Varamahalakshmi Festival: ರಾಜ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ- ಗಗನಕ್ಕೇರಿದ ಹೂವಿನ ಬೆಲೆಗಳು

Varamahalakshmi: ರಾಜ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿದ್ದು, ಹೂವಿನ ಖರೀದಿ ಭರದಿಂದ ಸಾಗಿದೆ. ಹಾಗೆಯೇ ಹಬ್ಬದ ಹಿನ್ನಲೆ ಹೂವಿನ ಬೆಲೆಗಳು ಗಗನಕ್ಕೇರಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ವರಮಹಾಲಕ್ಷ್ಮಿ ಹಬ್ಬ, ಜನರು ಸಂಭ್ರಮ ಸಡಗರದಿಂದ ಈಗಾಗಲೇ ಹಬ್ಬದ ಆಚರಣೆಯನ್ನು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸಹ ಜನರು ಹಬ್ಬದ ಹಿನ್ನಲೆ ಹೂವಿನ ಖರೀದಿ ಮಾಡುತ್ತಿದ್ದು, ನಗರದ  ಕೆ.ಆರ್ ಮಾರುಕಟ್ಟೆ ಸೇರಿದಂತೆ ಮಲ್ಲೇಶ್ವರಂನಲ್ಲಿ ಬೆಳ್ಳಂಬೆಳಿಗ್ಗೆ ವ್ಯಾಪಾರ ಜೋರಾಗಿದೆ. ಹೂವು ಖರೀದಿ ಮಾಡಲು ಜನ ಜಾತ್ರೆಯಂತೆ ಸೇರಿದ್ದು, ರಸ್ತೆಯ ಬದಿಯಲ್ಲಿಯೇ ಹಣ್ಣು, ಹೂವು ಮಾರಾಟ ಮಾಡಲಾಗುತ್ತಿದೆ.  ಇನ್ನು ಹಬ್ಬದ ಹಿನ್ನಲೆ ಹೂವಿನ ಬೆಲೆಗಳು ಗಗನಕ್ಕೇರಿದ್ದು ಕೆ. ಆರ್. ಮಾರುಕಟ್ಟೆಯಲ್ಲಿ  ಹೂವಿನ ಒಂದು ಉದ್ದ ಮಾಲೆಗೆ ಸುಮಾರು  900ರೂನಂತೆ ಮಾರಾಟ ಮಾಡಲಾಗುತ್ತಿದೆ.  ಸೇವಂತಿ  ಕೇವಲ ಒಂದು ಕುಚ್ಚಿಗೆ  250 ರೂಪಾಯಿ ಇದ್ದು, ತಾವರೆ ಹೂವಿನ ಜೋಡಿಗೆ 50 ರಿಂದ 70 ರೂಗಳಂತೆ ಮಾರಾಟ ಮಾಡಲಾಗುತ್ತಿದೆ.. ಇನ್ನು ಮಲ್ಲಿಗೆ ಹೂವಿನ ರೇಟ್ ಕೇಳಿದರೆ ಹೌಹಾರುವುದಂತೂ ಸತ್ಯ. ಹೂವಿನ ಒಂದು ಹಾರಕ್ಕೆ 1500 ರೂಪಾಯಿಗಳಾಗಿದೆ. ಗುಲಾಬಿ ಹೂವಿನ ವಿಚಾರಕ್ಕೆ ಬಂದರೆ ಹೂವಿನ ಒಂದು ಹಾರಕ್ಕೆ  300 ರಿಂದ 600 ರೂಪಾಯಿಗಳನ್ನು ಮಾರಾಟಗಾರರು ಹೇಳುತ್ತಿದ್ದಾರೆ.  ಹಬ್ಬದ ಕಾರಣ ಹೂವಿನ ಬೆಲೆಯಲ್ಲಿ ಇಷ್ಟೆಲ್ಲ ಏರಿಕೆಯಾಗಿದ್ದರೂ ಸಹ ಜನ ಖರೀದಿ ಮಾಡುವುದನ್ನ ಕಡಿಮೆ ಮಾಡಿಲ್ಲ.

ಇದು ಕೆ.ಆರ್ ಮಾರುಕಟ್ಟೆಯ ಕತೆಯಾದರೇ, ಮಲ್ಲೇಶ್ವರಂನಲ್ಲಿ ಹೂವಿನ ಬೆಲೆಗಳು ಇನ್ನು ಹೆಚ್ಚಿವೆ. ಮಲ್ಲೇಶ್ವರಂನ ಹೂವಿನ ಮಾರುಕಟ್ಟೆಯಲ್ಲಿ  ಸಹ ಜನರು ಭರ್ಜರಿ ವ್ಯಾಪಾರ ಮಾಡುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಿನ್ನೆಯಿಂದ  ಗ್ರಾಹಕರು ಹೆಚ್ಚಾಗಿದ್ದಾರೆ . ಇನ್ನು ಈ ಮಾರುಕಟ್ಟೆಯಲ್ಲಿ  ಮಲ್ಲಿಗೆ ಹೂವು ಒಂದು ಕೆಜಿಗೆ – 1800 ರಿಂದ 2000 ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸೇವಂತಿಗೆ ಹೂವಿನ ಒಂದು ಮಾರಿಗೆ 200 ರೂಗಳಂತೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.

ಸುಗಂಧರಾಜ  ಹೂವಿಗೆ ಹಬ್ಬದ ಹಿನ್ನಲೆ ಬೆಲೆ ಏರಿಕೆಯಾಗಿದ್ದು 400 ರೂಪಾಯಿಗಳಾಗಿದೆ. ಮಾರುಕಟ್ಟೆಯಲ್ಲಿ ಮಲ್ಲಿಗೆ ಹಾರಕ್ಕೆ ಭರ್ಜರಿ ಡಿಮ್ಯಾಂಡ್ ಇದ್ದು, ಒಂದು ಹಾರಕ್ಕೆ  ಸುಮಾರು 1500 ರಿಂದ 2000 ದಂತೆ ಮಾರಾಟವಾಗುತ್ತಿದೆ. ಬೇರೆ ಹೂವುಗಳಿಗೆ ಹೋಲಿಕೆ ಮಾಡಿದರೆ, ಚೆಂಡು ಹೂವಿನ ಬೆಲೆ ಕಡಿಮೆ ಇದ್ದು,, ಕೆ.ಜಿಗೆ 150 ರುಪಾಯಿಗಳಂತೆ ಮಾರಾಟವಾಗುತ್ತಿದೆ.  ಕೊರೊನಾ ಕಾರಣದಿಂದ ಸುಮಾರು ಒಂದು ವರ್ಷಗಳಿಂದ ಹೂವಿನ ವ್ಯಾಪಾರ ಕಡಿಮೆಯಾಗಿತ್ತು, ಅಲ್ಲದೇ ಈ ವರ್ಷ ಕೂಡ ಲಾಕ್​ಡೌನ್ ಆದ ಹಿನ್ನಲೆ ವ್ಯಾಪಾರಿಗಳು ಬಹಳ ನಷ್ಟ ಅನುಭವಿಸಿದ್ದರು. ಆದರೆ ಹಬ್ಬದ ಕಾರಣ ವ್ಯಾಪಾರಿಗಳಿಗೂ ಸಹ ಲಾಭವಾಗುತ್ತಿದೆ.

ಇದನ್ನೂ ಓದಿ: ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್ ಗೋಧಿ ಮತ್ತು ಬಾದಮಿ ಉಂಡೆ ಟ್ರೈ ಮಾಡಿ

ಕೊರೊನಾ ಕಾರಣದಿಂದ ಬೆಂಗಳೂರಿಗರಿಗೆ ಹೆಚ್ಚಿನ ಹಬ್ಬಗಳನ್ನು ಆಚರಿಸಲು ಸಾಧ್ಯವಾಗಿರಲಿಲ್ಲ.   ಈ ಬಾರಿ ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಈ ಮಾರುಕಟ್ಟೆಗಳಲ್ಲಿ ಜನ ಜಂಗುಳಿಯಾಗಿದ್ದು, ವಾಹನಗಳ ಸಂಚಾರಕ್ಕೂ ಕಷ್ಟವಾಗಿದೆ. ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಜನರು ಕೊರೊನಾ ಸೋಂಕಿನ ಕುರಿತು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಯಾವುದೇ ಕೊರೊನಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿಲ್ಲ, ಸಾಮಾಜಿಕ ಅಂತರ ಎಂದರೆ ಏನು ಎಂಬುದನ್ನ ಜನ ಮರೆತಿರುವಂತಿದೆ. ಹಬ್ಬಕ್ಕೆ ಹೂವು ತರಲು ಹೋಗಿ, ಜೀವಕ್ಕೆ ಕುತ್ತು ತಂದುಕೊಳ್ಳುವುದು ಸರಿಯಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: