ಬೆಂಗಳೂರು: ಪ್ರತಿದಿನ ಸಂಜೆ ಸುಮಾರು 5 ಗಂಟೆಯ ವೇಳೆಗೆ 30 ವರ್ಷದ ಸುಮನ್ ಮಲ್ಲೇಶ್ವರಂನಲ್ಲಿರುವ ಕೆ ಸಿ ಜನರಲ್ ಆಸ್ಪತ್ರೆಗೆ ಬರುತ್ತಾರೆ. ಕೋವಿಡ್ ಸೋಂಕಿಗೆ ತುತ್ತಾಗಿರುವ 70 ವರ್ಷ ವಯಸ್ಸಿನ ಅವರ ತಾಯಿ ಇಲ್ಲಿಯ ಮಾಡ್ಯುಲಾರ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯು ಎದುರಿನ ಎಲ್ಇಡಿ ಪರದೆಯ ಎದುರು ಸುಮನ್ ಕಾತರದಿಂದ ಕಾಯ್ತಾರೆ. ಕೆಲ ಕ್ಷಣಗಳ ಮಟ್ಟಿಗಾದರೂ ಸರಿ, ತಾಯಿಯ ಮುಖವನ್ನೊಮ್ಮೆ ನೋಡಿ ಸಮಾಧಾನದ ನಿಟ್ಟುಸಿರು ಬಿಡ್ತಾರೆ.
ಕೊರೊನಾ ರಣಕೇಕೆ ಶುರುವಾದ ನಂತರ ಐಸಿಯು ಅನ್ನೋದು ಯಮಲೋಕದ ದ್ವಾರ ಎನ್ನುವಂತೆಯೇ ಆಗಿಬಿಟ್ಟಿದೆ. ಬಹುತೇಕ ಬಾರಿ ಒಳಹೋದವರು ನಂತರ ನಿರ್ಜೀವವಾಗಿ ಹೊರಬರುವ ಪ್ರಕರಣಗಳೇ ಹೆಚ್ಚಾಗಿದೆ. ಹಾಗಾಗಿ ಯಾರಾದರೂ ಆಪ್ತರು ಐಸಿಯುನಲ್ಲಿ ಇದ್ದಾರೆ ಎಂದಾಗ ಕುಟುಂಬಸ್ಥರು ಸಹಜವಾಗಿಯೇ ಗಾಬರಿಯಾಗಿರ್ತಾರೆ. ಕನಿಷ್ಟ ಅವರನ್ನೊಮ್ಮೆ ನೋಡಿದರೆ ಅಷ್ಟೇ ಸಮಾಧಾನ.
“ನನ್ನ ತಾಯಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ಹೇಳಿದಾಗ ನನಗೆ ನಿಜಕ್ಕೂ ಗಾಬರಿಯಾಗಿತ್ತು. ಆದ್ರೆ ಚಿಕಿತ್ಸೆ ಆರಂಭವಾದ ನಂತರ ಇಲ್ಲಿನ ಸಿಬ್ಬಂದಿ ಎಲ್ಇಡಿ ಪರದೆಯ ಮೇಲೆ ಪ್ರತಿದಿನ ನೀವು ನಿಮ್ಮ ತಾಯಿಯನ್ನು ನೋಡಬಹುದು, ಅವರೂ ನಿಮ್ಮನ್ನು ನೋಡಬಹುದು ಎಂದಾಗ ದೊಡ್ಡ ಭಾರವೊಂದು ಇಳಿದಂತಾಯ್ತು. ಅಮ್ಮ ಚೇತರಿಸಿಕೊಳ್ತಿದ್ದಾರೆ ಅನ್ನೋದನ್ನ ನೋಡಿದ್ರೆ ಅವತ್ತಿನ ದಿನ ನಿರಾತಂಕವಾಗಿ ಕಳೆಯುತ್ತೇನೆ. ನಿನ್ನೆ ಅಮ್ಮ ನನ್ನೆಡೆಗೆ ನೋಡಿ ಕೈಬೀಸಿದ್ರು, ಅವ್ರು ಹುಷಾರಾಗ್ತಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ?” ಎಂದು ಭಾವುಕರಾಗ್ತಾರೆ ಸುಮನ್.
ಕೆ ಸಿ ಜನರಲ್ ಆಸ್ಪತ್ರೆಯ ಮಾಡ್ಯುಲಾರ್ ಕಂಟೇನರ್ ಐಸಿಯು ಹೊರಗೆ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದೆ. ಇದರಲ್ಲಿ ಒಂದೊಂದು ಕಂಟೇನರ್ ಒಳಗೂ ರೋಗಿಗಳು ಹೊರಗಿರುವ ತಮ್ಮ ಕುಟುಂಬಸ್ಥರನ್ನು ನೋಡುವ ಸರತಿ ಬಂದಾಗ ನರ್ಸ್ ಅವರ ಕಂಟೇನರ್ ಸಂಖ್ಯೆಯನ್ನು ಘೋಷಿಸುತ್ತಾರೆ. ಆಗ ರೋಗಿಗಳು ಮನೆಯವರನ್ನು, ಮನೆಯವರು ಚಿಕಿತ್ಸೆ ಪಡೆಯುತ್ತಿರುವ ತಮ್ಮವರನ್ನು ನೋಡಬಹುದು.
ದಿನಕ್ಕೆ ಎರಡು ಬಾರಿ ಈ ರೀತಿ ಇಬ್ಬರೂ ಎಲೆಕ್ಟ್ರಾನಿಕ್ ಪರದೆಯ ಮೂಲಕ ಭೇಟಿಯಾಗಬಹುದು. ಇದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪಾಲಿಗೆ ಬಹು ದೊಡ್ಡ ಧೈರ್ಯ ನೀಡುತ್ತದೆ. ಇನ್ನೇನು ಐಸಿಯು ಸೇರಿದ್ದೇವೆಂದರೆ ಬದುಕುವುದೇ ಇಲ್ಲ ಎನಿಸುವವರಿಗೆ ಮನೆಯವರನ್ನು ಐಸಿಯು ಒಳಗಿರುವ ಮತ್ತೊಂದು ಪರದೆಯ ಮೇಲೆ ನೋಡಿಯಾದರೂ ಸಮಾಧಾನ, ಧೈರ್ಯ ಬಂದಂತಾಗುತ್ತದೆ. ಮತ್ತಷ್ಟು ಎದೆಗಾರಿಕೆಯಿಂದ ವೈರಸ್ ವಿರುದ್ಧ ಹೋರಾಡುವ ಶಕ್ತಿ ಬಂದಂತಾಗುತ್ತದೆ.
ಹೀಗೆ ಪರದೆಯ ಮೇಲಿನ ಭೇಟಿಯ ನಂತರ ವೈದ್ಯರು ಐಸಿಯು ಹೊರಗೆ ಬರುತ್ತಾರೆ. ಆಗ ಅಲ್ಲಿರುವ ಕುಟುಂಬಸ್ಥರು ತಮ್ಮ ರೋಗಿಯ ಆರೋಗ್ಯದ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಇದು ಅವರಿಗೂ ಸಾಂತ್ವನ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ