Bengaluru Weather: ಸೋಮವಾರವೂ ಮುಂದುವರಿದ ಮಳೆ; ಇಂದಿನ ಹವಾಮಾನ ಹೇಗಿರಲಿದೆ?
ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
ಬೆಂಗಳೂರು (ಆಗಸ್ಟ್ 31): ಭಾನುವಾರ ರಾತ್ರಿ ಬೆಂಗಳೂರಲ್ಲಿ ಭಾರೀ ಮಳೆಯಾಗಿತ್ತು. ಈ ಮಳೆ ಸೋಮವಾರವೂ ಮುಂದುವರಿದಿದೆ. ಸೋಮವಾರ ರಾತ್ರಿ ವರುಣ ಆರ್ಭಟಿಸಿದ್ದಾನೆ. ರಾತ್ರಿ ಆರಂಭವಾದ ಮಳೆ ಅನೇಕ ಗಂಟೆಗಳ ಕಾಲ ಮುಂದುವರಿದೇ ಇತ್ತು. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಗಾಳಿ ಬೀಸಲು ಆರಂಭವಾಗಿತ್ತು. ಏಕಾಏಕಿ ಕರಿಮೋಡಗಳೆಲ್ಲ ಒಂದೆಡೆ ಸೇರಿ 10 ಗಂಟೆ ಸುಮಾರಿಗೆ ಅಬ್ಬರದ ಮಳೆ ಸುರಿಯಲು ಆರಂಭವಾಗಿತ್ತು. ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್ ಆರ್ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.
ಇನ್ನು, ಅಬ್ಬರದ ಮಳೆಗೆ ರಸ್ತೆಗಳೆಲ್ಲ ಬಹುತೇಕ ನದಿಗಳಂತಾಗಿದ್ದವು. ರಾತ್ರಿಯಾದ್ದರಿಂದ ಯಾರಿಗೂ ಅಷ್ಟೊಂದು ಸಮಸ್ಯೆ ಉಂಟಾಗಿಲ್ಲ. ಇನ್ನು, ಭಾರೀ ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಜನರು ಫ್ಯಾನ್, ಎಸಿ ಇಲ್ಲದೆ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಸೆಖೆ ಕಾಣಿಸಿಕೊಂಡಿತ್ತು. ಯಾಕಿಷ್ಟು ಸೆಖೆಯಪ್ಪ ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ರಾತ್ರಿಯಿಡೀ ಸುರಿದ ಮಳೆ ಬೆಂಗಳೂರನ್ನು ತಂಪಾಗಿಸಿದೆ.
ಇನ್ನೂ ಎರಡು ದಿನ ಮಳೆ?:
ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಿತ್ಯ ಸಂಜೆ ಹಾಗೂ ರಾತ್ರಿ ವೇಳೆಗೆ ಮಳೆ ಆಗುವ ಸಾಧ್ಯತೆ ಇದೆ ಎಂಬುದು ಹವಾಮಾನ ಇಲಾಖೆಯ ಎಚ್ಚರಿಕೆ. ಹೀಗಾಗಿ ಕಚೇರಿಗೆ ಬೈಕ್ನಲ್ಲಿ ತೆರಳುವವರು ಈ ಬಗ್ಗೆ ಕೊಂಚ ಗಮನಸವಹಿಸಬೇಕು.
ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ