ಬೆಂಗಳೂರು (ಜೂನ್ 23); ರಾಜ್ಯದಲ್ಲಿ ಹೆಲಿ ಟೂರಿಸಂ ಅನ್ನು ಅಭಿವೃದ್ಧಿಪಡಿಸಬೇಕು ಎಂಬುದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ. ಇದೇ ಕಾರಣಕ್ಕೆ ಉತ್ತರ ಕರ್ನಾಟಕದ ಹಂಪಿ ಉತ್ಸವ ಮತ್ತು ಮೈಸೂರಿನ ವಿಶ್ವ ವಿಖ್ಯಾತ ದಸರಾ ಉತ್ಸವದ ಸಂದರ್ಭದಲ್ಲಿ ಹೆಲಿಕಾಫ್ಟರ್ ಮೂಲಕ ಕಡಿಮೆ ಖರ್ಚಿನಲ್ಲಿ ಪ್ರವಾಸಿಗರಿಗೆ ಇಡೀ ನಗರವನ್ನು ಸುತ್ತುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಪ್ರವಾಸೋದ್ಯಮ ಇಲಾಖೆ, ಜಕ್ಕೂರ್ ಏರೋಡ್ರೋಮ್ ಸೇರಿದಂತೆ ನಗರದ ಪ್ರಮುಖ ಐದು ವಾಯುನೆಲೆಗಳನ್ನು ಹೆಲಿ-ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಬಳಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಯುವ ಮತ್ತು ಕ್ರೀಡಾ ಸೇವೆಗಳ ಇಲಾಖೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ (ಎಐಐ) ಯಿಂದ ಅನುಮೋದನೆ ಪಡೆದಿದೆ ಎಂದು ತಿಳಿದುಬಂದಿದೆ.
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಈ ಬಗ್ಗೆ ಮಾತನಾಡಿದ್ದು, "ಜಕ್ಕೂರ್ ಅನ್ನು ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಪ್ರವಾಸಿಗರು ಗೋವಾ, ತಮಿಳುನಾಡು, ಪಾಂಡಿಚೆರಿ ಮತ್ತು ಕೇರಳಕ್ಕೆ ಹೆಲಿಕಾಪ್ಟರ್‌ಗಳ ಮೂಲಕ ಕರೆದೊಯ್ಯಲು ಸರ್ಕ್ಯೂಟ್ಗಳನ್ನು ಸಿದ್ಧಪಡಿಸಲಾಗುವುದು. ಹೆಲಿ-ಪ್ರವಾಸೋದ್ಯಮ ಸೇವೆಗಳನ್ನು ವಿವಿಐಪಿಗಳು ಮತ್ತು ತುರ್ತು ಸೇವೆಗಳಿಗೆ ಸಹ ಬಳುಸುವ ಯೋಚನೆ ಇದೆ" ಎಂದು ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, "ಜಕ್ಕೂರ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾದ ಹೆಲಿಪೋರ್ಟ್ ಹೆಲಿಕಾಪ್ಡ್‌ಗಳನ್ನು ಹೊಂದಿದ್ದು, ಒಂದೇ ಸಮಯದಲ್ಲಿ ಆರು ಹೆಲಿಕಾಪ್ಟರ್‌ಗಳನ್ನು ಟೇಕ್-ಆಫ್ ಮಾಡಲು ಮತ್ತು ಇಳಿಯಲು ಸಾಧ್ಯವಾಗುತ್ತದೆ. ಈಗಿನಂತೆ, ಸೇವೆಗಳಿಗಾಗಿ ಮೂರು ಏಜೆನ್ಸಿಗಳನ್ನು ಸಹ ಅಂತಿಮಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಹೊರತಾಗಿ, ಮೈಸೂರು, ಮಂಗಳೂರು, ಬಳ್ಳಾರಿ ಧಾರವಾಡ ಮತ್ತು ಕಲಬುರಗಿ ಸೇರಿದಂತೆ ರಾಜ್ಯದ ಇತರ ಪ್ರದೇಶಗಳಲ್ಲಿ ಹೆಲಿ-ಪ್ರವಾಸೋದ್ಯಮವನ್ನು ಪ್ರಾರಂಭಿಸಲಾಗುವುದು. ಈ ಮೂಲಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅನುವು ಮಾಡಿಕೊಡುವುದು ಪ್ರವಾಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷೆಯಾಗಿದೆ ಎನ್ನಲಾಗುತ್ತಿದೆ.
ಈ ವರ್ಷದ ಏಪ್ರಿಲ್‌ನಲ್ಲಿ, ಮೈಸೂರಿನಿಂದ ಹೆಲಿಕಾಪ್ಟರ್ ಪ್ರವಾಸೋದ್ಯಮವನ್ನು ಆರಂಭಿಸುವುದು ಇಲಾಖೆಯ ಉದ್ದೇಶವಾಗಿತ್ತು. ಆದರೆ, ಸಂಸದ ಪ್ರತಾಪ ಸಿಂಗ್ ಮತ್ತು ಪರಿಸರ ಕಾರ್ಯಕರ್ತರು, ಮೈಸೂರಿನ ರಾಜಮನೆತನದವರು ಈ ಯೋಜನೆಗಾಗಿ ಹೋಟೆಲ್ ಬಳಿ ಮರಗಳನ್ನು ಕಡಿಯುವ ಪ್ರಸ್ತಾಪವನ್ನು ಆಕ್ಷೇಪಿಸಿದ ನಂತರ ವಿವಾದಕ್ಕೀಡಾಗಿ ಯೋಜನೆಯನ್ನು ಕೈಬಿಡಲಾಗಿತ್ತು.
ಪರಿಸರ ಕಾರ್ಯಕರ್ತರ ಪ್ರಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಕುಲಬರಹಳ್ಳಿಯ ನಾಲ್ಕು ಎಕರೆ ಪ್ರದೇಶದಲ್ಲಿ ಲಲಿತಾ ಮಹಲ್ ಪ್ಯಾಲೇಸ್ ಹೋಟೆಲ್ ಎದುರು ವಿವಿಧ ಜಾತಿಯ 150 ಮರಗಳನ್ನು ಕಡಿಯಲು ಉದ್ದೇಶಿಸಿತ್ತು ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಮೈಸೂರಿನಲ್ಲಿ ಈ ಯೋಜನೆಯನ್ನು ಕೈಬಿಡಲಾಗಿದ್ದು, ಈಗಿನಂತೆ ಅರಮನೆ ಹೋಟೆಲ್‌ನಿಂದ ಹೆಲಿ-ಪ್ರವಾಸೋದ್ಯಮವನ್ನು ಪ್ರಾರಂಭಿಸುವ ಯೋಜನೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ