• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bharat Bandh: ಭಾರತ್​ ಬಂದ್​; ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗೆ ಡಿಕೆ ಶಿವಕುಮಾರ್ ಸಾಥ್

Bharat Bandh: ಭಾರತ್​ ಬಂದ್​; ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗೆ ಡಿಕೆ ಶಿವಕುಮಾರ್ ಸಾಥ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.

Bharat Bandh: ಬೆಂಗಳೂರಿನ ಟೌನ್ ಹಾಲ್ ಮುಂದೆ ಇಂದು ನಡೆಯುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಡಿಕೆ ಶಿವಕುಮಾರ್ ನಿರ್ಧಾರ ಮಾಡಿದ್ದಾರೆ. ಇಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. 

  • Share this:

    ಬೆಂಗಳೂರು (ಡಿ. 8): ಇಂದು ದೇಶಾದ್ಯಂತ ಅನೇಕ ರೈತ ಸಂಘಟನೆಗಳು ಭಾರತ್ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಅನೇಕ ಸಂಘಟನೆಗಳು ಎಬಂಬಲ ಘೋಷಿಸಿವೆ. ಇದರ ಜೊತೆಗೆ ರೈತರ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಜೊತೆಯಾಗಲಿದ್ದಾರೆ. ಇಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆಯುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಡಿಕೆ ಶಿವಕುಮಾರ್ ನಿರ್ಧಾರ ಮಾಡಿದ್ದಾರೆ. ಭಿನ್ನಮತವನ್ನು ಮರೆತು ಇಂದು ರೈತ ಮುಖಂಡರು ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಅವರಿಗೆ ಕಾಂಗ್ರೆಸ್​ನ ಕೆಲವು ನಾಯಕರು ಕೂಡ ಬೆಂಬಲ ಸೂಚಿಸಿದ್ದಾರೆ.


    ಇಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಟೌನ್ ಹಾಲ್ ಮುಂದೆ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ರೈತ ಮುಖಂಡರು ಸೇರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಮೌರ್ಯ ಸರ್ಕಲ್ ನಿಂದ ಮೆರವಣಿಗೆ ನಡೆಸಿ ಟೌನ್ ಹಾಲ್ ಕಡೆಗೆ ಹೊರಡಲಿರುವ ಕುರುಬೂರು ಶಾಂತಕುಮಾರ್ ಹಾಗೂ ಬೆಂಬಲಿಗರ ಜೊತೆಗೆ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಾಟಾಳ್ ನಾಗರಾಜ್, ಕೋಡಿಹಳ್ಳಿ ಚಂದ್ರಶೇಖರ್ ಜೊತೆಯಾಗಲಿದ್ದಾರೆ. ಹಾಗೇ, ಕರವೇ, ಕಾರ್ಮಿಕ ಸಂಘನೆಗಳು, ಕಮ್ಯೂನಿಸ್ಟ್ ಪಾರ್ಟಿ, ಆಮ್ ಆದ್ಮಿ‌ ಪಕ್ಷ ಹಾಗೂ ಇತರೆ ಪಕ್ಷಗಳು ಮತ್ತು ಸಂಘಟನೆಗಳು ಭಾಗಿಯಾಗಲಿವೆ.


    ಇದನ್ನೂ ಓದಿ: Bharat Bandh: ಭಾರತ್ ಬಂದ್ ಹಿನ್ನೆಲೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್


    ಟೌನ್ ಹಾಲ್​ನಿಂದ ಬೃಹತ್ ಜಾಥಾದೊಂದಿಗೆ ಮೈಸೂರು ಬ್ಯಾಂಕ್ ಸರ್ಕಲ್​ಗೆ ಹೊರಡಲಿರುವ ರೈತ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ. ಟೌನ್ ಹಾಲ್ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆ. ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್ ಕಮಿಷನರ್ ಜೊತೆ ಚರ್ಚಿಸಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗುವ ತೀರ್ಮಾನ ತೆಗೆದುಕೊಂಡಿದ್ದಾರೆ.


    ಇಂದು ರೈತರ ಬೆಂಬಲದ ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ಬಳಿ ಬೇರೆ ಕಡೆಗಳಿಂದ ಹೋರಾಟಗಾರರು ಬಂದು ಸೇರುವ ಸಾಧ್ಯತೆಯಿದೆ. ಆದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. 2 ಕೆಎಸ್ಆರ್​ಪಿ‌ ತುಕಡಿ ಜೊತೆಗೆ ಟೌನ್​ ಹಾಲ್ ಬಳಿ ಪೊಲೀಸರು ಸಜ್ಜಾಗಿದ್ದಾರೆ. ಈಗಾಗಲೇ ಬ್ಯಾರಿಕೇಡ್ ಹಾಕಿ ತಯಾರಿ ನಡೆಸಲಾಗಿದೆ. ಪ್ರತಿಭಟನೆ ಕೈಮೀರಿ ಹೋಗದಂತರ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.


    ಸಿಎಂ ನಿವಾಸಕ್ಕೂ ಬಿಗಿ ಭದ್ರತೆ:


    ಇಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಭದ್ರತೆಯ ಬಗ್ಗೆ ಸಿಎಂ ನಿವಾಸ ಕಾವೇರಿ ಹಾಗೂ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಡಿಸಿಪಿ ಅನುಚೇತ್ ಪರಿಶೀಲನೆ ನಡೆಸಿದರು. ಭದ್ರತೆಯ ದೃಷ್ಟಿಯಿಂದ ಕಾವೇರಿ, ಕೃಷ್ಣಾ ಬಳಿ ಬ್ಯಾರಿಕ್ಯಾಡ್ ಗಳು ಹಾಕುವಂತೆ ಡಿಸಿಪಿ ಸೂಚನೆ ನೀಡಿದ್ದಾರೆ. ಹಿರಿಯ ಭದ್ರತಾ ಸಿಬ್ಬಂದಿಗಳಿಗೆ, ಭದ್ರತೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ವಿಭಾಗದ ಡಿಸಿಪಿ‌ ಅನುಚೇತ್ ಸೂಚಿಸಿದ್ದಾರೆ. ರೈತರ ಮುಖಂಡರಿಂದ ಸಿಎಂ ಮನೆಗೆ ಮುತ್ತಿಗೆ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚು ಭದ್ರತೆ ಒದಗಿಸಿದ್ದಾರೆ.


    ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್​ಗೆ ಕರ್ನಾಟಕದಲ್ಲಿ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾರತ್ ಬಂದ್​ ಹಿನ್ನೆಲೆ ಇಂದು ಬೆಳಗ್ಗೆ 10:30ಕ್ಕೆ ವಿವಿಧ ರೈತ ಸಂಘಟನೆಗಳಿಂದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 15 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಸಿಪಿಗಳು, ಡಿಸಿಪಿಗಳು ಮತ್ತು ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 32 ಕೆಎಸ್​​ಆರ್​ಪಿ, 30 ಸಿಎಆರ್ ತುಕಡಿಗಳನ್ನ ನಿಯೋಜಿಸಲಾಗಿದೆ. ಮೈಸೂರು ಬ್ಯಾಂಕ್ ರಸ್ತೆ, ಟೌನ್ ಹಾಲ್, ಫ್ರೀಡಂ ಪಾರ್ಕ್ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.


    (ವರದಿ: ಆಶಿಕ್ ಮುಲ್ಕಿ, ಕೃಷ್ಣ ಜಿ.ವಿ)

    Published by:Sushma Chakre
    First published: