ಬಿಎಸ್​ವೈ ಇದ್ದರೆ ಬಿಜೆಪಿ, ಇಲ್ಲ ಎಲ್ಲವೂ ಸರ್ವನಾಶ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಸ್ವಾಮೀಜಿಗಳಿಂದ ಎಚ್ಚರಿಕೆ

ಯಡಿಯೂರಪ್ಪ ಇದ್ದಾಗ ಮಾತ್ರ ಬದಲಾವಣೆ ಪ್ರಶ್ನೆ ಉದ್ಭವ ಆಗುತ್ತಿರೋದು ಯಾಕೆ? ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಮಠಾಧೀಶರೆಲ್ಲ ಸೇರಿ ಸಭೆ ಮಾಡ್ತೇವೆ. 500 ಮಠಾಧೀಶರು ಬಹುದೊಡ್ಡ ಸಭೆ ನಡೆಸ್ತೇವೆ.

ಸಿಎಂ ಭೇಟಿಯಾದ ಸ್ವಾಮೀಜಿಗಳ ನಿಯೋಗ

ಸಿಎಂ ಭೇಟಿಯಾದ ಸ್ವಾಮೀಜಿಗಳ ನಿಯೋಗ

  • Share this:
ಬೆಂಗಳೂರು : ಸಿಎಂ ಬಿ.ಎಸ್​.ಯಡಿಯೂರಪ್ಪ ಬದಲಾವಣೆ ವಿಚಾರ ರಾಜ್ಯ ರಾಜಕಾರಣದಲ್ಲಿ ಕಾಡ್ಗಿಚ್ಚಿನಂತೆ ಹೊತ್ತಿ ಉರಿಯುತ್ತಿದ್ದು, ಉತ್ತರ ಕರ್ನಾಟಕದ ಲಿಂಗಾಯತ ಸ್ವಾಮೀಜಿಗಳ ನಿಯೋಗ ಬಿಎಸ್​ವೈ ಬೆನ್ನಿಗೆ ನಿಂತಿದೆ. 25ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಕಾವೇರಿ ನಿವಾಸಕ್ಕೆ ಉತ್ತರ ಕರ್ನಾಟಕ ಭಾಗದ ವಿವಿಧ ಮಠಗಳಿಂದ ಸ್ವಾಮೀಜಿಗಳ ದಂಡು ಆಗಮಿಸಿ ಸಿಎಂ ಜೊತೆ ಚರ್ಚಿಸಿದ್ದಾರೆ. ಪೂರ್ಣಾವಧಿಗೆ ಯಡಿಯೂರಪ್ಪ ಸಿಎಂ ಆಗಿ ‌ಮುಂದುವರೆಯಬೇಕು ಎಂದು ಸ್ವಾಮೀಜಿಗಳ ನಿಯೋಗ ಆಗ್ರಹಿಸಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಬಾಳೆ ಹೊಸೂರು ಮಠದ ದಿಂಗಾಲೇಶ್ಚರ ಶ್ರೀಗಳು, ಯಡಿಯೂರಪ್ಪರನ್ನು ಬದಲಾವಣೆ ಮಾಡಬೇಡಿ. ಯಡಿಯೂರಪ್ಪ ಬದಲಾವಣೆ ಮಾಡಿದ್ರೆ ಮುಂದೆ ಬಹಳ ಕೆಟ್ಡ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಯಡಿಯೂರಪ್ಪ ಇದ್ದರೆ ಬಿಜೆಪಿ, ಇಲ್ಲವಾದರೆ ಎಲ್ಲವೂ ಸರ್ವನಾಶವಾಗುತ್ತೆ ಎಂದು ಎಚ್ಚರಿಸಿದರು. ಯಡಿಯೂರಪ್ಪ ಬದಲಾವಣೆ ಮಾಡೋ ಅಗತ್ಯ ಈಗ ಏನಿದೆ? ಬದಲಾವಣೆ ಮಾಡುವ ಹಾಗಿದ್ರೆ ಮೊದಲೇ ಮಾಡಬೇಕಿತ್ತು. ಈಗ ರಾಜ್ಯದಲ್ಲಿ ಎಲ್ಲ ಸಮಸ್ಯೆ ಬಗೆಹರಿದ ಮೇಲೆ ಬದಲಾವಣೆ ಮಾಡುವ ಅಗತ್ಯ ಏನು ಎಂದು ಪ್ರಶ್ನಿಸಿದರು.

ಇಲ್ಲಿ ಲಿಂಗಾಯತರ ಪ್ರಶ್ನೆ ಬರಲ್ಲ. ಪ್ರಶ್ನೆ ಇರೋದು ಯಡಿಯೂರಪ್ಪ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ, ಪರಿಶ್ರಮ ಪಟ್ಟಿದಾರೆ ಅನ್ನೋದು. ಯಡಿಯೂರಪ್ಪ ಇದ್ದಾಗ ಮಾತ್ರ ಬದಲಾವಣೆ ಪ್ರಶ್ನೆ ಉದ್ಭವ ಆಗುತ್ತಿರೋದು ಯಾಕೆ? ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಮಠಾಧೀಶರೆಲ್ಲ ಸೇರಿ ಸಭೆ ಮಾಡ್ತೇವೆ. 500 ಮಠಾಧೀಶರು ಬಹುದೊಡ್ಡ ಸಭೆ ನಡೆಸ್ತೇವೆ. ಆ ಸಭೆ ಬಳಿಕ ನಾವು ಮುಂದಿನ ತೀರ್ಮಾನ ಮಾಡ್ತೇವೆ ಎನ್ನುವ ಮೂಲಕ ಬಿಎಸ್​ವೈ ಪರ ಬಲ ಪ್ರದರ್ಶನಕ್ಕೆ ಸ್ವಾಮೀಜಿಗಳು ಮುಂದಾಗುವ ಬಗ್ಗೆ ಸುಳಿವು ನೀಡಿದರು.

ಸಿಎಂ ಬಿಎಸ್​​ವೈ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆಗಳು ಈಗಾಗಲೇ ನಡೆದಿದ್ದು, ಶೀಘ್ರವೇ ಸಭೆ ಸೇರಿ ನಿರ್ಣಯ ಕೊಡುವ ಬಗ್ಗೆ ತೀರ್ಮಾನಿಸಲಾಗುವುದು. ಹೈಕಮಾಂಡ್ ಗೆ ಸಂದೇಶ ರವಾನಿಸುವ ಬಗ್ಗೆ 500 ಮಠಾಧೀಶರಿಂದ ಸಭೆ ನಡೆಯಲಿದೆ ಎಂದು ದಿಂಗಾಲೇಶ್ಚರ ಶ್ರೀಗಳು ತಿಳಿಸಿದರು.

ಇದನ್ನೂ ಓದಿ: CM BSY: ಆಗಸ್ಟ್ 15ರ ಮುಂಚೆಯೇ ಸಿಎಂ ಬಿಎಸ್​ವೈ ರಾಜೀನಾಮೆ? ವಿಧಾನಸೌಧದ ಪಡಸಾಲೆಯಲ್ಲಿ ಏನಿದು ಗುಸುಗುಸು?

ಇಲ್ಲಿ ಕೇವಲ ಲಿಂಗಾಯತ ಸ್ವಾಮಿಗಳು ಬಂದಿಲ್ಲ, ಬೇರೆ ಸಮುದಾಯದ ಸ್ವಾಮೀಜಿ ಗಳು ಬಂದಿದ್ದಾರೆ. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಏನು ಇಲ್ಲ ವರಿಷ್ಠರು ಮಾತು ಕೇಳಬೇಕು ಎಂದು. ಲಿಂಗಾಯತರನ್ನು ಯಾವುದೇ ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ. ಯಡಿಯೂರಪ್ಪ ಇದ್ರೆ ಮಾತ್ರ ಬಿಜೆಪಿ, ಇಲ್ಲಾಂದ್ರೆ ಸರ್ವನಾಶ ಆಗುತ್ತೆ. ಲಿಂಗಾಯತ ಸಮಾಜ ದೂರವಗುತ್ತೆ ಎಂದು ನಾವು ವರಿಷ್ಠರಿಗೆ ಮನವಿ ಮಾಡುತ್ತೇವೆ. ಯಡಿಯೂರಪ್ಪ ಅವರನ್ನು ಮುಂದುವರೆಸಿ, ಬೇರೆ ‌ಪಕ್ಷದ ಶಾಸಕರನ್ನು ಕರೆತಂದು ಸರ್ಕಾರ ಮಾಡಿದ್ದಾರೆ. ನೆರೆ ಮತ್ತು ಕರೋನಾ ವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹಾಗಾಗಿ ಯಡಿಯೂರಪ್ಪ ಮುಂದುವರಿಸಿ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತೇವೆ.

ಈಗಲೂ ಕಾಲ ಮಿಂಚಿಲ್ಲ ವರಿಷ್ಠರು ಎಚ್ಚೆತ್ತುಕೊಳ್ಳಿ. ಇಲ್ಲದೆ ಹೋದ್ರೆ ಹಿಂದೆ ನಿಮಗಾದ ಪರಿಸ್ಥಿತಿ ಮತ್ತೆ ಬರುತ್ತೆ. ಈ ಹಿಂದೆ ಅದನ್ನು ಬಿಜೆಪಿ ನೋಡಿದೆ, ಅದು ಮತ್ತೆ ಮರಕಳಿಸಬಾರದು ಎಂದು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.

ಭೇಟಿ ಮಾಡಿ ಬೆಂಬಲ ಸೂಚಿಸಿದ ಸ್ವಾಮೀಜಿಗಳೊಂದಿಗೆ ಮಾತನಾಡಿರುವ ಸಿಎಂ, ತನ್ನ ಕೈಯಲ್ಲಿ ಏನು ಇಲ್ಲ, ಎಲ್ಲಾ ಹೈಕಮಾಂಡ್ ನದ್ದೇ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ನಾನು ಕೇಳಬೇಕು ಎಂದಿದ್ದಾರಂತೆ. ಆದರೆ ಯಾವುದೇ ಕಾರಣಕ್ಕೂ ಹೈಕಮಾಂಡ್ ಮಾತಿಗೆ ಒಪ್ಪಬೇಡಿ. ನಾವು ನಿಮ್ಮ ಜೊತೆ ಇದ್ದೇವೆ, ಪೂರ್ಣ ಅವಧಿ ಪೂರೈಸಿ. ಹೈಕಮಾಂಡ್ ಒತ್ತಡಕ್ಕೆ ಮಣಿಯದೇ ಸಿಎಂ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಮಠಾಧೀಶರು ಸಿಎಂಗೆ ಸಲಹೆ ನೀಡಿದ್ದಾರೆ.
Published by:Kavya V
First published: