ದೇವನಹಳ್ಳಿ (ಡಿ. 8): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಇಂದು ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೂರು ಪ್ರವೇಶ ದ್ವಾರದಲ್ಲಿ ಪೊಲೀಸರ ಕಾವಲು ಹಾಕಲಾಗಿದೆ. ಮುಂಜಾನೆಯಿಂದ ವಾಹನಗಳ ತಪಾಸಣೆ ಕಾರ್ಯ ಮಾಡಲಾಗುತ್ತಿದೆ. ಬೋರ್ಡಿಂಗ್ ಪಾಸ್ ಇದ್ದ ಪ್ರಯಾಣಿಕರಿಗೆ ಮಾತ್ರ ಏರ್ ಪೋರ್ಟ್ಗೆ ಪ್ರವೇಶ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರನ್ನ ಟೋಲ್ ನಿಂದ ಹೊರಗೆ ಕಳಿಸಲಾಗುತ್ತಿದೆ.
ರೈತ ಸಂಘಟನೆಗಳು ಏರ್ ಪೋರ್ಟ್ಗೆ ಮುತ್ತಿಗೆ ಹಾಕುವ ಸಾಧ್ಯತೆ ಇರುವ ಕಾರಣಕ್ಕೆ ಪೊಲೀಸರು ಮುಂಜಾಗ್ರತೆ ತೆಗೆದುಕೊಂಡು ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿದ್ದಾರೆ.
ಏರ್ ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ ಭಾರತ ಬಂದ್ ಗೆ ಬೆಂಬಲ ನೀಡಿದೆ. ಆದರೆ ಟ್ಯಾಕ್ಸಿ ಸೇವೆ ನೀಡುವ ತೀರ್ಮಾನವನ್ನು ಚಾಲಕರಿಗೆ ನೀಡಲಾಗಿದೆ. ಈಗಾಗಲೇ ಕೊರೊನಾದಿಂದ ಟ್ಯಾಕ್ಸಿ ಚಾಲಕರ ಬದುಕು ಮೂರಾಬಟ್ಟೆಯಾಗಿದೆ. ಇಎಂಐ ಕಂತಿನ ಹಣ ಕಟ್ಟಲು ಪರದಾಡುವ ಸ್ಥಿತಿ ಇದೆ. ಆದ್ದರಿಂದ ಚಾಲಕರ ವೈಯಕ್ತಿಕ ತೀರ್ಮಾನಕ್ಕೆ ಬೀಡಲಾಗಿದೆ.
ಇದನ್ನೂ ಓದಿ: Bharat Bandh - ರಾಜ್ಯದಲ್ಲಿ ಬೆಳಗ್ಗೆ 6ರಿಂದಲೇ ಭಾರತ್ ಬಂದ್; ಜಿಟಿ ಮಳೆಯ ನಡುವೆಯೂ ರೈತರ ಪ್ರತಿಭಟನೆ
ವಿಮಾನ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಸಂಚಾರಿಸುವ ಮತ್ತು ಜಿಲ್ಲೆಗಳಿಗೆ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಮತ್ತು ಬಿಎಂಟಿಸಿ ಬಸ್ ಗಳು ಎಂದಿನಂತೆ ಸಹಜವಾಗಿ ಸಂಚಾರಿಸುತ್ತಿವೆ. ಬಂದ್ ತೀವ್ರತೆಯನ್ನು ನೋಡಿಕೊಂಡು ಬಸ್ ಗಳ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಕರ್ನಾಟಕದಲ್ಲಿ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ ಬಂದ್ ಗೆ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಪಡೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಅಸಂಖ್ಯಾತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ