ಬೆಂಗಳೂರು: ಕೋವಿಡ್ನಿಂದ 9 ಲಕ್ಷದವರೆಗೂ ಜನ ಆಸ್ಪತ್ರೆಗೆ ಸೇರಿ ಗುಣಮುಖರಾಗಿದ್ದಾರೆ. ಟೆಸ್ಟ್ ನಿಂದ ಹಿಡಿದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋವರೆಗೂ ಸರ್ಕಾರ ಆರೋಗ್ಯ ಸುಧಾರಿಸುವ ವೆಚ್ಚ ಭರಿಸುವ ಕೆಲಸ ಮಾಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತಿದೆ. 18ರಿಂದ 44 ವಯಸ್ಸಿನವರಿಗೆ ರಾಜ್ಯ ಸರ್ಕಾರ ಲಸಿಕೆ ಖರೀದಿಸಿ ಕೊಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ರೋಗಿಗಳಿದ್ದಾರೆ. ಹಳ್ಳಿಗಳಿಗೂ ಸೋಂಕು ಹಬ್ಬುತ್ತಿದೆ. ಐಸೋಲೇಷನ್ ನಲ್ಲಿರೋರು ಹೊರಗೆ ಓಡಾಡ್ತಿದ್ದಾರೆ. ಇದರಿಂದಲೂ ಸೋಂಕು ಹೆಚ್ಚಾಗ್ತಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಬಿಜೆಪಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಬಾವಳಿ,
ತಾಲ್ಲೂಕುಗಳಲ್ಲಿ 289 ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಇನ್ನೂ 19 ಸಾವಿರ ಬೆಡ್ ಗಳು ಖಾಲಿ ಇವೆ. 45 ವರ್ಷ ಮೇಲ್ಪಟ್ಟವರಿಗೆ ಕೊವ್ಯಾಕ್ಸಿನ್ ಮೀಸಲಿಟ್ಟಿದ್ದೇವೆ. ಸೆಕೆಂಡ್ ಡೋಸ್ ಕೋವಿಶೀಲ್ಡ್ ಗೆ ಒಮ್ಮೆ ಸಮಯ ಮುಂದೂಡಲಾಯ್ತು. ಈಗ ಯಾವುದೇ ಸಮಸ್ಯೆ ಇಲ್ಲ. ಲಸಿಕೆಗೆ ಬೇಡಿಕೆ ಜಾಸ್ತಿ ಇದೆ. ಜನಸಂಖ್ಯೆ ಆಧರಿಸಿ ಲಸಿಕೆ ಕೇಂದ್ರ ತೆರೆದಿದ್ದೇವೆ. ಎಲ್ಲ ಪಿಎಚ್ಸಿಗಳಲ್ಲಿ ಲಸಿಕೆ ಇದೆ. ಎರಡನೇ ಡೋಸ್ ನವರಿಗೆ ರಾಜ್ಯದ ಬಳಿ 20 ಸಾವಿರ ಕೋವ್ಯಾಕ್ಸಿನ್ ಡೋಸ್ ಗಳ ಕೊರತೆ ಇದೆ. ಇದನ್ನು ತರಿಸಿಕೊಳ್ಳುತ್ತಿದ್ದೇವೆ. ಕೋವಿಶೀಲ್ಡ್ ಕೊರತೆ ಇಲ್ಲ ಎಂದರು.
ಲಸಿಕೆಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲುವ ವಿಚಾರವಾಗಿ ಮಾತನಾಡಿದ ಲಿಂಬಾವಳಿ, ಲಸಿಕೆ ನಿರ್ವಹಣೆಯಲ್ಲಿ ಲೋಪ ಇದೆ. ಮೆಸೇಜ್ ಬಂದ ಮೇಲೆ ಲಸಿಕೆಗೆ ಬರಬೇಕು. ಹಲವರು ಆನ್ ಲೈನ್ ಮೂಲಕ ಅಪ್ಲೈ ಮಾಡಿ ಬರ್ತಾರೆ. ಇದರಿಂದಲೂ ತೊಂದರೆ ಆಗುತ್ತಿದೆ. ನಿರ್ವಹಣೆ ಸಮಸ್ಯೆ ಸರಿಪಡಿಸುವ ಕೆಲಸ ಆಗುತ್ತಿದೆ ಎನ್ನುವ ಮೂಲಕ ಲಸಿಕೆ ಹಂಚಿಕೆ ವಿಚಾರದಲ್ಲಿ ಲೋಪ ಒಪ್ಪಿಕೊಂಡರು.
ಇದನ್ನು ಓದಿ: ಸಿಎಂ ನಿವಾಸ ರಸ್ತೆ ಬಂದ್ನಿಂದ ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆ ಆರೋಪ; ರಸ್ತೆ ತೆರವಿಗೆ ಕಾಂಗ್ರೆಸ್ ಪಟ್ಟು
ಸಂಸದ ಪಿ ಸಿ ಮೋಹನ್ ಮಾತನಾಡಿ, ಕಪ್ಪು ಶಿಲೀಂಧ್ರ ಕೋವಿಡ್ ನಂತರದ ಪರಿಣಾಮ. ಕಪ್ಪು ಶಿಲೀಂಧ್ರಕ್ಕೆ ಔಷಧ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸೂಚಿಸಿದೆ. ದೇಶಾದ್ಯಂತ ಲಸಿಕೆ ಬಳಕೆ, ಉತ್ಪಾನೆ ಹೆಚ್ಚಾಗಿದೆ. ಪ್ರಧಾನಿಯವರು ಇದುವರೆಗೆ ಸಿಎಂ ಜೊತೆ ಆರು ಸಭೆ ನಡೆಸಿದ್ದಾರೆ. ಕೋವಿಡ್ ತಡೆಯಲು ಹಲವು ಸೂಚನೆ ಕೊಟ್ಟಿದ್ದಾರೆ. ಕೊರೋನಾ ಯುದ್ಧದಲ್ಲಿ ರಾಜ್ಯಕ್ಕೆ ಕೇಂದ್ರವೂ ಬೆಂಬಲಿಸುತ್ತಿದೆ. ಕಾಂಗ್ರೆಸ್ ನವರು ಲಸಿಕೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಿದ್ದರು. ಹೀಗಾಗಿ ಆರಂಭದಲ್ಲಿ ಜನ ಲಸಿಕೆ ಪಡೆಯಲು ಹಿಂಜರಿದರು.ಈಗ ಜನರಿಗೆ ಲಸಿಕೆ ಬಗ್ಗೆ ಅರಿವಾಗಿದೆ. ಜನ ಈಗ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಲಸಿಕೆಗೆ ಪಿಎಂ ಕೇರ್ಸ್ ನಿಂದ 2 ಸಾವಿರ ಕೋಟಿ ರೂ. ಕೊಡಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ಕಿಮ್ಸ್ನಲ್ಲಿ ನಿರೀಕ್ಷಿತ ಸಾಮರ್ಥ್ಯದ ಕೋವಿಡ್ ಚಿಕಿತ್ಸೆ ಸಿಗುತ್ತಿಲ್ಲ: ಸಚಿವ ಸುಧಾಕರ್ ಅಸಮಾಧಾನ
10796 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ವಿದೇಶಗಳಿಂದ ಬಂದಿದೆ. ಆಕ್ಸಿಜನ್ ಉತ್ಪಾದನೆ ಹೆಚ್ಚಾಗಿದೆ. 2000 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು ನಿರ್ಮಾಣವಾಗುತ್ತಿವೆ. ಕೇಂದ್ರದಿಂದ ಅಗತ್ಯ ವೆಂಟಿಲೇಟರ್ ಗಳೂ ಲಭಿಸಿವೆ. ರೆಮೆಡಿಸಿವಿರ್ 1.19 ಕೋಟಿ ವಯಲ್ ಉತ್ಪಾದನೆ ಆಗ್ತಿದೆ. ದೇಶದ 60 ಕಡೆ ರೆಮೆಡಿಸಿವಿರ್ ಉತ್ಪಾದನೆ ಆಗ್ತಿದೆ ಎಂದು ಹೇಳಿದರು.
ಶಾಸಕ ಮುನಿರತ್ನ ಮಾತನಾಡಿ, ನಮ್ಮ ಕ್ಷೇತ್ರಕ್ಕೆ ಆಕ್ಸಿಜನ್ ಟ್ಯಾಂಕ್ ತರಿಸಿದ್ದೇವೆ. ಮೋದಿಯವರ ಸೂಚನೆಯಂತೆ ಎಲ್ಲ ಕ್ಷೇತ್ರಗಳಲ್ಲೂ ಆಕ್ಸಿಜನ್ ಟ್ಯಾಂಕ್ ಇರಬೇಕು. ಕ್ಷೇತ್ರದಲ್ಲಿ ಪ್ರತಿಯೊಬ್ಬರ ಜೀವರಕ್ಷಣೆ ನಮ್ಮ ಹೊಣೆ ಆಗಿರುತ್ತೆ. ಇನ್ನು ಎರಡು ವಾರದಲ್ಲಿ ಆರ್ ಆರ್ ನಗರದಲ್ಲಿ ಆರೋಗ್ಯ ಸೌಕರ್ಯಗಳನ್ನು ಹೆಚ್ಚಳ ಮಾಡುತ್ತೇವೆ ಎಂದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ