• Home
 • »
 • News
 • »
 • state
 • »
 • BJP Decision: ರಾಜ್ಯಸಭೆಗೆ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್, ವಿಧಾನ ಪರಿಷತ್ತಿಗೆ ವಿಜಯೇಂದ್ರ ಹೆಸರು ಶಿಫಾರಸು

BJP Decision: ರಾಜ್ಯಸಭೆಗೆ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್, ವಿಧಾನ ಪರಿಷತ್ತಿಗೆ ವಿಜಯೇಂದ್ರ ಹೆಸರು ಶಿಫಾರಸು

ನಿರ್ಮಲಾ ಸೀತಾರಾಮನ್​, ವಿಜಯೇಂದ್ರ

ನಿರ್ಮಲಾ ಸೀತಾರಾಮನ್​, ವಿಜಯೇಂದ್ರ

ರಾಜ್ಯಸಭೆಯ 2 ಹಾಗೂ ರಾಜ್ಯ ವಿಧಾನ ಪರಿಷತ್ತಿನ 4 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಪ್ರತಿ ಸ್ಥಾನಕ್ಕೆ 5 ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ  ಬಿಜೆಪಿ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿದೆ.

 • Share this:

  ಬೆಂಗಳೂರು (ಮೇ 14): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  (B.S Yeddiyurappa) ಅವರ ಪುತ್ರ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ವಿಧಾನ ಪರಿಷತ್ (Legislative Council) ಸದಸ್ಯರನ್ನಾಗಿ  ಮಾಡಲು ಬಿಜೆಪಿ ಕೋರ್ ಕಮಿಟಿಯಲ್ಲಿ  ತೀರ್ಮಾನಿಸಲಾಗಿದೆ.  ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಮಹತ್ವದ ಕೋರ್ ಕಮಿಟಿ ಸಭೆ ನಡೆದಿದ್ದು, ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಜೊತೆಗೆ ಕೇಂದ್ರ ವಿತ್ತ ಸಚಿವೆ ನಿರ್ಮನಾ ಸೀತಾರಾಮನ್ (Nirmala Sitharaman) ಅವರನ್ನು ಮತ್ತೊಮ್ಮೆ ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. 


  ರಾಜ್ಯಸಭೆಯ 2 ಹಾಗೂ ರಾಜ್ಯ ವಿಧಾನ ಪರಿಷತ್ತಿನ 4 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಪ್ರತಿ ಸ್ಥಾನಕ್ಕೆ 5 ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ  ಬಿಜೆಪಿ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿದೆ.


  ರಾಜ್ಯದಿಂದ ಮತ್ತೊಮ್ಮೆ ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್


  ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅವುಗಳಲ್ಲಿ 2 ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾ ಬಲವಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದಿಂದ ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದ್ದು, ಒಂದು ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಮಾತ್ರ ಕಳುಹಿಸಲು ಸೂಚಿಸಿತ್ತು. ಹೀಗಾಗಿ ಒಂದು ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.


  Interim Injunction: ಪೀಠಾರೋಹಣಕ್ಕೆ ಕೋರ್ಟ್ ಬ್ರೇಕ್, ಅಡೆತಡೆಯಿಲ್ಲದೆ ಕಾರ್ಯಕ್ರಮ ನಡೆಯುತ್ತೆ-ಬಿ.ಜೆ ಪುಟ್ಟಸ್ವಾಮಿ


  ರಾಜ್ಯಸಭೆಯ ಎರಡನೇ ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.‌ ರಾಮಮೂರ್ತಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ವಿಧಾನ ಪರಿಷತ್ ಸದಸ್ಯ ಲಹರ್ ಸಿಂಗ್ ಸೇರಿದಂತೆ ಐವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಕೆ.ಸಿ. ರಾಮಮೂರ್ತಿ ಅವರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಅಷ್ಟೇನೂ ಒಲವು ಹೊಂದಿಲ್ಲ ಎನ್ನಲಾಗಿದೆ. ಬಿಜೆಪಿ ಸೇರ್ಪಡೆಯಾಗಿ ರಾಜ್ಯಸಭಾ ಸದಸ್ಯರಾದ ಬಳಿಕ ಪಕ್ಷದ ಜೊತೆ ಮತ್ತು ಪಕ್ಷದ ನಾಯಕರ  ಅಷ್ಟೇನೂ ಒಡನಾಟ ಹೊಂದಿರಲಿಲ್ಲ ಎಂಬ ಕಾರಣಕ್ಕೆ ರಾಮಮೂರ್ತಿ ಬಗ್ಗೆ ರಾಜ್ಯ ನಾಯಕರು ಹೆಚ್ಚು ಒಲವು ಹೊಂದಿಲ್ಲ.


  ವಿಧಾನ ಪರಿಷತ್ತಿಗೆ ಬಿ.ವೈ. ವಿಜಯೇಂದ್ರ?


  ಇನ್ನು ವಿಧಾನಸಭೆಯಿಂದ ವಿಧಾನ ಪರಿಷತ್ತಿನ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಒಂದು ಸ್ಥಾನಕ್ಕೆ ಐವರು ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡಲು ತೀರ್ಮಾನಿಸಲಾಗಿದ್ದು, ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.


  ಬಿ.ಎಸ್. ಯಡಿಯೂರಪ್ಪ ಅವರಿಂದ ಪ್ರಸ್ತಾಪ


  ಸಭೆಯಲ್ಲಿ ಬಿ.ವೈ. ವಿಜಯೇಂದ್ರ ಹೆಸರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾವು ಹೆಸರು ಕಳುಹಿಸುತ್ತೇವೆ, ಮೇಲಿನವರು ತೀರ್ಮಾನ ಮಾಡುತ್ತಾರೆ ಎಂದರು ಎನ್ನಲಾಗಿದೆ. ಒಟ್ಟಾರೆ ವಿಜಯೇಂದ್ರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ.


  ಆ ಮೂಲಕ ವಿಜಯೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸುವ ಕಸರತ್ತನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಿಜೆಪಿ ವಲಯದಿಂದ ಕೇಳಿ ಬಂದಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ವಿಜಯೇಂದ್ರ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅದಕ್ಕೂ ಮೊದಲೇ ಪುತ್ರನಿಗೆ ಮಂತ್ರಿ ಪಟ್ಟ ಕಟ್ಟಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.


  ಸಾಮಾಜಿಕ ನ್ಯಾಯದಡಿ ಅಭ್ಯರ್ಥಿಗಳ ಆಯ್ಕೆ


  ವಿಧಾನ ಪರಿಷತ್ ಚುನಾವಣೆಗೆ ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗಗಳೂ ಸೇರಿದಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಆಧಾರದಲ್ಲಿ 1:5 ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗಿದೆ. ಎಸ್​ಟಿ ವಿಭಾಗದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಮತ್ತು ಓಬಿಸಿ ವಿಭಾಗದಲ್ಲಿ ಓಬಿಸಿ ಮೋರ್ಛಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ಹೆಸರು ಶಿಫಾರಸು ಮಾಡಲಾಗಿದೆ.


  ಇದನ್ನೂ ಓದಿ:  Male Mahadeshwara Temple: 34 ದಿನಗಳಲ್ಲಿ 2 ಕೋಟಿಗೂ ಅಧಿಕ ನಗದು, 127 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಸಂಗ್ರಹ


  ಜೊತೆಗೆ ಎಂ. ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಹಾಲಿ ಸದಸ್ಯ ಲಕ್ಷ್ಮಣ ಸವದಿ, ಎಸ್​ಸಿ ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ 20 ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಇನ್ನು ಕಲೆ, ಸಾಹಿತ್ಯ, ಸಿನಿಮಾ ಕ್ಷೇತ್ರದಿಂದ ಸಾರ್ವಜನಿಕ ರಂಗದಲ್ಲಿರುವ ಒಬ್ಬ ಅಭ್ಯರ್ಥಿ ಆಯ್ಕೆ ಮಾಡುವ ಬಗ್ಗೆ ಕೂಡಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ.


  ವರದಿ;  ಅನಿಲ್ ಬಾಸೂರ್

  Published by:Pavana HS
  First published: