ಬೆಂಗಳೂರು: ಕೊನೆಗೂ ಬೆಂಗಳೂರಿನ ಶ್ವಾನ ಪೋಷಕರು ಖುಷಿ ಪಡೋಕೆ ಒಂದು ಕಾರಣ ಕೊಟ್ಟಿದೆ ಬಿಬಿಎಂಪಿ. ಕೊರೊನಾ, ಲಾಕ್ ಡೌನ್ಗಳಿಂದ ಜನರಂತೆ ಸಾಕು ನಾಯಿಗಳೂ ಮನೆಯೊಳಗೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು. ರಸ್ತೆಗಳಲ್ಲಿ ಈಗಂತೂ ವಾಹನಗಳು ಹೆಚ್ಚೇ ಇರೋದ್ರಿಂದ ವಾಕಿಂಗ್ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಇನ್ನು ಪಾರ್ಕ್ ಗಳಲ್ಲಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಲು ಅನುಮತಿ ಇಲ್ಲದೇ ಇರೋದ್ರಿಂದ ಶ್ವಾನಪ್ರೇಮಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಈಗ ಬೆಂಗಳೂರಿನ ಕೆರೆಗಳ ಬಳಿಯಲ್ಲಿ ನಾಯಿಗಳನ್ನು ಕರೆದುಕೊಂಡು ವಾಕ್ ಹೋಗಲು ಅನುಮತಿ ನೀಡಲಾಗಿದೆ. ಆದರೆ, ಅದಕ್ಕೆ ಒಂದಷ್ಟು ನಿಯಮಗಳನ್ನು ಕೂಡಾ ತಿಳಿಸಲಾಗಿದೆ.
ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರಗೆ ಬೆಂಗಳೂರಿನ ಕೆರೆಗಳ ಸುತ್ತ ಇರುವ ವಾಕಿಂಗ್ ಪಾಥ್ನಲ್ಲಿ ನಡಿಗೆದಾರರಿಗೆ ಅನುಮತಿ ಇದೆ. ನಾಯಿಗಳನ್ನೂ ಈ ಸಮಯದಲ್ಲೇ ವಾಕಿಂಗ್ ಕರೆದುಕೊಂಡು ಹೋಗಲು ಪಾಲಿಕೆ ಅನುಮತಿಸಿದೆ. ಆದರೆ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆಯಲ್ಲಿ ಹೆಚ್ಚು ವಾಕರ್ಸ್ ಮತ್ತು ಜಾಗರ್ಸ್ ಪಾರ್ಕ್ಗಳಿಗೆ ಭೇಟಿ ನೀಡುತ್ತಾರೆ. ಅವರಲ್ಲಿ ಅನೇಕರಿಗೆ ನಾಯಿಗಳೆಂದರೆ ಭಯ ಇರಬಹುದು. ಹಾಗಾಗಿ ಆ ಸಮಯವನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಲು ಸೂಚಿಸಲಾಗಿದೆ.
ಇನ್ನುಳಿದಂತೆ ವಾಕಿಂಗ್ ಕರೆದುಕೊಂಡು ಹೋಗುವಾಗ ನಾಯಿಗೆ ಲೀಶ್ ಅಥವಾ ಮಜಲ್ (ಕುತ್ತಿಗೆಯ ದಾರ ಅಥವಾ ಬಾಯಿಗೆ ಹಾಕುವ ಮುಚ್ಚಿಗೆ) ಹಾಕುವುದು ಕಡ್ಡಾಯ. ಒಂದು ವೇಳೆ ನಿಮ್ಮ ನಾಯಿ ಪಾರ್ಕಿನಲ್ಲಿ ಯಾರಿಗಾದರೂ ಕಚ್ಚಿ, ಪರಚಿ ಅಥವಾ ಬೇರ್ಯಾವುದೇ ರೀತಿಯಲ್ಲಿ ಹಾನಿ ಮಾಡಿದರೆ ಅದರ ಸಂಪೂರ್ಣ ಜವಾಬ್ದಾರಿ ಮಾಲೀಕರದ್ದೇ ಆಗಿರುತ್ತದೆ. ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿರುವುದು ಕಡ್ಡಾಯ. ಒಂದು ವೇಳೆ ಕೆರೆಯ ಆವರಣದಲ್ಲಿ ನಾಯಿಗಳು ಗಲೀಜು ಮಾಡಿದರೆ ಅದರ ಸ್ವಚ್ಛತೆ ಮಾಲೀಕರದ್ದಾಗಿರುತ್ತದೆ. ತಪ್ಪಿದರೆ 500 ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ಇದನ್ನೂ ಓದಿ: ಹೂ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರವೇ ಹೊಣೆ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂ ಗುಚ್ಛ ನಿಷೇಧಕ್ಕೆ ರೈತರ ವಿರೋಧ
ಇದಲ್ಲದೇ ಬಹಿರಂಗವಾಗಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಬಹುದಾದ ತಳಿಗಳ ಬಗ್ಗೆಯೂ ಬಿಬಿಎಂಪಿ ತಿಳಿಸಿದೆ. ರಾಟ್ವೀಲರ್, ಜರ್ಮನ್ ಶೆಫರ್ಡ್, ಪಿಟ್ ಬುಲ್, ಗ್ರೇಟ್ ಡೇನ್ ಮತ್ತು ಡಾಬರ್ಮನ್ ತಳಿಯ ನಾಯಿಗಳಿಗೆ ಕೆರೆಯ ಆವರಣದೊಳಗೆ ಬರಲು ಅನುಮತಿ ಇರುವುದಿಲ್ಲ. ಈ ತಳಿಯ ನಾಯಿಗಳು ಫೆರೋಶಿಯಸ್ ಆಗಿರುವುದರಿಂದ ಮತ್ತು ಅಲ್ಲಿ ಹೆಚ್ಚು ಜನ ಮತ್ತು ಮಕ್ಕಳು ಇರುವುದರಿಂದ ಇದು ಅಪಾಯಕಾರಿ ಎಂದು ಬಿಬಿಎಂಪಿ ನಿರ್ಧರಿಸಿದೆ.
ಕೊನೆಗೂ ಪ್ರೀತಿಯ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಲು ಕೆರೆಯ ದಂಡೆಯ ಸ್ಥಳದಲ್ಲಿ ಅವಕಾಶ ಮಾಡಿಕೊಟ್ಟಿದ್ದು ಒಳ್ಳೆಯದಾಯ್ತು ಎನ್ನುತ್ತಿದ್ದಾರೆ ಶ್ವಾನಪ್ರೇಮಿಗಳು. ಬಿಬಿಎಂಪಿ ಹಾಕಿರುವ ಎಲ್ಲಾ ನಿಯಮಗಳನ್ನು ನಾವು ಪಾಲಿಸಲು ಸಿದ್ದರಿದ್ದೇವೆ, ಮನೆಯೊಳಗೇ ಇದ್ದೂ ಇದ್ದೂ ನಮ್ಮ ನಾಯಿಗಳಿಗೂ ಖಿನ್ನತೆ ಉಂಟಾದಂತೆ ಆಗಿಬಿಟ್ಟಿದೆ. ದಿನದ ಕೆಲ ಸಮಯವಾದರೂ ಅದೂ ನೆಮ್ಮದಿಯಾಗಿ ಒಂದು ವಾಕ್ ಹೋಗೋಕೆ ಸಾಧ್ಯವಾಗುವ ಈ ಅವಕಾಶ ನಿಜಕ್ಕೂ ಒಳ್ಳೆಯದು ಎನ್ನುತ್ತಾರೆ ನಾಯಿ ಮಾಲೀಕರಾದ ಅನುಷಾ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ