ಬೆಂಗಳೂರು (ಜೂ. 29): ಕೋವಿಡ್ ಎರಡನೇ ಅಲೆ ಸೋಂಕಿನಿಂದ ತತ್ತರಿಸಿದ್ದ ಬೆಂಗಳೂರಿನಲ್ಲಿ ಸೋಂಕು ಗಣನೀಯವಾಗಿ ಇಳಿಕೆ ಕಂಡಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ 1000ಕ್ಕಿಂತ ಕಡಿಮೆಯಾಗಿದೆ. ನಿಧಾನವಾಗಿ ಲಾಕ್ಡೌನ್ ನಿಯಮಗಳು ಕೂಡ ಸಡಿಲಿಕೆ ಆಗುತ್ತಿದೆ. ಈ ನಡುವೆ ಬೆಂಗಳೂರಿನ ಕೆಲವು ಕಡೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಈ ಬಗ್ಗೆ ತಲೆಕೆಡಿಸಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಹತ್ತು ವಾರ್ಡ್ಗಳನ್ನು ರೆಡ್ ಲಿಸ್ಟ್ನಲ್ಲಿಟ್ಟಿದೆ. ಬೆಂಗಳೂರಿಗರು ಈ ಏರಿಯಾಗಳಲ್ಲಿ ಓಡಾಡುವಾಗ ಎಚ್ಚರಿಕೆಯಿಂದಿರಲೇ ಬೇಕು. ಈತನ್ಮಧ್ಯೆ ಈಗಾಗಲೇ ಮೂರನೇ ಅಲೆ ಎಚ್ಚರಿಕೆಯನ್ನೂ ತಜ್ಞ ವೈದ್ಯರು ಕೊಟ್ಟಿದ್ದಾರೆ.
ಈ ಹತ್ತು ವಾರ್ಡ್ ಗಳಲ್ಲಿ ಪ್ರತಿ ದಿನ ನೂರಕ್ಕೂ ಹೆಚ್ಚಿನ ಸೋಂಕಿತರು ಪತ್ತೆ.!!
ನಗರದ ಮೂರ ವಲಯಗಳಲ್ಲಿನ ಹತ್ತು ವಾರ್ಡ್ ಗಳಲ್ಲಿ ಕಳೆದ ಹತ್ತು ದಿನದಲ್ಲಿ ಕೊರೋನಾ ಸೋಂಕಿನ ದರ ಏರಿಕೆಯಾಗುತ್ತಿದೆ. ಈ ಬಗ್ಗೆ ತನ್ನ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, ಮಹಾದೇವಪುರ ವಲಯ ನಗರದ ಮೋಸ್ಟ್ ಡೇಂಜರ್ ಝೋನ್ ಎಂದಿದೆ. ಕಳೆದ ಹತ್ತು ದಿನದಲ್ಲಿ ಈ ವಲಯದ ಏಳು ವಾರ್ಡ್ ಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದೆ. ಅಕ್ಕ ಪಕ್ಕದ ವಾರ್ಡ್ ಗಳಲ್ಲಿಯೇ ಇಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚಿನ ಸೋಂಕು ಪತ್ತೆಯಾಗ್ತಿರುವುದು ಆತಂಕ ಮೂಡಿಸಿದೆ.
ಸದ್ಯ ಕೊರೋನಾ ಹೆಚ್ಚಿರುವ ನಗರದ 10 ವಾರ್ಡ್ ಗಳು.!!
ಮಹಾದೇವಪುರ :
- ವಾರ್ಡ್ ನಂ. 150 - ಬೆಳ್ಳಂದೂರು : ಸರಾಸರಿ 180 ಕೇಸ್
- ವಾರ್ಡ್ ನಂ. 149 - ವರ್ತೂರು : ಸರಾಸರಿ 120 ಕೇಸ್
- ವಾರ್ಡ್ ನಂ. 25 - ಹೊರಮಾವು : ಸರಾಸರಿ 150 ಕೇಸ್
- ವಾರ್ಡ್ ನಂ. 26 - ರಾಮಮೂರ್ತಿನಗರ : ಸರಾಸರಿ 170 ಕೇಸ್
- ವಾರ್ಡ್ ನಂ. 54 - ಹೂಡಿ : ಸರಾಸರಿ 110 ಕೇಸ್
- ವಾರ್ಡ್ ನಂ. 84 - ಹಗದೂರು : ಸರಾಸರಿ 180 ಕೇಸ್
- ವಾರ್ಡ್ ನಂ. 85 - ದೊಡ್ಡನಕುಂದಿ : ಸರಾಸರಿ 100 ಕೇಸ್
ಪೂರ್ವ ವಲಯ :
- ವಾರ್ಡ್ ನಂ. 111 - ಶಾಂತಲನಗರ : ಸರಾಸರಿ 180 ಕೇಸ್
ಬೊಮ್ಮನಹಳ್ಳಿ :
- ವಾರ್ಡ್ ನಂ. 192 - ಬೇಗೂರು - ಸರಾಸರಿ 122 ಕೇಸ್
ಆರ್ ಆರ್ ನಗರ :
- ವಾರ್ಡ್ ನಂ. 198 - ಹೆಮ್ಮಿಗೆಪುರ : ಸರಾಸರಿ 160 ಕೇಸ್
ಇದನ್ನು ಓದಿ: ಇನ್ನು 10ದಿನದೊಳಗೆ ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ; ಡಿಸಿಎಂ ಅಶ್ವತ್ಥ್ ನಾರಾಯಣ
ಈ ಹತ್ತು ವಾರ್ಡ್ಗಳ ಕೊರೋನಾ ಕಂಟ್ರೋಲ್ಗೆ ಮೈಕ್ರೋ ಪ್ಲ್ಯಾನ್.!!
ಇನ್ನು ಈ ವಾರ್ಡ್ಗಳಲ್ಲಿ ಈಗಾಗಲೇ ಕೊರೋನಾ ಸೋಂಕು ಹೆಚ್ಚಳವಾಗಿದೆ. ನಗರದಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಮೂರನೇ ಅಲೆಯ ಭೀತಿ ಇರುವುದರಿಂದ ಈ ವಾರ್ಡ್ಗಳೇ ಮುಂದಿನ ದಿನಗಳಲ್ಲಿ ಕ್ಯಾರಿಯರ್ ವಾರ್ಡ್ಗಳು ಆಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ಈ ಹತ್ತು ವಾರ್ಡ್ ಗಳ ಮೇಲೆ ನಿಗಾ ಇಡಲು ಬಿಬಿಎಂಪಿ ಸಜ್ಜಾಗಿದೆ. ಇದಕ್ಕೆಂದೇ ವಿಶೇಷ ತಂಡ ರಚಿಸಿ, ಮೂರು ವಲಯಗಳ ಈ ಹತ್ತು ವಾರ್ಡ್ ಗಳಲ್ಲಿ ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡಲು ಪಾಲಿಕೆ ನಿರ್ಧರಿಸಿದೆ. ಅದರಲ್ಲೂ ಪ್ರಮುಖವಾಗಿ ಮಹಾದೇವಪುರದ ಏಳು ವಾರ್ಡ್ಗಳು ಇದ್ದು, ಇಲ್ಲಿ ಅಪಾರ್ಟ್ಮೆಂಟ್ಗಳೇ ಹೆಚ್ಚಿದೆ. ಇಲ್ಲಿನ ಜನರ ನಿರ್ಲಕ್ಷ್ಯವೇ ಇಲ್ಲಿ ಸೋಂಕು ಹೇರಳವಾಗುವುದಕ್ಕೆ ಕಾರಣ ಎಂದು ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಬಹುಶಃ ಹೀಗೆ ಬೆಂಗಳೂರಿನಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಳವಾದರೆ ಶೀಘ್ರವೇ ಮತ್ತೊಂದು ಅಲೆಯನ್ನು ಸಿಲಿಕಾನ್ ಸಿಟಿ ಎದುರಿಸಬೇಕಾದೀತು. ಹೀಗಾಗಿ ಕೊರೋನಾ ವಿರುದ್ಧ ಹೋರಾಟ ನಿರಂತರ ಎಂಬುವುದನ್ನು ಅರ್ಥ ಮಾಡಿಕೊಂಡು ಜನರು ಎಚ್ಚರಿಕೆಯಿಂದ ಇರಬೇಕು. ಜೊತೆಗೆ ಆಡಳಿತ ಯಂತ್ರವೂ ತನ್ನ ಶಕ್ತಿ ಮೀರಿ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
(ವರದಿ- ಆಶಿಕ್ ಮುಲ್ಕಿ)
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ