Murder: ಕೊಲೆಯಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕಥೆ! ಮಾಜಿ ಪ್ರೇಮಿಯಿಂದ ಯುವಕನ ಕೊಲೆ
ಆಕೆ ಆತನ ಪ್ರೇಯಸಿ. ಮತ್ತೊಬ್ಬ ಆಕೆಯ ಮಾಜಿ ಪ್ರಿಯಕರ. ಇಬ್ಬರ ನಡುವೆ ಆಕೆ ವಿಚಾರಕ್ಕೆ ಗಲಾಟೆ ನಡೆದಿದೆ. ಇದೀಗ ಮಾಜಿ ಲವರ್, ಹಾಲಿ ಲವರ್ ಮೇಲೆ ಹಲ್ಲೆ ಮಾಡಿ, ಆತನ ಸಾವಿಗೆ ಕಾರಣನಾಗಿದ್ದಾನೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಯುವಕನೊಬ್ಬನ (Boy) ಬರ್ಬರ ಹತ್ಯೆ (Murder) ನಡೆದಿದೆ. ಯುವಕನನ್ನು ಆತನ ಪ್ರೇಯಸಿಯ (Lover) ಮಾಜಿ ಪ್ರೇಮಿ (Ex-Lover) ಬರ್ಬರವಾಗಿ ಕೊಂದಿದ್ದಾನೆ. ತನ್ನ ಸ್ನೇಹಿತರೊಂದಿಗೆ (Friends) ಬಂದ ಆತ, ಯುವಕನನ ಮೇಲೆ ಹಲ್ಲೆ (Attack) ಮಾಡಿ, ಮಾರಣಾಂತಿಕವಾಗಿ ಗಾಯಗೊಳಿಸಿದ್ದ. ಪರಿಣಾಮ ಆಸ್ಪತ್ರೆಗೆ (Hospital) ದಾಖಲಿಸಿ, ಚಿಕಿತ್ಸೆ (Treatment) ಕೊಡಿಸಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾನೆ. ಹಾಗಿದ್ರೆ ಕೊನೆಯುಸಿರೆಳೆದ ಯುವಕ ಯಾರು? ಆತನ ಮೇಲೆ ಪ್ರೇಯಸಿಯ ಮಾಜಿ ಪ್ರೇಮಿ ಹಲ್ಲೆ ಮಾಡಿದ್ದೇಕೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸಮರ್ಥ್ ನಾಯರ್ ಎಂಬಾತನೇ ಕೊಲೆಯಾದ ಯುವಕ. ಶಿವಮೊಗ್ಗ ಮೂಲದ ಸಮರ್ಥ್ ನಾಯರ್ನ ಮೇಲೆ ಭೀಕರವಾಗಿ ಹಲ್ಲೆ ನಡೆದಿದ್ದು, ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲೇ ಸಮರ್ಥ್ ಸಾವನ್ನಪ್ಪಿದ್ದಾನೆ.
ಪ್ರೇಯಸಿಯ ಮಾಜಿ ಪ್ರಿಯಕರನಿಂದ ಹತ್ಯೆ
ಕಿರಣ್ ಎಂಬಾತನೇ ಸಮರ್ಥ್ನ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದ ಆರೋಪಿ. ಸಮರ್ಥ್ ಭದ್ರಾವತಿ ಮೂಲದ ಯುವತಿ ಒಬ್ಬಳನ್ನು ಪ್ರೀತಿಸುತ್ತಾ ಇದ್ದ. ಆದರೆ ಆಕೆ ಇದಕ್ಕೂ ಮುನ್ನ ಕಿರಣ್ ಎಂಬಾತನನ್ನು ಪ್ರೀತಿಸುತ್ತಾ ಇದ್ದಳು. ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಆ ಯುವತಿ ಪ್ರೀತಿಸುತ್ತಾ ಇದ್ದರು ಎನ್ನಲಾಗಿದೆ. ಆದರೆ ಯಾವುದೋ ಕಾರಣಕ್ಕೆ ಪ್ರೇಮಿಗಳಿಬ್ಬರು ಮುನಿಸಿಕೊಂಡು, ಬೇರೆ ಬೇರೆ ಆಗಿದ್ದರು. ಇದಾದ ಬಳಿಕ ಆಕೆಗೆ ಸಮರ್ಥ್ ನಾಯರ್ ಪರಿಚಯ ಆಗಿತ್ತು. ಪರಿಚಯ ಸಲುಗೆಗೆ ತಿರುಗಿ, ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಇದ್ದರು.
ಶನಿವಾರ ಮೃತ ಸಮರ್ಥ್ ನಾಯರ್ ಹಾಗೂ ಆತನನ್ನು ಪ್ರೀತಿಸುತ್ತಾ ಇದ್ದ ಯುವತಿ ಒಟ್ಟಿಗೆ ಇದ್ದರು. ವೀಕೆಂಡ್ ಅಂತ ಖುಷಿ ಖುಷಿಯಾಗಿ ಇದ್ದರು. ಈ ವೇಳೆ ಅಲ್ಲಿಗೆ ಕಿರಣ್ ಎಂಟ್ರಿಕೊಟ್ಟಿದ್ದ.
ಕಿರಣ್ ಹಾಗೂ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ
ಪ್ರೇಮಿಗಳು ಜೊತೆ ಇದ್ದಾಗ ಯುವತಿಯ ಮಾಜಿ ಪ್ರೇಮಿ ಕಿರಣ್, ತನ್ನ ಸ್ನೇಹಿತರಾದ ಅರುಣ್ ಹಾಗೂ ರಾಕೇಶ್ ಎಂಬುವರ ಜೊತೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ. ಬಂದವರು ಏಕಾಏಕಿ ಸಮರ್ಥ್ ನಾಯರ್ ಮೇಲೆ ಮೇಲೆ ಕಿರಣ್ ಆ್ಯಂಡ್ ಟೀಂ ಹಲ್ಲೆ ನಡೆಸಿದೆ. ಸಮರ್ಥ್ ತಲೆಗೆ ಕಾಲಿನಿಂದ ಒದ್ದು, ಗೋಡೆಗೆ ತಲೆ ಹಿಡಿದು ಚಚ್ಚಿದ್ದಾರೆ. ಈ ವೇಳೆ ಸಮರ್ಥ್ ನಾಯರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಗ ಆರೋಪಿಗಳು ಎಸ್ಕೇಪ್ ಆಗಿದ್ದರು.
ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಸಮರ್ಥ್ ಸಾವು
ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಸಮರ್ಥ್ ನಾಯರ್ನನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆತನನ್ನು ಉಳಿಸಲು ಸತತ ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಮರ್ಥ್ ನಾಯರ್ ಮೃತಪಟ್ಟಿದ್ದಾನೆ.
ಇನ್ನು ಸಮರ್ಥ್ ಮೇಲಿನ ಹಲ್ಲೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮುಖ್ಯ ಆರೋಪಿ ಕಿರಣ್ ಹಾಗೂ ಆತನ ಸ್ನೇಹಿತರಾದ ಕಿರಣ್, ಅರುಣ್ ಮತ್ತು ರಾಕೇಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.