ಬೆಂಗಳೂರಿನ 25 ವರ್ಷದ ವಿಭಾ ಹೆಸರು ಫೋರ್ಬ್ಸ್ ಪಟ್ಟಿಯಲ್ಲಿ; ಒಂದೇ ವರ್ಷದಲ್ಲಿ ಲಾಭದಾಯಕ ಉದ್ಯಮ ರೂಪಿಸಿದ ಹುಡುಗಿ

ಎಂಜಿನಿಯರಿಂಗ್ ಮಾಡಿ 24ನೇ ವಯಸ್ಸಿಗೆ ಸ್ವಂತ ಕಂಪನಿ ಸ್ಥಾಪಿಸಿ ಜನರಿಗೆ ಪೌಷ್ಠಿಕ ಆಹಾರದ ಉತ್ಪನ್ನಗಳನ್ನ ತಯಾರಿಸಿಕೊಡುತ್ತಾ ಲಾಭದಾಯಕ ಉದ್ಯಮವಾಗಿ ರೂಪಿಸಿದ್ದಾರೆ ವಿಭಾ ಹರೀಶ್.

ವಿಭಾ ಹರೀಶ್

ವಿಭಾ ಹರೀಶ್

  • News18
  • Last Updated :
  • Share this:
ಬೆಂಗಳೂರು: ಬ್ಯುಸಿನೆಸ್ ಎನ್ನುವುದು ಲಾಭದಾಯಕವೂ ಹೌದು, ಅಷ್ಟೇ ರಿಸ್ಕ್ ಕೂಡ ಹೌದು. ಅದೆಷ್ಟೋ ಉದ್ಯಮಗಳು ಹೇಳಹೆಸರಿಲ್ಲದಂತೆ ಮುಚ್ಚಿಹೋಗಿ ಬಂಡವಾಳ ಹಾಕಿದವರನ್ನೂ ಮುಳುಗಿಸಿದ್ದಿದೆ. ಅದರಲ್ಲೂ ಕಳೆದ ವರ್ಷ ಕೊರೋನಾ ತಂದಿತ್ತ ಸಂಕಷ್ಟದ ಕಾಲಘಟ್ಟದಲ್ಲಿ ಮುಳುಗಿಹೋದ ಉದ್ಯಮಗಳಿಗೆ ಲೆಕ್ಕವೇ ಇಲ್ಲ. ಇಂಥ ಸನ್ನಿವೇಶದಲ್ಲೂ ಕೆಲ ಉದ್ಯಮಿಗಳು ವಿಭಿನ್ನ ಹಾದಿ ತುಳಿದು ಲಾಭ ಮಾಡಿಕೊಂಡ ಉದಾಹರಣೆಗಳೂ ಇವೆ. ಇಂಥವರಲ್ಲಿ ಬೆಂಗಳೂರಿನ ವಿಭಾ ಹರೀಶ್ ಕೂಡ ಒಬ್ಬರು. ಇವರ ಕಾಸ್ಮಿಕ್ಸ್ (Cosmix) ಎಂಬ ಹರ್ಬಲ್ ಉತ್ಪನ್ನಗಳ ಕಂಪನಿ ಒಂದೇ ವರ್ಷದಲ್ಲಿ ಲಾಭದಾಯಕ ಎನಿಸಿದೆ. ಅಂತೆಯೇ, ಫೋರ್ಬ್ಸ್ ಸಂಸ್ಥೆ 30 ವರ್ಷ ವಯೋಮಾನದ ಏಷ್ಯನ್ ಉದ್ಯಮಗಳ ಟಾಪ್-30 ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ವಿಭಾ ಹರೀಶ್ ಅವರು ಸ್ಥಾನ ಪಡೆದಿದ್ದಾರೆ. ಉದ್ಯಮ ಆರಂಭಿಸಿದ ಒಂದೇ ವರ್ಷದಲ್ಲಿ ಫೋರ್ಬ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಕಡಿಮೆ ವಿಚಾರವೇನಲ್ಲ.

ಎಂಜಿನಿಯರಿಂಗ್ ಓದಿರುವ ವಿಭಾ ಹರೀಶ್ ಅವರಿಗೆ ಉದ್ಯಮವನ್ನು ಲಾಭದಾಯಕವಾಗಿ ಮಾಡುವುದಷ್ಟೇ ಅಲ್ಲ, ಸಮಾಜಕ್ಕೆ ಒಳಿತಾಗುವ ಉದ್ಯಮವಾಗಬೇಕೆಂಬುದು ಗುರಿ. ಗ್ರಾಮೀಣ ಭಾಗದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಕಾರ್ಯದಲ್ಲಿ ಈಕೆ ಸಹಾಯವಾಗುತ್ತಿದ್ದಾರೆ. ಫೋರ್ಬ್ಸ್ ಸಂಸ್ಥೆ ಕೂಡ ಈಕೆಯ ಸಮಾಜಮುಖಿ ಕೈಂಕರ್ಯವನ್ನು ಪ್ರಶಂಸಿಸಿದೆ. ತನ್ನ ಪಟ್ಟಿಯಲ್ಲಿ ಈಕೆ ಹಾಗೂ ಕಾಸ್ಮಿಕ್ಸ್ ಬಗ್ಗೆ ಫೋರ್ಬ್ಸ್ ಬರೆದುಕೊಂಡಿರುವುದು ಹೀಗೆ:

“ಬೆಂಗಳೂರಿನ ಈ ಸ್ಟಾರ್ಟಪ್ ಹಣ್ಣು, ಬೇರು, ಸಸ್ಯಗಳಿಂದ ಪೌಷ್ಟಿಕ ಪುಡಿ ಉತ್ಪನ್ನಗಳನ್ನ ತಯಾರಿಸುತ್ತದೆ. ಇದು ವ್ಯಕ್ತಿಯ ದೇಹದ ರೋಗನಿರೋಧಕತೆಯನ್ನ ಹೆಚ್ಚಿಸುತ್ತದೆ, ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ ಎಂಬುದು ಈ ಕಂಪನಿಯ ಅನಿಸಿಕೆ… ಈ ಸ್ಟಾರ್ಟಪ್​ನ ಸ್ಥಾಪಕಿ ವಿಭಾ ಅವರು ತಮಗೆ ಬಂದ ಲಾಭದಲ್ಲಿ ಕಂಪನಿಯ ಎಲ್ಲರಿಗೂ ಪೌಷ್ಟಿಕ ಆಹಾರ ಯೋಜನೆಗೆ ಹಣ ಒದಗಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುವ ಮಕ್ಕಳಿಗೆ ಈ ಯೋಜನೆ ಅಡಿ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ” ಎಂದು ಫೋರ್ಬ್ಸ್ ಬರೆದಿದೆ.

ಇದನ್ನೂ ಓದಿ: Sumitra Mahajan - ವೈರಲ್ ಆಯಿತು ಸುಮಿತ್ರಾ ಮಹಾಜನ್ ಸಾವಿನ ಫೇಕ್ ಸುದ್ದಿ; ಟ್ವೀಟ್ ಡಿಲೀಟ್ ಮಾಡಿದ ತರೂರ್

ಒಂದು ವರ್ಷದ ಹಿಂದೆ ಪ್ರಾರಂಭಗೊಂಡ ಕಾಸ್ಮಿಕ್ಸ್ ಕಂಪನಿ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲೊಂದೆನಿಸಿದೆ. ಒಂದೇ ವರ್ಷದಲ್ಲಿ ಇದರ ವಹಿವಾಟು 2 ಕೋಟಿಯಷ್ಟಿದೆ. ಅಂದಹಾಗೆ, ವಿಭಾ ಹರೀಶ್ ಅವರು ತಾನು ಕೇವಲ ಲಾಭಕ್ಕಾಗಿ ಹರ್ಬಲ್ ಉತ್ಪನ್ನಗಳ ಉದ್ಯಮ ಸ್ಥಾಪನೆ ಮಾಡಿದ್ದಲ್ಲ ಎಂದನ್ನುತ್ತಾರೆ.

ವಿಭಾ ಹರೀಶ್ ಅವರು ಹದಿಹರೆಯದ ವಯಸ್ಸಿನಲ್ಲಿದ್ದಾಗ ಬಾಧಿಸುತ್ತಿದ್ದ ಆರೋಗ್ಯ ಸಮಸ್ಯೆಯು ಈಕೆಯನ್ನು ಮಹಿಳೆಯರಿಗೆ ಇರುವ ಪೌಷ್ಟಿಕಾಂಶ ಕೊರತೆಯ ಸಮಸ್ಯೆಯತ್ತ ಗಮನ ಸೆಳೆಯುವಂತೆ ಮಾಡಿತ್ತು. “ಆಲೋಪಥಿ ಔಷಧದ ಬದಲು ಹರ್ಬಲ್ ಔಷಧವನ್ನು ಸೇವಿಸುವಂತೆ ನನ್ನ ತಾಯಿ ಸಲಹೆ ನೀಡುತ್ತಿದ್ದರು. ಅದರಂತೆ ನಾನು ಸಸ್ಯಾಧಾರಿತ ಔಷಧಗಳನ್ನ ಬಳಸತೊಡಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಟ್ರೆಂಡಿಂಗ್ ಆಗಿರುವ ಹರ್ಬಲಿಸಮ್ ಹಾಗೂ ನಮ್ಮ ದೇಶದ್ದೇ ಆದ ಆಯುರ್ವೇದ ವಿಧಾನದಿಂದ ಪ್ರೇರಿತನಾಗಿ ನಾನು ನನ್ನ ಮೇಲೆಯೇ ಪ್ರಯೋಗ ಮಾಡಿಕೊಳ್ಳಲು ಆರಂಭಿಸಿದೆ” ಎಂದು ಕಾಸ್ಮಿಕ್ಸ್ ಕಂಪನಿ ಸ್ಥಾಪನೆಗೂ ಮುನ್ನ ತನ್ನ ಹಿನ್ನೆಲೆ ಬಿಚ್ಚಿಡುತ್ತಾರೆ ವಿಭಾ.

“ನನ್ನ ಸ್ವಂತ ಆಸಕ್ತಿಯಿಂದ ನಾನು ಹರ್ಬಲಿಸಮ್ ಅನ್ನು ಕಲಿಯತೊಡಗಿದೆ. ಈ ಉತ್ಪನ್ನಗಳ ಬಗ್ಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರದೇ ಇರುವುದರಿಂದ ಇವುಗಳನ್ನ ಸರಿಯಾಗಿ ಮಾರ್ಕೆಂಟ್ ಮಾಡಲಾಗುತ್ತಿಲ್ಲ ಎಂದನಿಸಿತು. ನಾನು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಮಾಡಿದ್ದೂ ಕೂಡ ನನ್ನ ಕಂಪನಿಯ ವ್ಯವಹಾರಕ್ಕೆ ಅನುಕೂಲವಾಯಿತು” ಎಂದು ವಿಭಾ ಹರೀಶ್ ಹೇಳುತ್ತಾರೆ. ಹಾಗೆಯೇ, ಹರ್ಬಲ್ ಕ್ಷೇತ್ರದಲ್ಲಿ ವ್ಯವಹಾರ ನಡೆಸಲು ಈಕೆಯ ಅಜ್ಜಿ ಕೊಟ್ಟ ಸಲಹೆಗಳೂ ಉಪಯೋಗಕ್ಕೆ ಬಂದಿವೆಯಂತೆ.

ಸದ್ಯ Cosmix ಕಂಪನಿ ಎಂಟು ಉತ್ಪನ್ನಗಳನ್ನ ಹೊಂದಿದೆ. ಇವು ಕೂದಲು, ಚರ್ಮ, ಅಜೀರ್ಣತೆ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ಕಾಸ್ಮಿಕ್ಸ್ ಕಂಪನಿಯು ಸೂಪರ್ ಫೂಡ್ ಬಾರ್​ಗಳನ್ನ ತಯಾರಿಸಿಕೊಡುತ್ತದೆ.

(ಮಾಹಿತಿ ಕೃಪೆ: ಪಿಟಿಐ ಸುದ್ದಿ ಸಂಸ್ಥೆ)
Published by:Vijayasarthy SN
First published: