Bharat Bandh: ನಾಳಿನ ಭಾರತ್ ಬಂದ್ ಕೊಡಗಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗುವ ಸಾಧ್ಯತೆ 

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಎರಡು ವರ್ಷಗಳು ಕಾಡಿದ ಕೋವಿಡ್ ನಿಂದ ಆದ ಲಾಕ್ಡೌನ್ ಜಿಲ್ಲೆಯ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ನೆಲ ಕಚ್ಚಿಸಿವೆ. ಇದರಿಂದ ವ್ಯಾಪಾರಸ್ಥರು ಸಂಕಷ್ಟದಲ್ಲಿ ಇದ್ದಾರೆ.

ಕೊಡಗಿನ ಮುಖಂಡರು

ಕೊಡಗಿನ ಮುಖಂಡರು

  • Share this:
ಕೊಡಗು(ಸೆ.26): ಕೃಷಿ ಕಾಯ್ದೆಗಳ(Agri Laws) ತಿದ್ದುಪಡಿಯನ್ನು ವಿರೋಧಿಸಿ ನಾಳೆ ನಡೆಯುತ್ತಿರುವ ಭಾರತ್ ಬಂದ್(Bharat Bandh) ಗೆ ಕೊಡಗಿನಲ್ಲೂ ರೈತ ಸಂಘಟನೆಗಳು(Farmer Associations), ರಾಜಕೀಯ ಪಕ್ಷಗಳು(Political Parties) ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಆದರೆ ಬಂದ್ ಆಗುವ ಬದಲು ಅದು ಕೇವಲ ಪ್ರತಿಭಟನೆಗೆ ಅಷ್ಟೇ ಸೀಮಿತವಾಗುವ ಸಾಧ್ಯತೆ ಇದೆ. ಭಾರತ್ ಬಂದ್ ಅಂಗವಾಗಿ ಈಗಾಗಲೇ ಸಭೆ ನಡೆಸಿರುವ ರೈತ ಮತ್ತು ಕಾರ್ಮಿಕ ಮುಖಂಡರು ಮತ್ತು ವಿವಿಧ ರಾಜಕೀಯ ಪಕ್ಷಗಳು ಕೊಡಗಿನಲ್ಲೂ ಬಂದ್ ಗೆ ಕರೆ ನೀಡಿವೆ.

ಕರ್ನಾಟಕ ರಾಜ್ಯ ರೈತ ಸಂಘ, ಕಾಂಗ್ರೆಸ್, ಜೆಡಿಎಸ್ ಮತ್ತು ಸಿಪಿಐಎಂ ರಾಜಕೀಯ ಪಕ್ಷಗಳ ಜೊತೆಗೆ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆ ಪ್ರತಿಭಟನೆಗೆ ನಡೆಸಲಿವೆ. ಆದರೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಡಿಕೇರಿ, ಮೈಸೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. 10.30 ಕ್ಕೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಲಿರುವ ಪ್ರತಿಭಟನಾಕಾರರು ಕೆಲವೊತ್ತು ರಸ್ತೆ ತಡೆ ನಡೆಸಲಿದ್ದಾರೆ.

ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ಅಲ್ಲಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಿದ್ದಾರೆ. ಬಂದ್  ಯಶಸ್ವಿಗೊಳಿಸಲು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚುವಂತೆ ರೈತ ಕಾರ್ಮಿಕ ಸಂಘಟನೆಗಳ ಮುಖಂಡರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಬಳಿ ಮನವಿ ಮಾಡಿದ್ದಾರೆ. ಆದರೆ ಭಾರತ್ ಬಂದ್ ಗೆ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಯಾವುದೆ ಬೆಂಬಲ ನೀಡುವುದಿಲ್ಲ ಎಂದು ಜಿಲ್ಲಾಧ್ಯಕ್ಷ ಎಂ. ಬಿ. ದೇವಯ್ಯ ಪ್ರತಿಕ್ರಿಯಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಎರಡು ವರ್ಷಗಳು ಕಾಡಿದ ಕೋವಿಡ್ ನಿಂದ ಆದ ಲಾಕ್ಡೌನ್ ಜಿಲ್ಲೆಯ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ನೆಲ ಕಚ್ಚಿಸಿವೆ. ಇದರಿಂದ ವ್ಯಾಪಾರಸ್ಥರು ಸಂಕಷ್ಟದಲ್ಲಿ ಇದ್ದಾರೆ. ವೀಕೆಂಡ್ ಕರ್ಫ್ಯೂ ಈಗಷ್ಟೇ ತೆರವಾಗಿದ್ದು ವ್ಯಾಪಾರಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಹೀಗಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.ಹೀಗಾಗಿ ಜಿಲ್ಲೆಯಲ್ಲಿ ಬಂದ್ ಆಗೋದು ಬಹುತೇಕ ಡೌಟ್ ಎನ್ನಲಾಗುತ್ತಿದೆ.

ಇದನ್ನೂ ಓದಿ:Bharat Bandh: ರೈತರಿಂದ ನಾಳೆ ಹೆದ್ದಾರಿ ಬಂದ್, ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡಬೇಡಿ..!

ಇನ್ನು ಜಿಲ್ಲೆಯ ಸಂಪರ್ಕ ಸಾರಿಗೆ ಆಗಿರುವ ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸಲಿವೆ. ಬಸ್ ಮಾಲೀಕರ ಸಂಘವಾಗಲಿ, ಆಟೋ ಚಾಲಕರ ಸಂಘವಾಗಲಿ ಬಂದ್ ಗೆ ಬೆಂಬಲ ನೀಡಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎನ್ನಲಾಗಿದೆ.

ಇದರ ನಡುವೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆಗಿರುವುದರಿಂದ ನಾಳೆಯಿಂದ 6 ನೇ ತರಗತಿಯಿಂದ ಎಲ್ಲಾ ತರಗತಿಗಳು ಆರಂಭವಾಗುತ್ತಿದ್ದು ಶಾಲಾ ವಿದ್ಯಾರ್ಥಿಗಳು ನಾಳೆ ಶಾಲೆಗೆ ಬರಬೇಕೆ ಬೇಡವೆ ಎನ್ನೋ ಗೊಂದಲವೂ ಎದುರಾಗಿದೆ. ಆದರೆ ಜಿಲ್ಲೆಯಲ್ಲಿ ನಾಳೆ ಪರಿಸ್ಥಿತಿ ಹೇಗಿರುತ್ತದೆ ಎನ್ನೋದನ್ನ ಕಾದು ನೋಡಬೇಕಾಗಿದೆ.

ನಾಳೆ ಭಾರತ್ ಬಂದ್ ಹಿನ್ನೆಲೆ, ರೈತ ಪರ ಹೋರಾಟಗಾರ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲೂ ಬಂದ್ ಯಶಸ್ವಿಯಾಗಲಿದೆ. 250ಕ್ಕೂ ಹೆಚ್ಚು ಸಂಘಟನೆಗಳು ಬಂದ್​​ಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನಲ್ಲಿ ಅಭೂತಪೂರ್ವವಾಗಿ ಬಂದ್ ಕಾರ್ಯ ನಡೆಯುತ್ತೆ. ದೂರದ ಪ್ರಯಾಣ ಬೆಳೆಸುವವರು ಒಂದು ದಿನ ಮುಂದೂಡಿ ಎಂದು ಮನವಿ ಮಾಡಿದ್ದಾರೆ.

ಬಂದ್ ಇರೋ ಕಾರಣ ಪ್ರಯಾಣಿಕರಿಗೆ ತೊಂದರೆ ಆಗಬಹುದು. ಹೀಗಾಗಿ ದೂರದ ಪ್ರಯಾಣ ಇದ್ದವರು ಸೋಮವಾರ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ. ರಾಜ್ಯದ ವಕೀಲರಿಗೂ ಮನವಿ ಮಾಡಲಾಗಿದೆ. ನೈತಿಕ ಬೆಂಬಲ‌ ನೀಡಿರುವ ವಕೀಲರು ನಾಳೆ‌ ಒಂದು ದಿನ ನಿಮ್ಮ ಕೆಲಸವನ್ನ ಮುಂದೂಡಿ. ನೀವು ರೈತಾಪಿ ವರ್ಗದಿಂದಲೇ ಬಂದಿರೋ‌ ಕಾರಣ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ ಎಂದು ಭಾರತ್ ಬಂದ್ ಸಂಬಂಧ ವಕೀಲರಿಗೆ ಬಡಗಲಪುರ ನಾಗೇಂದ್ರ ಕೋರಿದ್ದಾರೆ.
Published by:Latha CG
First published: