ಕೊಡಗಿಗೂ ತಟ್ಟಿದ ಭಾರತ್ ಬಂದ್ ಬಿಸಿ : ರಸ್ತೆ ತಡೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು 

Bharat bandh in Kodagu: ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸಹ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಬಸ್​​ಗಳಿಲ್ಲದೇ ಪರದಾಡುತ್ತಿರುವ ಪ್ರಯಾಣಿಕರು

ಬಸ್​​ಗಳಿಲ್ಲದೇ ಪರದಾಡುತ್ತಿರುವ ಪ್ರಯಾಣಿಕರು

  • Share this:
ಕೊಡಗು(ಡಿಸೆಂಬರ್​. 08): ನೂತನ ಕೃಷಿ ಮಸೂದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರುತ್ತಿರುವ ಕೇಂದ್ರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲೂ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ಹಾಗೂ ಡಿಎಸ್‍ಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದಾಗಿ ಮಡಿಕೇರಿ ಮೈಸೂರು, ಮಡಿಕೇರಿ ಮಂಗಳೂರು ರಸ್ತೆಗಳು ಬಂದ್ ಆಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ರಸ್ತೆಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಕೆಲವೊತ್ತು ಸುಮ್ಮನಿದ್ದ ಪೊಲೀಸರು ರಸ್ತೆ ತಡೆಯನ್ನು ತೆರವು ಮಾಡಲು ಮುಂದಾದರು. ಹೀಗಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಹೆಚ್ಚು ಹೊತ್ತು ರಸ್ತೆ ತಡೆ ಮಾಡದೆ ತೆರವು ಮಾಡುವಂತೆ ಪೊಲೀಸರು ರೈತರ ಜೊತೆಗೆ ಏರುಧ್ವನಿಯಲ್ಲಿ ಮಾತನಾಡಿದಾಗ ರೈತರು ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲವೊತ್ತು ಪ್ರತಿಭಟನಾ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅಲ್ಲದೆ ರೈತರು ಇನ್ನಷ್ಟು ರೊಚ್ಚಿಗೆದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸಹ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ : Bharath Bandh: ಭಾರತ ಬಂದ್ ಗೆ ಕಲಬುರ್ಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ; ಬಂದ್ ವೇಳೆ ಕಳ್ಳತನಕ್ಕೆ ಯತ್ನಿಸಿದ ಖದೀಮ

ಇನ್ನು ಎಲ್ಲೆಡೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೊಡಗಿನಲ್ಲೂ ಕೆಎಸ್‍ಆರ್ ಟಿಸಿ ಬಸ್ಸುಗಳ ಸಂಚಾರವನ್ನು ಸ್ಥಗಿತ ಮಾಡಿದರು. ಇದರಿಂದಾಗಿ ಮೈಸೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡಬೇಕಾಯಿತು.

ಇನ್ನು ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ, ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ, ಜನರ ಓಡಾಟ ಎಂದಿನಂತೆ ಇರದೆ ವಿರಳವಾಗಿದ್ದರಿಂದ ವ್ಯಾಪಾರ ವಹಿವಾಟು ಕೂಡ ಕಡಿಮೆಯಾಗಿತ್ತು.
Published by:G Hareeshkumar
First published: