Blast- ಬೆಂಗಳೂರಿನಲ್ಲಿ ನಿಗೂಢ ಸ್ಫೋಟ; ಮನೆಗೆ ತಂದಿದ್ದ ಹೊಸ ಫ್ರಿಜ್ ಬ್ಲಾಸ್ಟ್ ಆಯಿತೇ?

ಬೆಂಗಳೂರಿನ ವಿಜಯನಗರದ ಹಂಪಿನಗರದಲ್ಲಿರುವ ಮನೆಯೊಂದರಲ್ಲಿ ಸ್ಫೋಟವೊಂದು ಸಂಭವಿಸಿ ಇಬ್ಬರು ವೃದ್ಧ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸದಾಗಿ ಖರೀದಿಸಿದ್ದ ರೆಫ್ರಿಜರೇಟರ್ ಸಿಡಿದು ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಬೆಂಗಳೂರಿನ ವಿಜಯನಗರದ ಮನೆಯೊಂದರಲ್ಲಿ ಸಂಭವಿಸಿದ ಸ್ಫೋಟ

ಬೆಂಗಳೂರಿನ ವಿಜಯನಗರದ ಮನೆಯೊಂದರಲ್ಲಿ ಸಂಭವಿಸಿದ ಸ್ಫೋಟ

  • Share this:
ಬೆಂಗಳೂರು, ಆ. 16: ನಗರದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ವಿಜಯನಗರ ಪ್ರದೇಶದ ಹಂಪಿನಗರದ ಮನೆಯಲ್ಲಿ ಮಧ್ಯರಾತ್ರಿ 12:45ರ ಸುಮಾರಿಗೆ ಸ್ಫೋಟವಾಗಿದೆ. ವೃದ್ಧ ದಂಪತಿಗಳಾದ ಸೂರ್ಯನಾರಾಯಣ ಶೆಟ್ಟಿ (74) ಮತ್ತು ಪುಷ್ಪಾವತಮ್ಮ (70) ಗಾಯಗೊಂಡವರು. ಪುಷ್ಪಾವತಮ್ಮ ಅವರಿಗೆ ಶೇ. 70ರಷ್ಟು ಸುಟ್ಟ ಗಾಯಗಳಾಗಿವೆ. ಅವರಿಬ್ಬರನ್ನ ವಿಜಯನಗರ ಆಸ್ಪತ್ರೆಗೆ ಸೇರಿಸಲಾಗಿದೆ. ಹೊಸದಾಗಿ ತರಲಾಗಿದ್ದ ರೆಫ್ರಿಜರೇಟರ್ ಸಿಡಿದು ಚೂರು ಚೂರಾಗಿದೆ. ಅದು ಸ್ಫೋಟಗೊಂಡಿರಬಹುದು ಎಂದು ಸದ್ಯಕ್ಕೆ ಶಂಕಿಸಲಾಗಿದೆ.

ಎರಡಂತಸ್ತಿನ ಈ ಮನೆಯಲ್ಲಿ ಆದ ಸ್ಫೋಟದ ಸದ್ದು 500 ಮೀಟರ್ ದೂರದವರೆಗೂ ಕೇಳಿಸಿದೆ. ಸ್ಫೋಟದಿಂದಾಗಿ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮನೆಯ ಗೋಡೆ ಬಿರುಕುಬಿಟ್ಟಿದೆ. ಬಾಗಿಲು, ಮನೆ ಮುಂದಿದ್ದ ಹೂವಿನ ಗಿಡದ ಪಾಟ್​ಗಳೆಲ್ಲವೂ ಛಿದ್ರಛಿದ್ರಗೊಂಡಿವೆ. ಕಬ್ಬಿಣದ ಗ್ರಿಲ್ ಕೂಡ ಮುರಿದುಬಿದ್ದಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲ್ಕೈದು ಮನೆಗಳಿಗೂ ಹಾನಿಯಾಗಿರುವುದು ಕಂಡುಬಂದಿದೆ. ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿ ಕೂಡ ತುಂಡರಿಸಿ ಬಿದ್ದಿದ್ದು ಸ್ಫೋಟದ ತೀವ್ರತೆಗೆ ಕನ್ನಡಿ ಹಿಡಿದಂತಿತ್ತು.

ಸ್ಫೋಟವಾದ ಸ್ವಲ್ಪ ಹೊತ್ತಿನಲ್ಲೇ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು. ಸ್ಥಳೀಯರು ಕೂಡ ಬೆಂಕಿ ಆರಿಸುವ ಕೆಲಸದಲ್ಲಿ ಕೈ ಜೋಡಿಸಿದರು. ಆದರೆ, ಈ ಸ್ಫೋಟಕ್ಕೆ ಕಾರಣ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಸಿಲಿಂಡರ್ ಸ್ಪೋಟಗೊಂಡಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಮನೆಯಲ್ಲಿದ್ದ 2 ಸಿಲಿಂಡರ್​ಗಳು ಸುರಕ್ಷಿತವಾಗಿವೆ. ಇತ್ತೀಚೆಗೆ ತರಿಸಲಾಗಿದ್ದ ಒಂದು ಎಲೆಕ್ಟ್ರಿಕ್ ಬೈಕ್​ನ ಬ್ಯಾಟರಿ ಕೂಡ ಏನೂ ಆಗದೇ ಉಳಿದುಕೊಂಡಿದೆ. ಗ್ಯಾಸ್ ಗೀಸರ್ ಕೂಡ ಸೇಫ್ ಆಗಿದೆ. ಫ್ರಿಜ್ ಮಾತ್ರ ಪೀಸ್ ಪೀಸ್ ಆಗಿದೆ. ಫ್ರಿಜ್ ಹಿಂದೆ ಇದ್ದ ಗೋಡೆ ಮತ್ತು ಬಾಗಿಲು ಚೂರು ಚೂರು ಆಗಿದೆ. ಈ ರೆಫ್ರಿಜರೇಟರ್ ಅನ್ನು 15 ದಿನಗಳ ಹಿಂದಷ್ಟೇ ಕೊಂಡು ತರಲಾಗಿತ್ತೆನ್ನಲಾಗಿದೆ.

ಇದನ್ನೂ ಓದಿ: Anand Singh- ಪಿಕ್ಚರ್ ಅಭೀ ಬಾಕಿ ಹೈ – ಖಾತೆ ಕುರಿತು ಮಾರ್ಮಿಕವಾಗಿ ಹೇಳಿದ ಆನಂದ್ ಸಿಂಗ್

ಗಾಯಗೊಂಡಿರುವ ವೃದ್ಧ ದಂಪತಿ ಇಬ್ಬರೂ ಮೊದಲ ಮಹಡಿಯಲ್ಲಿ ಮಲಗಿದ್ದರು. ಇವರ ಮಗ ದಿನೇಶ್ ಅವರು ಸ್ಫೋಟಗೊಂಡ ವೇಳೆ ಮೂರನೇ ಮಹಡಿಯಲ್ಲಿ ಮಲಗಿದ್ದರು. ಇಬ್ಬರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ದೇಹದ ಮುಕ್ಕಾಲು ಪಾಲು ಸುಟ್ಟಗಾಯಗಳಿರುವ ಪುಷ್ಪಾವತಮ್ಮ ಅವರನ್ನ ವಿಜಯನಗರದ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೂರ್ಯನಾರಾಯಣ ಶೆಟ್ಟಿ ಅವರನ್ನ ಸದ್ಯ ವಿಜಯನಗರದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಮಂಜುನಾಥ್
Published by:Vijayasarthy SN
First published: