ಬೆಂಗಳೂರು: ರಾಮನಗರ (Ramanagara) ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಿಎಂ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮದ ವೇದಿಕೆ ದೊಡ್ಡ ಹೈಡ್ರಾಮಾಗೆ ಸಾಕ್ಷಿ ಆಯಿತು. ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (Minister CN Ashwath Narayan) ಹಾಗೂ ಸಂಸದ ಡಿಕೆ ಸುರೇಶ್ (MP DK Suresh) ಮಧ್ಯೆ ವೇದಿಕೆ ಮೇಲೆಯೇ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ಬಿಡ್ತು. ಅಷ್ಟರಲ್ಲಿ ವೇದಿಕೆಯಲ್ಲಿದ್ದ ಇತರರು, ಪೊಲೀಸರು ಬಂದು ಇಬ್ಬರನ್ನು ತಡೆದರು. ಇಲ್ಲಿ ಯಾರೂ ಅಭಿವೃದ್ಧಿ ಮಾಡಿಲ್ಲ, ಬಿಜೆಪಿ ಮಾತ್ರ ಅಭಿವೃದ್ಧಿ ಮಾಡಿದ್ದು ಎಂಬ ಸಚಿವ ಅಶ್ವಥ್ ಮಾತಿಗೆ ಕೆರಳಿದ ಸಂಸದ ಡಿಕೆ ಸುರೇಶ್, ಇಲ್ಲಿ ಬಂದು ಗಂಡಸ್ತನ ತೋರಿಸ್ತಿಯಾ ಎಂದು ಗಲಾಟೆ ಮಾಡಿದರು. ಇಬ್ಬರು ನಾಯಕರು ವೇದಿಕೆ ಮೇಲೆ ಕಿತ್ತಾಡಿಕೊಂಡರು. ಈ ಗಲಾಟೆ ಕಂಡ ಖುದ್ದು ಸಿಎಂ ಬೊಮ್ಮಾಯಿ ಅವರೇ ಥಂಡಾ ಹೊಡೆದರು.
ಗಲಾಟೆ ಬಳಿಕ ಸಚಿವರ ಫಸ್ಟ್ ರಿಯಾಕ್ಷನ್
ರಾಮನಗರದಲ್ಲಿ ನಡೆದ ಸಚಿವರು, ಸಂಸದರ ಕಿತ್ತಾಟ ಈಗ ಟ್ವಿಟ್ಟರ್ ವಾರ್ಗೆ ಎಡೆ ಮಾಡಿಕೊಟ್ಟಿದೆ. ಇಂದಿನ ಗಲಾಟೆ ಸಂಬಂಧ ಟ್ವೀಟ್ ಮೂಲಕ ಕಾಂಗ್ರೆಸ್-ಬಿಜೆಪಿ ಫೈಟ್ ಗೆ ಇಳಿದಿದೆ. ಘಟನೆ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಅಶ್ವಥ್ ನಾರಾಯಣ, ರಾಮನಗರದಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಸಹಿಸಲಾಗದ ಕಾಂಗ್ರೆಸ್ ನಾಯಕರು, ಬೆಂಬಲಿಗರು ಮುಖ್ಯಮಂತ್ರಿಗಳು ಆಗಮಿಸಿದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಮರೆತು ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ. ನಾಡ ಗೀತೆ ಹಾಡುವಾಗ ಗಲಾಟೆ ಮಾಡುವುದು ಮತ್ತು ನಾಡ ಪ್ರಭುಗಳ ಪ್ರತಿಮೆ ಅನಾವರಣ ಮಾಡುವಾಗ ದುರ್ವರ್ತನೆ ತೋರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಘಟನೆಯನ್ನು ಕರ್ನಾಟಕ ಬಿಜೆಪಿ ಅಧಿಕೃತ ಟ್ವೀಟರ್ ಖಾತೆ ಮೂಲಕ ಖಂಡಿಸಲಾಗಿದೆ. ಕಾಂಗ್ರೆಸ್ ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇರೆ ಬೇಕಿಲ್ಲ. ಒಬ್ಬ ಸಂಸದರಿಗೆ ರಾಜ್ಯದ ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂಬ ಪರಿಜ್ಞಾನವಿಲ್ಲದಿರುವುದು ವಿಪರ್ಯಾಸ. ಯಥಾ ರಾಜ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವರ್ತಿಸುತ್ತಿರುವುದು ಖಂಡನೀಯ ಎಂದು ಗಲಾಟೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಬಂಡೆ ಕಲ್ಲುಗಳನ್ನೇ ನುಂಗಿ ನೀರು ಕುಡಿದ ಕನಕಪುರದ ರೌಡಿ ಸಹೋದರರಲ್ಲೊಬ್ಬರು ಮುಖ್ಯಮಂತ್ರಿಗಳಿದ್ದ ವೇದಿಕೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ. ಹಾಗಾದರೇ ಭೂಗತರಾಗಿ ಏನೇನು ಮಾಡಿರಬಹುದು!? ಕೊತ್ವಾಲನ ಶಿಷ್ಯರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳೇ #ರೌಡಿಡಿಕೆಬ್ರದರ್ಸ್ ಗಳ ಇತಿಹಾಸ ಹೇಳುತ್ತದೆ ಎನ್ನುವ ಮೂಲಕ ಡಿಕೆ ಸೋದರರನ್ನು ರೌಡಿಗಳು ಎಂದು ಕರೆದಿದ್ದಾರೆ. ಕನಕಪುರದ ನೈಸರ್ಗಿಕ ಸಂಪತ್ತೆಲ್ಲವೂ ಒಂದೇ ಕುಟುಂಬದ ಸ್ವತ್ತು ಎಂಬಂತೆ #ರೌಡಿಡಿಕೆಬ್ರದರ್ಸ್ ನೋಡಿಕೊಂಡಿದ್ದಾರೆ. ಅಧಿಕಾರದ ರುಚಿ ನೋಡುವುದಕ್ಕೆ ಮುನ್ನವೇ ಶ್ರೀಗಂಧದ ಕಳ್ಳಸಾಗಣೆ ಮಾಡುತ್ತಿದ್ದವರು ಈಗ ಸರ್ಕಾರಿ ಯಂತ್ರವನ್ನೇ ಬೆದರಿಸುವ ಉಡಾಫೆತನ ತೋರಿದ್ದಾರೆ. ಕರ್ನಾಟಕ ಲಾಲೂ ಕಾಲದ ಬಿಹಾರವಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ವೇದಿಕೆ ಮೇಲೆಯೇ ಸಂಸದ-ಸಚಿವರ ‘ಗಂಡಸ್ತನ’ದ ಗಲಾಟೆ.. ಹೈಡ್ರಾಮಾ ಕಂಡು ಪೆಚ್ಚಾದ CM Bommai
ಸಚಿವ ಆರ್. ಅಶೋಕ್ ಸಹ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಸಚಿವರಾದ ಡಾ.ಅಶ್ವತ್ಥನಾರಾಯಣ ಅವರ ಮೇಲೆ ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಹಲ್ಲೆಗೆ ಪ್ರಯತ್ನಿಸುವ ಮೂಲಕ ಕಾಂಗ್ರೆಸ್ ತನ್ನ ಗೂಂಡಾ ಸಂಸ್ಕೃತಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅನಾವರಣಗೊಳಿಸಿದೆ. ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಮಾರಕ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯದ ಸಚಿವರಾದ ಅಶ್ವತ್ ನಾರಾಯಣ ಅವರು ವೇದಿಕೆಯ ಮೇಲೆ ಭಾಷಣ ಮಾಡುವಾಗ ಅವರತ್ತ ಮುನ್ನುಗ್ಗಿ ಬಂದು ಗೂಂಡಾಗಿರಿ ಪ್ರದರ್ಶಿಸಿದ ಸಂಸದ ಡಿಕೆ ಸುರೇಶ್ ಹಾಗೂ ಕಾಂಗ್ರೆಸ್ ಮುಖಂಡರ ವರ್ತನೆ ಖಂಡನೀಯ ಎಂದು ಬಿಜೆಪಿ ಮುಖಂಡ ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ