುವುದಾಗಿ ಕುಮಾರಸ್ವಾಮಿಯವರು ಹೇಳಿದ್ದು ಸರಿಯಾಗಿಯೇ ಇದೆ ಎಂದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್:
ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬವನ್ನು ಬಿಟ್ಟು ಬೇರೆ ಯಾರನ್ನೂ ಬೆಳೆಸಿಲ್ಲ. ಕಾಂಗ್ರೆಸ್ ಪಕ್ಷವನ್ನು ನಂಬಿ ಮೋಸ ಹೋಗಿರುವುದಾಗಿ ಕುಮಾರಸ್ವಾಮಿಯವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಕುಮಾರಸ್ವಾಮಿಯವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಬಿಜೆಪಿ ಜೊತೆಗೆ ಇದ್ದರೆ ಇದುವರೆಗೂ ಅಧಿಕಾರದಲ್ಲಿಯೇ ಇರುತ್ತಿದ್ದರು ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಯೇ ಇತರ ಎಲ್ಲಾ ಪಕ್ಷಗಳು ಹುಟ್ಟಿಕೊಂಡಿವೆ. ಇದನ್ನು ಜೆಡಿಎಸ್‌ನವರು ಅರ್ಥ ಮಾಡಿಕೊಳ್ಳಬೇಕು. ಕುಮಾರಸ್ವಾಮಿಯವರಿಗೆ ತಡವಾಗಿಯಾದರೂ ಬುದ್ಧಿ ಬಂದಿದೆ ಎಂದು ಮಾಜಿ ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೈ ಕಾಲು ಹಿಡಿದು ಕಾಂಗ್ರೆಸ್ ಟಿಕೆಟ್ ಕೇಳುವೆ: ವರ್ತೂರು ಪ್ರಕಾಶ್
ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳಬಹುದು ಅನ್ನೋದನ್ನು ಮುಂದೆ ಚಿಂತಿಸಲಾಗುವುದು. ನಾವೀಗ ಪೂರ್ಣ ಬಹುಮತದಿಂದ ಅಧಿಕಾರ ನಡೆಸುತ್ತಿದ್ದೇವೆ. ಆದರೂ ಜೆಡಿಎಸ್ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಸ್ವಾಗತಿಸುತ್ತೇವೆ. ಬಿಜೆಪಿ ಮತ್ತು ಜೆಡಿಎಸ್‌ನದ್ದು ಸಹಜ ಮೈತ್ರಿ. ಜೆಡಿಎಸ್ ನಮಗೆ ಬೆಂಬಲ ಕೊಟ್ಟರೆ ಯಾವತ್ತೂ ಸ್ವಾಗತವಿದೆ. ವಿಧಾನ ಪರಿಷತ್ ಸಭಾಪತಿಯನ್ನು ಕೆಳಗಿಳಿಸಲು ಜೆಡಿಎಸ್ ನಮ್ಮ ಜೊತೆಗೆ ಕೈಜೋಡಿಸಿದರೆ ಒಳ್ಳೆಯದು ಎಂದು ಕರೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರ ವರಿಷ್ಠರಿಗೆ ಬಿಟ್ಟದ್ದು. ನಾನು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನೋದು ಕೇವಲ ಊಹಾಪೋಹ. ಬೆಳಗಾವಿ ಅಭ್ಯರ್ಥಿ ಬಗ್ಗೆ ಈವರೆಗೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ಯಾರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಇಂತಹ ಸುದ್ದಿಗಳ ಮೂಲವನ್ನು ಹುಡುಕುತ್ತಿದ್ದೇನೆ ಎಂದು ಹಾಸ್ಯ ಮಾಡಿದ್ದಾರೆ.
ವರದಿ: ಪರಶುರಾಮ ತಹಶೀಲ್ದಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ