news18-kannada Updated:March 4, 2021, 2:55 PM IST
ಶಾಸಕ ಸಂಗಮೇಶ್
ಬೆಂಗಳೂರು (ಮಾ. 4): ಕರ್ನಾಟಕ ಬಜೆಟ್ ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಅವರನ್ನು 1 ವಾರಗಳ ಕಾಲ ಸದನದಿಂದ ಅಮಾನತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಒಂದು ವಾರವಲ್ಲ ಇಡೀ ಸದನ ನನ್ನನ್ನು ಅಮಾನತು ಮಾಡಲಿ, ನನಗೆ ಬೇಸರವಿಲ್ಲ. ದಿನವೂ ನಾನು ಸದನಕ್ಕೆ ಬಂದು ನ್ಯಾಯ ಕೇಳುತ್ತೇನೆ. ನಾನು ನ್ಯಾಯ ಕೇಳೋಕೆ ಹೋದರೆ ಸಸ್ಪೆಂಡ್ ಮಾಡಿದ್ದಾರೆ. ಕರ್ನಾಟಕದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿಯ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯಾ? ಬಿಜೆಪಿಯವರು ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದ ಜನರ ಮನಸ್ಸಲ್ಲಿ ನಾನಿದ್ದೇನೆ. ಜನರ ಸೇವೆ ಮಾಡುತ್ತಿದ್ದೇವೆ. ನಮ್ಮ ಮನೆ ಮುಂದೆ 500 ಪೊಲೀಸರನ್ನು ಇಟ್ಟಿದ್ದಾರೆ. ನನಗಾಗಿ ಅಷ್ಟೊಂದು ಹಣ ಖರ್ಚು ಮಾಡಬೇಕಾ? ಅವರ ಕನಸು ಯಾವತ್ತೂ ನನಸಾಗೋದಿಲ್ಲ. ಬಿಜೆಪಿಯವರಿಗೆ ಭದ್ರಾವತಿಯಲ್ಲಿ ಕ್ಯಾಂಡಿಡೇಟ್ ಇಲ್ಲ. ಕೋಮುವಾದಿಗಳನ್ನ ಭದ್ರಾವತಿಯವರು ಸಹಿಸಲ್ಲ ಎಂದು ಹೇಳಿದ್ದಾರೆ.
ನ್ಯಾಯ ಕೇಳೋಕೆ ಹೋದರೆ ನನ್ನನ್ನು ಸಸ್ಪೆಂಡ್ ಮಾಡುತ್ತಾರೆ. ಇಲ್ಲಸಲ್ಲದ ಕೇಸ್ ಹಾಕಿ ನಮ್ಮನ್ನು ಬಂಧಿಸ್ತಾರೆ. ಸ್ಪೀಕರ್ ಬಿಜೆಪಿ ಏಜೆಂಟ್ ಆಗಿದ್ದಾರಾ ಎಂಬ ಅನುಮಾನ ಬರುತ್ತಿದೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಆಕ್ರೋಶ ಹೊರಹಾಕಿದ್ದಾರೆ.
BK Sangamesh: ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ; ಕಾಂಗ್ರೆಸ್ ಶಾಸಕ ಸಂಗಮೇಶ್ ಸದನದಿಂದ ಅಮಾನತು
ಭದ್ರಾವತಿಯಲ್ಲಿ ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಇಂದು ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಕ್ರೋಶಕ್ಕೂ ಕಾರಣವಾಯಿತು. ಸದನದಲ್ಲಿ ಶರ್ಟ್ ಬಿಚ್ಚಿದ್ದ ಸಂಗಮೇಶ್ ಅವರಿಗೆ ಶಿಕ್ಷೆ ನೀಡಿರುವ ಸ್ಪೀಕರ್ ಕಾಗೇರಿ ಸಂಗಮೇಶ್ ಅವರನ್ನು ಒಂದು ವಾರ ಸದನದಿಂದ ಅಮಾನತು ಮಾಡಿದ್ದಾರೆ. ಸದನದಲ್ಲಿ ಅಸಭ್ಯವಾಗಿ ವರ್ತಿಸಿದ ಸಂಗಮೇಶ್ ಅವರನ್ನು ಅಮಾನತು ಮಾಡಬೇಕೆಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಸದನದಲ್ಲಿ ಮಂಡನೆ ಮಾಡಿದರು. ಅದನ್ನು ಅಂಗೀಕರಿಸಿದ ಸ್ಪೀಕರ್ ಕಾಗೇರಿ 1 ವಾರ ಸಂಗಮೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
1 ವಾರಗಳ ಕಾಲ ಶಾಸಕ ಸಂಗಮೇಶ್ ಅವರಿಗೆ ಸದನಕ್ಕೆ ಬಾರದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ. ಇದಕ್ಕೂ ಮುನ್ನ ಸಂಗಮೇಶ್ ವಿರುದ್ಧ ಆಕ್ರೋಶ ಹೊರಹಾಕಿದ ಸ್ಪೀಕರ್ ಕಾಗೇರಿ, ನೀವೇನು ಬೀದಿಯಿಂದ ಬಂದಿದ್ದೀರ? ನಿಮ್ಮ ಸ್ಥಾನದ ಬಗ್ಗೆ ನಿಮಗೆ ಅರಿವಿಲ್ಲವಾ? ಸಂಗಮೇಶ್ ಅವರೇ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ. ಶರ್ಟ್ ಬಿಚ್ಚಿಕೊಂಡು ಗಲಾಟೆ ಮಾಡಿದ ನೀವು ಅಶಿಸ್ತಿನಿಂದ ನಡೆದುಕೊಂಡು ಭದ್ರಾವತಿ ಜನತೆಗೆ ಅವಮಾನ ಮಾಡ್ತಿದ್ದೀರಿ. ನಿಮ್ಮ ಕ್ಷೇತ್ರದ ಜನರಿಗೆ ಅಗೌರವ ತೋರುತ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ ಎಂದು ಸ್ಪೀಕರ್ ಕಿಡಿ ಕಾರಿದ್ದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕಬಡ್ಡಿ ಪಂದ್ಯಾವಳಿ ನಡೆದ ವೇಳೆ ಗಲಾಟೆ ನಡೆದು, ಭದ್ರಾವತಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ತಂಡ ರನ್ನರ್ ಅಪ್ ಆಗಿತ್ತು. ಆಗ ಆ ತಂಡದವರು ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಪಟಾಕಿ ಸಿಡಿಸಿದ್ದರು. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸಿದ್ದರು. ಇದರಿಂದ ಗಲಾಟೆ ನಡೆದು, ಶಾಸಕ ಸಂಗಮೇಶ್, ಅವರ ಮಗ ಗಣೇಶ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಿಜೆಪಿ ಕಾರ್ಯಕರ್ತರಿಗೂ ಗಾಯಗಳಾಗಿತ್ತು. ಈ ಕುರಿತು ಶಾಸಕ ಸಂಗಮೇಶ್ ವಿರುದ್ಧ ಕೇಸ್ ದಾಖಲಾಗಿತ್ತು. ಅದನ್ನು ವಿರೋಧಿಸಿ ಇಂದು ಸದನದಲ್ಲಿ ಶರ್ಟ್ ಬಿಚ್ಚಿ ಶಾಸಕ ಸಂಗಮೇಶ್ ಪ್ರತಿಭಟಿಸಿದ್ದರು.
Published by:
Sushma Chakre
First published:
March 4, 2021, 2:55 PM IST