2018ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಒಂದು ವಿಚಾರದ ಸಖತ್ ಸದ್ದು ಮಾಡಿತ್ತು. ಬಾಲಿವುಡ್(Bollywood), ಟಾಲಿವುಡ್(Tollywood), ಕಾಲಿವುಡ್(Kollywood) ಕೊನೆಗೆ ಸ್ಯಾಂಡಲ್ವುಡ್(Sandalwood)ನಲ್ಲೂ ಈ ವಿಚಾರ ಭಾರಿ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಅದೇ ಮೀಟೂ(Me-too) ಪ್ರಕರಣ. ಬಹುಬಾಷಾ ನಟ ಅರ್ಜುನ್ ಸರ್ಜಾ(Arjun Sarja) ವಿರುದ್ಧ ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್(Sruthi Hariharan) ಮೀಟೂ ಕೇಸ್ ದಾಖಲಿಸಿದ್ದರು. ನನಗೆ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನೇ ಸೃಷ್ಟಿಸಿದ್ದರು. ಈ ವಿಚಾರ ಎಲ್ಲಕಡೆ ಹಬ್ಬಿಕೊಂಡಿತ್ತು. ಸಾಕಷ್ಟು ಆರೋಪಗಳು, ಪ್ರತ್ಯಾರೋಪಗಳು ಕೇಳಿಬಂದಿತ್ತು. ಆದರೆ, ಅಂದು ಶ್ರುತಿ ಹರಿಹರನ್ ಮಾಡಿದ್ದ ಆರೋಪಗಳಿಗೆ ಇಂದಿಗೂ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದ ಮೀಟೂ (Me Too) ಕೇಸ್ನಲ್ಲಿ ನಟಿ ಶ್ರುತಿ ಹರಿಹರನ್ (Sruthi Hariharan) ಅವರಿಗೆ ಹಿನ್ನಡೆ ಆಗಿದೆ. ಕೇಸ್ ದಾಖಲಾಗಿ ಮೂರು ವರ್ಷ ಕಳೆದರೂ ನಟ ಅರ್ಜುನ್ ಸರ್ಜಾ ವಿರುದ್ಧ ಒಂದು ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಹೀಗಾಗಿ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಮೂರು ವರ್ಷದ ಬಳಿಕ ಅರ್ಜುನ್ ಸರ್ಜಾ ಅವರಿಗೆ ಕ್ಲೀನ್ ಚಿಟ್(Clean Chit) ಸಿಕ್ಕಿದೆ.
ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್
ನಿನ್ನೆ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ‘ವಿಸ್ಮಯ’ ಸಿನಿಮಾ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಅವರಿಂದ ತಮಗೆ ಲೈಂಗಿಕ ಕಿರುಕುಳ ಆಗಿತ್ತು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಆದರೆ ಸೂಕ್ತ ಸಾಕ್ಷಿ ಸಿಗದ ಕಾರಣ ಅರ್ಜುನ್ ಸರ್ಜಾ ಅವರಿಗೆ ಈ ಕೇಸ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಈ ಆರೋಪ ಕೇಳಿ ಬಂದಾಗ ಅರ್ಜುನ್ ಸರ್ಜಾ ಪ್ರತಿಕ್ರಿಯೆ ನೀಡಿದ್ದರು. ನಾನು ಈ ರೀತಿಯ ಕೆಲಸಗಳನ್ನು ಎಂದು ಮಾಡಿದವನಲ್ಲ. ಈ ಆರೋಪ ನನ್ನ ಮೇಲೆ ಯಾಕೆ ಬಂತು ಗೊತ್ತಿಲ್ಲ. ಎಲ್ಲದ್ದಕ್ಕೂ ಕಾನೂನಿದೆ. ಕಾನೂನಿಗಿಂತ ಇಲ್ಲಿ ಯಾರು ದೊಡ್ಡವರಲ್ಲ ಎಂದು ಹೇಳಿದ್ದರು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು.
ಪ್ರಕರಣದ ಹಿನ್ನೆಲೆ ಏನು?
ಅರುಣ್ ವೈದ್ಯನಾಥನ್ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್ವುಡ್ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು.
ಅಂಬರೀಷ್ ಅವರ ನೇತೃತ್ವದಲ್ಲಿ ನಡೆದಿತ್ತ ಸಭೆ
2018ರಲ್ಲಿ ಈ ವಿವಾದ ಬಗೆಹರಿಸಲು ‘ರೆಬೆಲ್ ಸ್ಟಾರ್’ ಅಂಬರೀಷ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಶ್ರುತಿ ಹರಿಹರನ್ ಅವರು ಸಭೆಯ ಅರ್ಧದಲ್ಲೇ ಹೊರ ನಡೆದಿದ್ದರು. ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಅವರು ಹೇಳಿದ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ (354, 509), ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಕೇಸ್ ದಾಖಲಾಗಿತ್ತು. ಇದೀಗ ಆ ಪ್ರಕರಣಕ್ಕೆ ಸಾಕ್ಷಿ ಸಿಗದ ಕಾರಣ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಇದನ್ನು ಓದಿ : Salman Khan ಬಳಸುವುದು 3 ವರ್ಷದ ಹಳೆಯ ಫೋನ್ ಭಾವನ ಗುಟ್ಟು ರಟ್ಟು ಮಾಡಿದ Aayush Sharma
‘ಧರ್ಮೋ ರಕ್ಷತಿ ರಕ್ಷಿತಃ’ ಎಂದ ಧ್ರುವ!
ಈ ವಿಚಾರ ತಿಳಿಯುತ್ತಿದ್ದಂತೆ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋವೊಂದನ್ನು ಧ್ರುವ ಸರ್ಜಾ ಶೇರ್ ಮಾಡಿದ್ದಾರೆ.
ಸೊಳ್ಳೆ ಬ್ಯಾಟ್ನಿಂದ ಕೀಟಗಳನ್ನು ಸಾಯಿಸುತ್ತಿರುವ ದೃಶ್ಯ ಅದರಲ್ಲಿದ್ದು, ‘ಸೊಳ್ಳೆ ಕ್ರಿಮಿ ಕೀಟ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ