ಶಿವಮೊಗ್ಗ(ಏ.22): ಚುನಾವಣಾ (karnataka Assembly Elections) ಹೊಸ್ತಿಲಲ್ಲಿ ಸಂಭವಿಸುವ ಬಹುತೇಕ ಘಟನೆಗಳು ಕೋಮು (Communal Clash) ಬಣ್ಣ ಪಡೆಯುವುದು ಸಾಮಾನ್ಯ. ಸದ್ಯ ಭದ್ರಾವತಿಯಲ್ಲಿ ನಡೆದ ಕೊಲೆ ಪ್ರಕರಣವೂ ಅದೇ ಪಟ್ಟಿಗೆ ಸೇರ್ಪಡೆಯಾಗುವ ಲಕ್ಷಣಗಳು ಗೋಚರಿಸಿವೆ. ಹೌದು ಕರ್ನಾಟಕ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಶಿವಮೊಗ್ಗದ ಭದ್ರಾವತಿಯಲ್ಲಿ (Bhadravati) ನಡೆದ ಕೊಲೆ ಪ್ರಕರಣವೊಂದು (Murder Case) ಕೋಮು ಬಣ್ಣ ಪಡೆದಿದೆ. ಆರಂಭದಲ್ಲಿ ಅಷ್ಟೇನೂ ಸದ್ದು ಮಾಡದ ಪ್ರಕರಣ ಇದಾಗಿತ್ತಾದರೂ, ಸದ್ಯ ಪೊಲೀಸರು ಕಹಿ ಘಟನೆಗಳು ನಡೆಯದಿರಲೆಂದು ಭದ್ರತೆ ಹೆಚ್ಚಿಸಿವೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಸಾಯಿನಗರ ನವೀನ್ ಕುಮಾರ್ (22) ಕೊಲೆಗೀಡಾಗಿದ್ದಾನೆ. ಚೂರಿಯಿಂದ ಹಲ್ಲೆ ನಡೆಸಿದ ಗುಂಪು ಬಳಿಕ ಅಲ್ಲಿಂದ ಪರಾರಿಯಾಗಿದೆ. ಆದರೀಗ ಈ ಪ್ರಕರಣ ಭದ್ರಾವತಿಯಲ್ಲಿ ಸಂಚಲನ ಮೂಡಿಸಿದ್ದು, ಸದ್ಯ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರಾವತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇನ್ನು ಕೊಲೆಯಾದ ನವೀನ್ ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ಸರ್ಕಾರಿ ಆಸ್ಪತ್ರೆ ಎದುರು ಸಿಆರ್ಪಿಎಫ್ ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ: Karnataka Election 2023: 'ನನಗೆ ಇಬ್ಬರು ಪತ್ನಿಯರು ಇದ್ದಾರೆ'! ವೈರಲ್ ಆಯ್ತು ಎಎಪಿ ಅಭ್ಯರ್ಥಿಯ ನಾಮಿನೇಷನ್ ಅಫಿಡವಿಟ್
ಯಾರು ಈ ನವೀನ್ ಕುಮಾರ್?
ಗಾರೆ ಕೆಲಸ ಮಾಡಿಕೊಂಡಿದ್ದ ನವೀನ್ ಕುಮಾರ್ ಹಿಂದೆ ಎರಡು ಗಾಂಜಾ ಕೇಸ್ನಲ್ಲಿ ಆರೋಪಿಯಾಗಿದ್ದ. ಈ ಹಿಂದೆ ಸದಾತ್ ಎಂಬುವನ ಹತ್ತಿರ ಮೊಬೈಲ್ ಅಡವಿಟ್ಟಿದ್ದ ನವೀನ್ ಕುಮಾರ್, ನಿನ್ನೆ ಗೆಳೆಯ ಅರುಣ್ ಕುಮಾರ್ ಜತೆಯಲ್ಲಿ ಮೊಬೈಲ್ ಬಿಡಿಸಿಕೊಳ್ಳಲು ಹೋಗಿದ್ದ. ಆದರೆ ಸತ್ಯಸಾಯಿ ನಗರಕ್ಕೆ ಹೋದಾಗ ಗಲಾಟೆ ನಡೆದಿದೆ. ಸಾದತ್, ಸುಹೇಲ್ ಅಲಿಯಾಸ್ ಕೊಲವೇರಿ, ಇತರರು ಸೇರಿ ನವೀನ್ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನವೀನ್ ಬೆನ್ನಿಗೆ ಎರಡು ಕಡೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ನವೀನ್ನನ್ನು ಕೂಡಲೇ ಗೆಳೆಯ ಅರುಣ್ ಆಸ್ಪತ್ರೆ ಕರೆದೊಯ್ದಿದ್ದಾನಾದರೂ ಯಾವುದೇ ಪ್ರಯೋಜನವಾಗಿಲ್ಲ. ದಾರಿ ಮಧ್ಯಯೇ ನವೀನ್ ಕೊನೆಯುಸಿರೆಳೆದಿದ್ದಾನೆ. ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸದ್ಯ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸದ್ಯ ಒಂದೆಡೆ ಚುನಾವಣಾ ಕಣ ರಂಗೇರುತ್ತಿದ್ದು, ಇತ್ತ ಇದೇ ಸಂದರ್ಭದಲ್ಲಿ ಅನ್ಯಕೋಮಿನ ಯುವಕರಿಂದ ಕೊಲೆ ನಡೆದಿದೆ. ಹೀಗಿರುವಾಗ ಭದ್ರಾವತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದು ಯುವಕರು ಭಾರೀ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಅಲ್ಲದೇ ಬಿಜೆಪಿ ಅಭ್ಯರ್ಥಿ ರುದ್ರೇಶ್ ಮಂಗೋಟೆ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ರುದ್ರೇಶ್ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ