ಬೆಂಗಳೂರು (ಮಾ. 4): ಇಂದಿನಿಂದ ಬಜೆಟ್ ಅಧಿವೇಶನ ಶುರುವಾಗಿದ್ದು, ಆರಂಭದ ದಿನವೇ ಸದನ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಶರ್ಟ್ ಬಿಚ್ಚಿ ಸದನದ ಬಾವಿಗಿಳಿದು ಪ್ರತಿಭಟಿಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರ ವರ್ತನೆಯಿಂದ ಗಲಾಟೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಅನುಚಿತವಾಗಿ ವರ್ತಿಸಿದ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಅವರನ್ನು 1 ವಾರಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ. ಹೀಗಾಗಿ, ಮಾರ್ಚ್ 12ರವರೆಗೂ ಬಿಕೆ ಸಂಗಮೇಶ್ ಸದನದಲ್ಲಿ ಪಾಲ್ಗೊಳ್ಳುವಂತಿಲ್ಲ.
ಭದ್ರಾವತಿಯಲ್ಲಿ ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಇಂದು ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಕ್ರೋಶಕ್ಕೂ ಕಾರಣವಾಯಿತು. ಸದನದಲ್ಲಿ ಶರ್ಟ್ ಬಿಚ್ಚಿದ್ದ ಸಂಗಮೇಶ್ ಅವರಿಗೆ ಶಿಕ್ಷೆ ನೀಡಿರುವ ಸ್ಪೀಕರ್ ಕಾಗೇರಿ ಸಂಗಮೇಶ್ ಅವರನ್ನು ಒಂದು ವಾರ ಸದನದಿಂದ ಅಮಾನತು ಮಾಡಿದ್ದಾರೆ. ಸದನದಲ್ಲಿ ಅಸಭ್ಯವಾಗಿ ವರ್ತಿಸಿದ ಸಂಗಮೇಶ್ ಅವರನ್ನು ಅಮಾನತು ಮಾಡಬೇಕೆಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಸದನದಲ್ಲಿ ಮಂಡನೆ ಮಾಡಿದರು. ಅದನ್ನು ಅಂಗೀಕರಿಸಿದ ಸ್ಪೀಕರ್ ಕಾಗೇರಿ 1 ವಾರ ಸಂಗಮೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Karnataka Budget Session: ಸದನದಲ್ಲಿ ಶರ್ಟ್ ಬಿಚ್ಚಿದ ಭದ್ರಾವತಿ ಶಾಸಕ ಸಂಗಮೇಶ್; ಸ್ಪೀಕರ್ ಕಾಗೇರಿ ತರಾಟೆ
1 ವಾರಗಳ ಕಾಲ ಶಾಸಕ ಸಂಗಮೇಶ್ ಅವರಿಗೆ ಸದನಕ್ಕೆ ಬಾರದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ. ಇದಕ್ಕೂ ಮುನ್ನ ಸಂಗಮೇಶ್ ವಿರುದ್ಧ ಆಕ್ರೋಶ ಹೊರಹಾಕಿದ ಸ್ಪೀಕರ್ ಕಾಗೇರಿ, ನೀವೇನು ಬೀದಿಯಿಂದ ಬಂದಿದ್ದೀರ? ನಿಮ್ಮ ಸ್ಥಾನದ ಬಗ್ಗೆ ನಿಮಗೆ ಅರಿವಿಲ್ಲವಾ? ಸಂಗಮೇಶ್ ಅವರೇ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ. ಶರ್ಟ್ ಬಿಚ್ಚಿಕೊಂಡು ಗಲಾಟೆ ಮಾಡಿದ ನೀವು ಅಶಿಸ್ತಿನಿಂದ ನಡೆದುಕೊಂಡು ಭದ್ರಾವತಿ ಜನತೆಗೆ ಅವಮಾನ ಮಾಡ್ತಿದ್ದೀರಿ. ನಿಮ್ಮ ಕ್ಷೇತ್ರದ ಜನರಿಗೆ ಅಗೌರವ ತೋರುತ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ ಎಂದು ಸ್ಪೀಕರ್ ಕಿಡಿ ಕಾರಿದ್ದರು.
ಸದನದಲ್ಲಿ ಶರ್ಟ್ ಬಿಚ್ಚಿದ ವಿಚಾರವಾಗಿ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್, ಭದ್ರಾವತಿ ಕ್ಷೇತ್ರದಲ್ಲಿ ನನ್ನ ಮೇಲೆ ಬೇಕು ಬೇಕು ಅಂತ ಕೇಸ್ ಹಾಕಿದ್ದಾರೆ. ಸ್ಪೀಕರ್ ಕಾಗೇರಿ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅದಕ್ಕಾಗಿ ನಾನು ಶರ್ಟ್ ಬಿಚ್ಚಿ ಸದನದಲ್ಲಿ ಪ್ರತಿಭಟನೆ ಮಾಡಿದೆ. ಸ್ಪೀಕರ್ ನನ್ನನ್ನು ಹೊರಗೆ ಹಾಕ್ತಾರಾ..? ಹಾಕಲಿ. ನಾನು ನನ್ನ ಕ್ಷೇತ್ರದ ಜನರ ಮನಸ್ಸಲ್ಲಿ ಇದ್ದೇನೆ, ನನಗೆ ಅಷ್ಟೇ ಸಾಕು. ನನಗೆ ಅನ್ಯಾಯ ಆಗಿದೆ, ಅದಕ್ಕೆ ನ್ಯಾಯ ಸಿಗೋವರೆಗೂ ಹೋರಾಟ ಮಾಡ್ತೇನೆ ಎಂದಿದ್ದರು. ಇದೀಗ ಅವರನ್ನು ಸದನದಿಂದ ಹೊರಹಾಕಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ