V.Somanna V/S R.Ashoka: ಸೋಮಣ್ಣ-ಅಶೋಕ್ ಮಧ್ಯೆ ‘ಬೆಂಗಳೂರು’ ಫೈಟ್; ಕೊನೆಗೆ ಗೆದ್ದವರು ಯಾರು?

ಸಾಮ್ರಾಟ್ ಅಂತ ಅವರ ಅಪ್ಪ-ಅಮ್ಮ ಯಾಕೆ ಹೆಸರಿಟ್ರೋ ಗೊತ್ತಿಲ್ಲ. ಅವನು ಸಾಮ್ರಾಟ್ ತರನೇ ಆಡ್ತಾನೆ.. ಇಡೀ ದಿನ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನದ ವಿಚಾರವಾಗಿ ನಡೆದ ರಾಜಕೀಯ ಜಟಾಪಟಿಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

ಸೋಮಣ್ಣ, ಅಶೋಕ್​

ಸೋಮಣ್ಣ, ಅಶೋಕ್​

  • Share this:
ಬೆಂಗಳೂರು: ರಾಜಧಾನಿ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಸಚಿವದ್ವಯರಾದ ವಿ.ಸೋಮಣ್ಣ(V.Somanna) ಹಾಗೂ ಆರ್​.ಅಶೋಕ್(R.Ashoka)​ ಮಧ್ಯೆ ಪೈಪೋಟಿ ನಡೆದಿದೆ. ಈ ಬಗ್ಗೆ ಸಚಿವ ಸೋಮಣ್ಣ ಬಹಿರಂಗವಾಗೇ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಇದಕ್ಕೆ ಆರ್​.ಅಶೋಕ್​ ಕೂಡ ನಯವಾಗೇ ತಿರುಗೇಟು ನೀಡಿದರು. ಈ ಸುದ್ದಿ ಮುಖ್ಯಮಂತ್ರಿಗಳನ್ನು ತಲುಪಿ, ಎಲ್ಲರನ್ನೂ ಸೌಹಾರ್ದಯುತವಾಗಿ ಕರೆದುಕೊಂಡು ಹೋಗುವೆ ಎಂದಿದ್ದಾರೆ. ಇಡೀ ದಿನ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನದ ವಿಚಾರವಾಗಿ ನಡೆದ ರಾಜಕೀಯ ಜಟಾಪಟಿಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

ನಂಗರ್ಧ, ಅಶೋಕ್​ಗೆ ಅರ್ಧ ಕೊಡಿ

ಬೆಂಗಳೂರಿನಲ್ಲಿ ನಾನು ಮಾಡಿರು ಕೆಲಸ ಎಲ್ಲರಿಗೂ ಗೊತ್ತಿದೆ. ಎಷ್ಟು ಪ್ಲೈ ಓವರ್ ಆಗಿದೆ , ಮೆಟ್ರೋ ಎಷ್ಟು ಆಗಿದೆ ಎಲ್ಲಾ ಗೊತ್ತಿದೆ. ನಾನು ಬಹಳ ಹಿರಿಯ ಇದ್ದೀನಿ, ನನಗೆ ಬೆಂಗಳೂರು ಉಸ್ತುವಾರಿ ಕೊಡಿ ಅಂತ ಹೇಳ್ತಾಯಿಲ್ಲ. ಬೇಕಾದ್ರೆ ಎರಡು ಮಾಡಿ, ಬೆಂಗಳೂರು ನಗರಕ್ಕೆ ಇಬ್ಬರನ್ನು ಉಸ್ತುವಾರಿ ಸಚಿವರುಗಳನ್ನಾಗಿ ಮಾಡಿ ಎಂದು ಹೇಳುತ್ತಿದ್ದೇನೆ ಎಂದು ಸೋಮಣ್ಣ ಮಾಧ್ಯಮಗಳ ಎದುರು ಬೆಳಗ್ಗೆ ಹೇಳಿಕೆ ನೀಡಿದರು. ಇದರ ಜೊತೆಗೆ ಹೊಸ ಪ್ರಸ್ತಾಪ ಇಟ್ಟ ಸಚಿವ ವಿ ಸೋಮಣ್ಣ, ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಹೊಣೆ ವಿಭಾಗಿಸಲಿ. ಬೆಂಗಳೂರಿಗೆ ಬೇಕಾದ್ರೆ ಇಬ್ಬರು ಉಸ್ತುವಾರಿ ಮಾಡಲಿ. ನನಗರ್ಧ ಬೆಂಗಳೂರು, ಅಶೋಕ್ ಗೆ ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ ಎಂದು ಆಗ್ರಹಿಸಿದರು.

ಸಾಮ್ರಾಟ್ ತರನೇ ಅಡ್ತಾನೆ

ನಾನು ಸಚಿವ ಆಗಿದ್ದಾಗ ಅಶೋಕ್ ಇನ್ನೂ ಶಾಸಕ ಕೂಡ ಇರಲಿಲ್ಲ. ನಾನು ಸಭೆ ಕರೆದಿದ್ದೆ ಅಶೋಕ್ ಬಂದಿರಲಿಲ್ಲ. ನಾನ್ ಏನ್ ಮಾಡ್ಲಿ, ಅವರು ಸಭೆ ಕರೆದ್ರೆ ನಾನು ಹೋಗ್ತಿನಿ, ನಾನು ಸಭೆ ಕರೆದ್ರೆ ಅವರು ಬರಬೇಕು. ಇಲ್ಲ ಅಂದ್ರೆ ಅವರಿಗೆ ಲಾಸ್, ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೇ ಎಂದು ಅಸಮಾಧಾನ ಹೊರ ಹಾಕಿದರು. ನಾನು ಸೀನಿಯರ್ ಇದ್ದೇನೆ, ಆದ್ರೆ ಅವರಿಗೆ ಸಾಮ್ರಾಟ್ ಅಂತ ಅವರ ಅಪ್ಪ-ಅಮ್ಮ ಯಾಕೆ ಹೆಸರಿಟ್ರೋ ಗೊತ್ತಿಲ್ಲ. ಅವನು ಸಾಮ್ರಾಟ್ ತರನೇ ಆಡ್ತಾನೆ ಅಂತ ಲೇವಡಿ ಮಾಡಿದರು.

ನಂಗೆ ಇದೇ ಕೊಡಿ ಅಂತ ನಾನು ಯಾವತ್ತೂ ಕೇಳಿಲ್ಲ

ಕೂಡಲೇ ಈ ಬಗ್ಗೆ ಮಾಧ್ಯಮಗಳೆದುರು ಪ್ರತ್ಯಕ್ಷವಾದ ಸಚಿವ ಆರ್​.ಅಶೋಕ್​​, ವಿವಾದವನ್ನು ತಣ್ಣಗಾಗಿಸಲು ಯತ್ನಿಸಿದರು. ಇಂದು ನಮ್ಮ  ಹಿರಿಯ ಸಚಿವ ಸೋಮಣ್ಣ ಮಾತನಾಡಿದ್ದಾರೆ, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಬೆಂಗಳೂರು ನಗರ ಉಸ್ತುವಾರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಮಾಡುವುದು ಸಿಎಂ ಬೊಮ್ಮಾಯಿರವರ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ. ಈತನಕ ನಾನು ಇದೇ ಜಿಲ್ಲೆಯ ಉಸ್ತುವಾರಿ ಬೇಕೆಂದು ಸಿಎಂ ಸೇರಿದಂತೆ ಯಾರ ಹತ್ತಿರ ಕೇಳಿಲ್ಲ. ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕೊಟ್ಟಿದ್ರು, ಆಗಲೂ ಕೆಲಸ ಮಾಡಿದ್ದೀನಿ. ನಂತರ ಎಂಟಿಬಿ ನಾಗರಾಜ್ ತಮಗೆ ಬೇಕು ಅಂತ ಕೇಳಿದ್ರು. ಗ್ರಾಮಾಂತರ ಉಸ್ತುವಾರಿಯನ್ನು ಎಂಟಿಬಿ ಅವರಿಗೆ ಬಿಟ್ಟುಕೊಟ್ಟೆ. ಉಸ್ತುವಾರಿ ಮಂತ್ರಿ ಆಗ್ದೆ ಕೂಡ ಕೆಲಸ ಮಾಡಿದ್ದೀನಿ ಎಂದರು.

ಇದನ್ನೂ ಓದಿ: ಯಡಿಯೂರಪ್ಪನ ಕಂಟ್ರೋಲ್​​ಗೆ ತೆಗೆದುಕೊಳ್ಳಲು ಆಪ್ತನ ಮೇಲೆ BJP ಐಟಿ ದಾಳಿ ಮಾಡಿಸಿದೆ: DK Shivakumar ಆರೋಪ

ಇನ್ನು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು, ಹಾಗಾಗಿ ಸಚಿವರು-ಶಾಸಕರು ಕರೆದಿದ್ದ ಸಭೆಗೆ ಭಾಗವಹಿಸಲು ಆಗಲಿಲ್ಲ. ನನಗೆ ಬೇರೆ ಕಾರ್ಯಕ್ರಮಗಳು ಇದ್ವು ,ಬೇರೆ ಕಾರ್ಯಕ್ರಮ ಇಲ್ಲದೇ ಹೋದ್ರೆ ಬೇರೆ ಸಭೆಗಳಿಗೆ ಕಾರ್ಯಕ್ರಮಗಳಿಗೆ ಭಾಗವಹಿಸ್ತಿನಿ. ಅಂತಿಮವಾಗಿ ಸಿಎಂ ಬೊಮ್ಮಾಯಿ ನಿರ್ಧಾರ ಕ್ಕೆ ನಾನು ಬದ್ದ. ಬೆಂಗಳೂರು ಉಸ್ತುವಾರಿ ಯಾರಿಗೆ ಕೊಟ್ರು ಅವರ ಜೊತೆಗೆ ಕೆಲಸ ಮಾಡ್ತಿನಿ ಎಂದು ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದರು.

ಸಚಿವರ ಪೈಪೋಟಿಗೆ ಸಿಎಂ ಸೂತ್ರ

ಉಭಯ ಸಚಿವರ ನಡುವೆ ಬಹಿರಂಗವಾಗಿ ಹೇಳಿಕೆಗಳು ಹರಿದಾಡಿದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದರು. ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇನೆ. ಸಂಪುಟ ಸಚಿವರ ಜೊತೆ ಸೌಹಾರ್ದಯುತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡ್ತೇನೆ. ಎಲ್ಲರು ನಮ್ಮವರೇ ಇದ್ದಾರೆ, ಯಾವುದೇ ರೀತಿಯ ತೊಂದರೆ ಆಗದ ರೀತಿ ನಿರ್ಧಾರ ಮಾಡ್ತೇನೆ. ಬೆಂಗಳೂರು ‌ಬಹಳ ಮಹತ್ವದದ್ದು ಇದರ ಬಗ್ಗೆ ಎಲ್ಲರ ಜೊತೆ ಚರ್ಚಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸ್ತೇನೆ ಎಂದರು.

ಆ ಸ್ಥಾನಕ್ಕೆ ನಾನು ಟವೆಲ್ ಹಾಕಿಲ್ಲ

ಬೆಳಗ್ಗೆ ಮಾತನಾಡಿದಾಗ ತಣ್ಣಗೇ ಇದ್ದ ಆರ್​.ಅಶೋಕ್​ ಮತ್ತೆ ಸಂಜೆ ವೇಳೆಗೆ ಮಾಧ್ಯಮಗಳ ಎದುರು ಬಂದಾಗ ಸೋಮಣ್ಣ ವಿರುದ್ಧ ಸಿಡಿಮಿಡಿಕೊಂಡರು. ನಾನು ಬೆಂಗಳೂರು ಜಿಲ್ಲಾ ಉಸ್ತುವಾರಿ ಅಲ್ಲ, ನಾನು ಜಿಲ್ಲಾ ಉಸ್ತುವಾರಿಗೆ ಅಪೇಕ್ಷಿತ ಅಲ್ಲ. ಆ ಸ್ಥಾನಕ್ಕೆ ನಾನು ಟವೆಲ್ ಹಾಕಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು. ಜಿಲ್ಲಾ ಉಸ್ತುವಾರಿ‌ ಹಂಚುವುದು ಸಿಎಂ ಪರಮಾಧಿಕಾರ, ಸಿಎಂ ಪರಮಾಧಿಕಾರ ನಾನು ಪ್ರಶ್ನಿಸಲ್ಲ ಎಂದು ಸೋಮಣ್ಣಗೆ ಟಾಂಗ್ ಕೊಟ್ಟರು.

ಕೊನೆ ಹಂತದಲ್ಲಿ ಅಶೋಕ್​ ಕೂಲ್​ ಕೂಲ್​ ಹೇಳಿಕೆ

ನನ್ನ ವಿರುದ್ಧ ಷಢ್ಯಂತ್ರ ರೂಪಿಸಲಾಗಿದೆ, ನಾವೆಲ್ಲರೂ ಬೆಂಗಳೂರಿನಲ್ಲಿ ಒಟ್ಟಾಗಿ ಇದ್ದೇವೆ. ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟಾಗಿ ಹೋಗುತ್ತೇವೆ. ನಮ್ಮಲ್ಲಿ ಗೊಂದಲ ಏನೂ ಇಲ್ಲ, ನಿನ್ನೆ ವಿ ಸೋಮಣ್ಣ ಜೊತೆ ಹತ್ತು ನಿಮಿಷ ಮಾತಾಡಿದೀನಿ. ಸೋಮಣ್ಣ ನನಗೆ ಆತ್ಮೀಯರು, ಅವರ ಜತೆ ಉತ್ತಮ ಬಾಂಧವ್ಯ ಇದೆ. ಅವರ ಪ್ರತೀ ಜನ್ಮದಿನಕ್ಕೆ ಅವರ ಮನೆಗೇ ಹೋಗಿ ವಿಷ್ ಮಾಡ್ತೀನಿ. ಎಸ್ ಆರ್ ವಿಶ್ವನಾಥ್ ಜತೆಗೂ ಮಾತಾಡಿದೀನಿ, ಇವತ್ತು ಬೆಳಗ್ಗೆ ಎಸ್ ಆರ್ ವಿಶ್ವನಾಥ್ ಅವರೇ ನನಗೆ ಕರೆ ಮಾಡಿ ಏನಣ್ಣ ಏನ್ ಸಮಾಚಾರ ಅಂತ ಚೆನ್ನಾಗಿ ಮಾತಾಡಿದ್ರು. ಯಾರೋ ಕೆಲವರು ಗೊಂದಲ ಉಂಟು ಮಾಡುವ ಪ್ರಯತ್ನ ಮಾಡ್ತಿದಾರೆ ಎಂದು ಭುಗಿಲೆದ್ದಿರುವ ಅಸಮಾಧಾನವನ್ನು ಶಮನ ಮಾಡಲು ಯತ್ನಿಸಿದರು.
Published by:Kavya V
First published: