Satish Reddy- ಶಾಸಕ ಸತೀಶ್ ರೆಡ್ಡಿಯ 2 ಕಾರುಗಳನ್ನ ರಾತ್ರೋರಾತ್ರಿ ಸುಟ್ಟುಹಾಕಿದ ದುಷ್ಕರ್ಮಿಗಳು

ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಬೊಮ್ಮನಹಳ್ಳಿಯಲ್ಲಿರುವ ಶಾಸಕ ಸತೀಶ್ ರೆಡ್ಡಿ ನಿವಾಸದ ಬಳಿ ಅವರಿಗೆ ಸೇರಿದ ಎರಡು ಕಾರುಗಳನ್ನ ದುಷ್ಕರ್ಮಿಗಳು ಬೆಂಕಿಹಚ್ಚು ಸುಟ್ಟಿರುವ ಘಟನೆ ನಡೆದಿದೆ.

ಸತೀಶ್ ರೆಡ್ಡಿ ಅವರ ಕಾರೊಂದನ್ನ ದುಷ್ಕರ್ಮಿಗಳು ಸುಟ್ಟುಹಾಕಿರುವುದು

ಸತೀಶ್ ರೆಡ್ಡಿ ಅವರ ಕಾರೊಂದನ್ನ ದುಷ್ಕರ್ಮಿಗಳು ಸುಟ್ಟುಹಾಕಿರುವುದು

 • Share this:
  ಬೆಂಗಳೂರು, ಆ. 12: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಅಂಗಳದಲ್ಲಿ ನಿಲ್ಲಿಸಿದ ಎರಡು ಕಾರುಗಳನ್ನ ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಒಂದೂವರೆ ಸುಮಾರಿಗೆ ಈ ಘಟನೆ ನಡೆದಿದ್ದು, ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಬೆಂಕಿಗಾಹುತಿ ಆಗಿವೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಜನ ವ್ಯಕ್ತಿಗಳು ಪೆಟ್ರೋಲ್ ಕ್ಯಾನ್​ಗಳನ್ನ ತಂದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಮನೆಯ ಅಂಗಳದೊಳಗೆ ಈ ಕಾರುಗಳನ್ನ ನಿಲ್ಲಿಸಲಾಗಿತ್ತು.

  ಘಟನೆಯ ತನಿಖೆ ನಡೆಯುತ್ತಿದೆ. ಬೆಂಕಿ ಹಚ್ಚಿರುವುದು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಗಳನ್ನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ದುಷ್ಕರ್ಮಿಗಳ ಚಲನವಲನಗಳ ಮೂಲಕ ಅವರನ್ನ ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಹಳೇ ದ್ವೇಷದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಶಂಕೆ.

  ಇದನ್ನೂ ಓದಿ: School Reopening- ಕೊರೋನಾ ಟೆನ್ಷನ್; ಶಾಲಾ ಕಾಲೇಜು ಸದ್ಯಕ್ಕೆ ಆರಂಭ ಆಗುವುದು ಅನುಮಾನ

  ಇದೇ ವೇಳೆ, ಶಾಸಕ ಸತೀಶ್ ರೆಡ್ಡಿ ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಅವರು, “1:23ಕ್ಕೆ ಇಬ್ಬರು ಎಂಟ್ರಿ ಆಗ್ತಾರೆ. ಆ ಕಡೆ ಈ ಕಡೆ ನೋಡಿ ಎರಡು ಗಾಡಿಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಾರೆ. 1:30ಕ್ಕೆ ನಮಗೆ ಘಟನೆ ಬಗ್ಗೆ ಗೊತ್ತಾಗಿದೆ. ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಶಬ್ದ ಬಂದು ನಮಗೆ ಎಚ್ಚರವಾಯಿತು. ಗೇಟ್ ಬಳಿ ಇದ್ದ ಪೊಲೀಸರು ಹಾಗೂ ನಮ್ಮ ವಾಚ್​ಮ್ಯಾನ್ ಓಡಿ ಬಂದರು. ಅರ್ಧಗಂಟೆ ಕಾಲ ಬೆಂಕಿಯನ್ನ ಆರಿಸುವ ಕೆಲಸ ನಡೆಯಿತು” ಎಂದು ಹೇಳಿದ್ದಾರೆ.

  ದುಷ್ಕರ್ಮಿಗಳು ಎರಡು ಬೈಕ್​ಗಳಲ್ಲಿ ಬಂದಿರುವುದು ಗೊತ್ತಾಗಿದೆ. ಆದರೆ, ಸಿಸಿಟಿವಿಯಲ್ಲಿ ಈ ಪುಂಡರ ಮುಖ ಸರಿಯಾಗಿ ಗೊತ್ತಾಗಿಲ್ಲ. ಆದರೆ, ಬೇರೆ ಕಡೆಗಳಲ್ಲಿರುವ ಸಿಸಿಟಿವಿಗಳಿಂದ ಇವರ ಚಲನವಲನಗಳನ್ನ ಪರಿಶೀಲಿಸುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ. ಸತೀಶ್ ರೆಡ್ಡಿ ನಿವಾಸದ ಹಿಂಬದಿ ಗೇಟ್ ಮೂಲಕ ದುಷ್ಕರ್ಮಿಗಳು ಪ್ರವೇಶ ಮಾಡಿದ್ಧಾರೆ. ಅಲ್ಲಿದ್ದ ಸಿಸಿಟಿವಿಯನ್ನ ಮರೆ ಮಾಚಿದ್ದಾರೆ. ಹೀಗಾಗಿ ಅವರ ಮುಖಚಹರೆ ಸರಿಯಾಗಿ ದಾಖಲಾಗಿಲ್ಲ. ನಿವಾಸದ ಮುಂಭಾಗದ ಗೇಟ್ ಬಳಿ ಪೊಲೀಸರು ಮತ್ತು ವಾಚ್​ಮ್ಯಾನ್ ಇದ್ದರು. ಇವರು ಹಿಂಬದಿ ಗೇಟ್​ನಿಂದ ಬಂದು ಕಾರಿಗೆ ಬೆಂಕಿ ಹಚ್ಚಿ ಹಿಂಬದಿ ಗೇಟ್ ಮೂಲಕವೇ ಪರಾರಿಯಾಗಿದ್ಧಾರೆ. ಇವರು ಬೆಂಕಿ ಹಚ್ಚುವಾಗ ಯಾರಿಗೂ ಗೊತ್ತಾಗದೇ ಹೋದದ್ದು ಆಶ್ಚರ್ಯ.

  ಇದನ್ನೂ ಓದಿ: Green Heroes: ಗುಬ್ಬಚ್ಚಿಗಳಿಗಾಗಿ ಮನೆ ಮೀಸಲಿಟ್ಟ ಪಕ್ಷಿ ಪ್ರೇಮಿ; ಪರಿಸರ ಪ್ರೇಮಿಯ ಬಗ್ಗೆ ತಿಳಿಯಲೇಬೇಕು

  ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳು ಇತ್ತೀಚೆಗೆ ನಡೆದಿರುವುದು ವರದಿಯಾಗಿವೆ. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಪುಂಡರು ರಸ್ತೆಗಳಲ್ಲಿ ನಿಲ್ಲಿಸಿದ್ದ ಹಲವು ಕಾರುಗಳನ್ನ ಮಚ್ಚು ಲಾಂಗು, ಕಲ್ಲುಗಳಿಂದ ಜಖಂಗೊಳಿಸಿದ್ದರು. ಆದರೆ ಬೊಮ್ಮನಹಳ್ಳಿ ಶಾಸಕರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರುಗಳನ್ನ ಸುಟ್ಟುಹಾಕಿರುವುದು ಹುಬ್ಬೇರಿಸುವಂತೆ ಮಾಡಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: