ಬೆಂಗಳೂರು: ರಾಜ್ಯದಲ್ಲಿ ಸಿಂಧಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ (by election) ಜೆಡಿಎಸ್(JDS) ಮುಸ್ಲಿಂ ಅಭ್ಯರ್ಥಿಯನ್ನು ಹಾಕಿರುವ ಸಂಬಂಧ ಕಾಂಗ್ರೆಸ್(Congress) ಹಾಗೂ ಜೆಡಿಎಸ್ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ. ವಾಗ್ದಾಳಿ ಅಖಾಡಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan)ಎಂಟ್ರಿ ಕೊಟ್ಟಿದ್ದು ಇಂದು ಸುದ್ದಿಗೋಷ್ಠಿ ನಡೆಸಿದರು. ಸಿದ್ದರಾಮಯ್ಯರನ್ನು (siddaramaiah) ಸಮರ್ಥಿಸಿಕೊಂಡ ಜಮೀರ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ನಡೆಸಿದ ವೇಳೆ 20 ತಿಂಗಳುಗಳ ಬಳಿಕ ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡದಿರಲು ಹೊಟ್ಟೆಕಿಚ್ಚು ಕಾರಣ. ಬಿಎಸ್ವೈಗೆ ಅಧಿಕಾರ ಕೊಟ್ಟರೆ ರೇವಣ್ಣ ಡಿಸಿಎಂ ಆಗುತ್ತಾರೆ ಎಂಬುದನ್ನು ಸಹಿಸದೇ ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಕುಮಾರಸ್ವಾಮಿ ಸ್ವಂತ ಅಣ್ಣನನ್ನೇ ಸಹಿಸಿಕೊಳ್ಳಲಿಲ್ಲ
ಎಚ್.ಡಿ ರೇವಣ್ಣ ಡಿಸಿಎಂ ಆಗ್ತಾರೆ ಅನ್ನೋ ಕಾರಣಕ್ಕೆ ಅಂದು ಕುಮಾರಸ್ವಾಮಿ ಬಿಎಸ್ ವೈ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಸ್ವತಃ ಅವರ ಅಣ್ಣ ಬೆಳೆಯೊದನ್ನ ಕುಮಾರಸ್ವಾಮಿ ಸಹಿಸಲಿಲ್ಲ. ಇನ್ನು ಅಲ್ಪಸಂಖ್ಯಾತರು ಬೆಳೆಯೋದನ್ನ ಕುಮಾರಸ್ವಾಮಿ ಸಹಿಸ್ತಾರಾ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲ. ದೇವೇಗೌಡರು ಜಾತ್ಯತೀತ ನಾಯಕ, ಆದರೆ ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರಸೆಂಟ್ ಸಹ ಇಲ್ಲ ಎಂದರು. ಫಾರುಕ್ ಅವರನ್ನ ಮಂತ್ರಿ ಮಾಡಲಿಲ್ಲ. ಫಾರುಕ್ ಅವರನ್ನ ಡಿಸಿಎಂ ಮಾಡಿ ಹೋಮ್ ಮಿನಿಸ್ಟರ್ ಮಾಡ್ತೇನೆ ಎಂದಿದ್ರು. ಫಾರುಕ್ ಅವರನ್ನ ಮಂತ್ರಿ ಮಾಡಿದ್ರಾ ಕುಮಾರಸ್ವಾಮಿ ಅವರೇ?
ಸಿದ್ದರಾಮಯ್ಯ ನನ್ನನ್ನು ಮುಗಿಸಬಹುದಿತ್ತು, ಆದರೆ ಬೆಳೆಸಿದರು
ಸಿದ್ದರಾಮಯ್ಯಗೆ ಬೆಳೆಸೋದು ಮಾತ್ರ ಗೊತ್ತು, ಯಾರನ್ನು ಮುಗಿಸೋದು ಅವರಿಗೆ ಗೊತ್ತಿಲ್ಲ. ನಾನು 2002 ರಿಂದ ಜೆಡಿಎಸ್ ಪಕ್ಷದಲ್ಲೇ ಇದ್ದವನು, ದೇವೇಗೌಡರು, ಕುಮಾರಸ್ವಾಮಿಯವರ ಜೊತೆ ಇದ್ದವನು. ಆಗ ಸಿದ್ದರಾಮಯ್ಯನವರಿಗೂ ಕುಮಾರಸ್ವಾಮಿಗೂ ಹೀಗೆ ಆಗ್ತಿರಲಿಲ್ಲ. ಕುಮಾರಸ್ವಾಮಿಗೂ ಸಿದ್ದರಾಮಯ್ಯಗೂ ಆಗಲ್ಲ ಅನ್ನೋ ಕಾರಣಕ್ಕೆ ನಾನೂ ಸಿದ್ದರಾಮಯ್ಯ ವಿರುದ್ಧ ಆಗ ನಿಲ್ಲುತ್ತಿದ್ದೆ, ಕುಮಾರಸ್ವಾಮಿ ಪರ ನಿಲ್ಲುತ್ತಿದ್ದೆ. ಅದನ್ನು ನೆನಪಿಸಿಕೊಂಡು ನಾವು ಕಾಂಗ್ರೆಸ್ ಗೆ ಬಂದ ಮೇಲೆ ಸಿದ್ದರಾಮಯ್ಯ ನಮ್ಮನ್ನು ಮುಗಿಸಬಹುದಿತ್ತು. ಆದರೆ ಸಿದ್ದರಾಮಯ್ಯ ನಮ್ಮನ್ನು ಬೆಳೆಸಿದರು. ನನಗೆ ನಾಲ್ಕು ನಾಲ್ಕು ಖಾತೆ ಕೊಡಿಸಿದ್ದು ಸಿದ್ದರಾಮಯ್ಯ. ಆದರೆ ಕುಮಾರಸ್ವಾಮಿ ನನಗೆ ಕೇವಲ ವಕ್ಫ್ ಮತ್ತು ಹಜ್ ಖಾತೆ ಮಾತ್ರ ಕೊಟ್ಟಿದ್ದು. ನನಗೆ ಮಿನಿಸ್ಟರ್ ಮಾಡಿ ಆಹಾರ ಖಾತೆ, ನಾಗರಿಕ ವ್ಯವಹಾರಗಳ ಖಾತೆ, ವಕ್ಫ್ ಹಾಗೂ ಹಜ್ ನಾಲ್ಕು ಖಾತೆ ಕೊಡಿಸಿದ್ದು ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕನನ್ನು ಹಾಡಿ ಹೊಗಳಿದರು.
ಇದನ್ನೂ ಓದಿ: Operation Congress: ಬೆಳಗಾವಿಯಲ್ಲಿ ಆಪರೇಷನ್ ಕಾಂಗ್ರೆಸ್; ರಮೇಶ್ ಜಾರಕಿಹೊಳಿಗೆ ಫೈಟ್ ಕೊಡಲು ಪೂಜಾರಿಗೆ ಗಾಳ..!
ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾ?
ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆಸುತ್ತಾರೆ ಹೊರತು ರಾಜಕೀಯವಾಗಿ ಯಾರನ್ನೂ ಮುಗಿಸಲ್ಲ. ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ಕೊಟ್ಟಿದ್ರು, ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾ. ನಾನು ಕಾಂಗ್ರೆಸ್ಗೆ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ರು. ಜಾಫರ್ ಷೇರಿಫ್ ಮೊಮ್ಮಗನನ್ನ ಮುಗಿಸಿದ್ದು ಕುಮಾರಸ್ವಾಮಿ. ಆಗ ನಾನು ಮುಸ್ಲಿಂರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದೆ. ದೇವೇಗೌಡರ ಬಳಿಯೂ ಕೇಳಿಕೊಂಡೆ, ಅದಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ ಎಂದರು.
ಅಲ್ಪಸಂಖ್ಯಾತರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ
ದೇವೇಗೌಡರು ನನ್ನನ್ನು ಮೀರ್ ಸಾದಿಕ್ ಎಂದು ಕರೆದ್ರು. ನಾನು ಅಭ್ಯರ್ಥಿ ಹಾಕಬೇಡಿ ಎಂದು ಹೇಳಿದ್ರು ಹಾಕಿದ್ರು ಇದು ನಿಮ್ಮ ಮುಸ್ಲಿಂ ಮೇಲಿನ ಕಾಳಜಿಯೇ ಕುಮಾರಸ್ವಾಮಿ. ಅಂದು ಬೈರತಿ ಸುರೇಶ್ ಗೆ ಮತಹಾಕಿಸಲು ಎಷ್ಟಕ್ಕೆ ಡೀಲ್ ಮಾಡಿದ್ರೀ. ಅಲ್ಪಸಂಖ್ಯಾತರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ನಮ್ಮಲ್ಲಿ ಹೈಕಮಾಂಡ್ ಕೇಳಬೇಕು, ಆದರೆ ನೀವು ದೆಹಲಿಗೆ ಹೋಗಬೇಕಿಲ್ಲ. ನೀವು ಪದ್ಮನಾಭ ನಗರದಲ್ಲಿ ಅನೌನ್ಸ್ ಮಾಡಬಹುದು, ಮಾಡಿ ಎಂದು ಜೆಡಿಎಸ್ ನಾಯಕರಿಗೆ ಜಮೀರ್ ಅಹಮದ್ ಖಾನ್ ಸವಾಲು ಹಾಕಿದರು.
ಇದನ್ನೂ ಓದಿ: ಬಾರಪ್ಪ ಬಾ.. ಸಿದ್ದರಾಮಣ್ಣ ಬಾ.. ಬಂದು ನೋಡಪ್ಪ.. ಚುನಾವಣಾ ಪ್ರಚಾರದ ವೇಳೆ CM Bommai ಲೇವಡಿ
ಸಿ.ಎಂ.ಇಬ್ರಾಹಿಂ ವಿರುದ್ಧ ಜಮೀರ್ ವಾಗ್ದಾಳಿ
ರಾಮನಗರ ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಬೈ ಎಲೆಕ್ಷನ್ ನಲ್ಲೂ ಅದ್ರೂ ಹೇಳಬೇಕಿತ್ತು, ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು. ಮುಸ್ಲಿಂ ಪರ ಕಾಳಜಿ ತೋರಿಸಬೇಕಿತ್ತು ಎಂದು ಕುಟುಕಿದರು. ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರ, ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು. ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್ ಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದ್ರು ಎಂದು ಹೇಳಿದ್ದಾರೆ. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ಎಂದು ಇಬ್ರಾಹಿಂ ವಿರುದ್ಧ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ