ಶ್ರೀರಾಮುಲು ಆಪ್ತನ ವಂಚನೆ ಪ್ರಕರಣ: ರಾತ್ರಿಯಿಡೀ ರಾಜು ವಿಚಾರಣೆ; ರಾಮುಲು ಮುನಿಸು

ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ರಾಜಣ್ಣನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಮೊಬೈಲ್​ನಲ್ಲಿ ರಾಜಣ್ಣ ಸಂಪರ್ಕ ನಡೆಸಿದ ಹಲವರ ಬಗ್ಗೆ ಫೋನ್ ಕರೆ, ವಾಟ್ಸಪ್ ಚಾಟಿಂಗ್ ಸೇರಿ ಹಲವು ಮಾಹಿತಿ ಪೊಲೀಸರಿಗೆ ಸಿಕ್ಕಿರುವುದು ತಿಳಿದುಬಂದಿದೆ.

ಶ್ರೀರಾಮುಲು ಜೊತೆ ಇರುವ ಆರೋಪಿ ರಾಜು (ಫೈಲ್ ಚಿತ್ರ)

ಶ್ರೀರಾಮುಲು ಜೊತೆ ಇರುವ ಆರೋಪಿ ರಾಜು (ಫೈಲ್ ಚಿತ್ರ)

  • Share this:
ಬೆಂಗಳೂರು(ಜುಲೈ 02): ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಹೆಸರು ಬಳಸಿ ಹಲವರಿಗೆ ವಂಚನೆ ಎಸಗಿದ್ದ ಆರೋಪದ ಮೇಲೆ ನಿನ್ನೆ ವಶಕ್ಕೆ ಪಡೆಯಲಾಗಿದ್ದ ರಾಜಣ್ಣರನ್ನು ಸಿಸಿಬಿ ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದರು. ಆಡುಗೋಡಿ ಟೆಕ್ಸಿಕಲ್ ಸೆಲ್​ನಲ್ಲಿ ಬೆಳಗಿನ ಜಾವ 5ಗಂಟೆಯವರೆಗೂ ಶ್ರೀರಾಮುಲು ಆಪ್ತ ರಾಜಣ್ಣನ ವಿಚಾರಣೆ ನಡೆಯಿತು. ರಾಜಣ್ಣ ಎಸಗಿದ್ದರೆನ್ನಲಾದ ಎಲ್ಲ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದರು. ವಂಚನೆ ಎಸಗಿರುವುದಕ್ಕೆ ಸಾಕ್ಷ್ಯವಾಗಿ ನೀಡಲಾಗಿದ್ದ ಫೋನ್ ಸಂಭಾಷಣೆಯ ತುಣುಕು, ರಾಜಣ್ಣನ ಈಗಿನ ಧ್ವನಿ ಮಾದರಿಯನ್ನ ಪಡೆದ ಸಿಸಿಬಿ ಪೊಲೀಸರು ಇವುಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

34 ವರ್ಷದ ರಾಜಣ್ಣ ತನ್ನ ಹೆಸರು ಹೇಳಿಕೊಂಡು ಹಲವರಿಗೆ ವಂಚನೆ ಎಸಗಿದ್ದಾರೆಂದು ವಿಜಯೇಂದ್ರ ಅವರೇ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಮೂವರ ಜೊತೆ ಫೋನ್​ನಲ್ಲಿ ಮಾತನಾಡಿರುವ ಕುರಿತು ಸಾಕ್ಷ್ಯ, ಟೆಂಡರ್ ಬಿಲ್ ಸ್ಯಾಂಕ್ಷನ್ ಬಗ್ಗೆ ಮಾತನಾಡಿರುವ ಆಡಿಯೋ ಕ್ಲಿಪ್ ಹೀಗೆ ಕೆಲವು ಸಾಕ್ಷ್ಯಗಳನ್ನ ವಿಜಯೇಂದ್ರ ಸಂಗ್ರಹಿಸಿ ಪೊಲೀಸರಿಗೆ ನೀಡಿದ್ದರು. ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ರಾಜಣ್ಣನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಮೊಬೈಲ್​ನಲ್ಲಿ ರಾಜಣ್ಣ ಸಂಪರ್ಕ ನಡೆಸಿದ ಹಲವರ ಬಗ್ಗೆ ಫೋನ್ ಕರೆ, ವಾಟ್ಸಪ್ ಚಾಟಿಂಗ್ ಸೇರಿ ಹಲವು ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ರಾಜಣ್ಣನ ಸಂಪರ್ಕದಲ್ಲಿದ್ದ ಕೆಲವರು ತಮ್ಮ ಬಗ್ಗೆ ಉಲ್ಲೇಖ ಮಾಡದಂತೆ ಸಿಸಿಬಿ ಪೊಲೀಸರಿಗೆ ಮನವಿ ಮಾಡಿಕೊಂಡಿರುವುದು ತಿಳಿದುಬಂದಿದೆ.

ಶ್ರೀರಾಮುಲು ಬೇಸರ:

ಇದೇ ವೇಳೆ, ಈ ಪ್ರಕರಣದ ಒಟ್ಟಾರೆ ಬೆಳವಣಿಗೆ ಬಗ್ಗೆ ಸಚಿವ ಬಿ ಶ್ರೀರಾಮುಲು ಬೇಸರ ಹೊಂದಿದ್ದಾರೆನ್ನಲಾಗಿದೆ. ರಾಜು ತನಗೆ ಗೊತ್ತಿರುವ ಹುಡುಗನಾಗಿದ್ದಾನೆ. ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ರಾಜುವನ್ನು ಕೂರಿಸಿ ವಿಚಾರಿಸುತ್ತಿದ್ದೆ. ಈ ಪ್ರಕಣದಲ್ಲಿ ಏನಾಗಿದೆ ಅಂತ ನನಗೆ ಗೊತ್ತಿಲ್ಲ ಎಂದು ತಮ್ಮ ಆಪ್ತರ ಜೊತೆ ಶ್ರೀರಾಮುಲು ಹೇಳಿಕೊಂಡರೆನ್ನಲಾಗಿದೆ.

ಇದನ್ನೂ ಓದಿ: ನಾನು ಮಂತ್ರಿ ಸ್ಥಾನ ಕೇಳಿಲ್ಲ, ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗಲು ಪ್ರಯತ್ನಿಸುತ್ತೇವೆ; ಬಾಲಚಂದ್ರ ಜಾರಕಿಹೊಳಿ

ರಾಜು ಅಧಿಕೃತವಾಗಿ ನನ್ನ ಬಳಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಪ್ಪಿತಸ್ಥರನ್ನು ಕಾಪಾಡುವ ವ್ಯಕ್ತಿ ನಾನಲ್ಲ. ತನಿಖೆ ಆಗಿ ನಂತರ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಈಗ ತನಿಖೆ ನಡೆಯುವ ಸಮಯದಲ್ಲಿ ನಾನು ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಮಾಧ್ಯಮಗಳೆದುರು ಶ್ರೀರಾಮುಲು ಹೇಳಿಕೆ ನೀಡಿದರು.

ಇನ್ನು, ಇವತ್ತು ವಿಧಾನಸೌಧದಲ್ಲಿ ಸಿಎಂ ಕಚೇರಿ ಮುಂದೆ ಬಂದರೂ ಶ್ರೀರಾಮುಲು ಅತ್ತ ತಿರುಗಿ ನೋಡದೇ ಹೋಗಿದ್ದ ಕುತೂಹಲ ಮೂಡಿಸಿತು. ಸಿಎಂ ಕೊಠಡಿಯ ಮುಂದೆಯೇ ಹಾದು ಹೋಗಿ ತಮ್ಮ ಕೊಠಡಿಗೆ ಅವರು ಬಂದರು. ಆದರೆ, ಸಿಎಂ ಭೇಟಿ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ, ರೀ ಇವಾಗ ಪರಿಷತ್ ಸಭೆ ಇದೆ ಎಂದು ಶ್ರೀರಾಮುಲು ಕೆರಳಿ ಕೆಂಡವಾದರು.

ವಿಜಯೇಂದ್ರ ಟ್ವೀಟ್:

ಇದೇ ವೇಳೆ, ರಾಜು ವಿರುದ್ಧ ದೂರು ದಾಖಲಿಸಿದ್ದ ಬಿ.ವೈ. ವಿಜಯೇಂದ್ರ ಇವತ್ತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ.

“ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ” ಎಂದು ಸಿಎಂ ಯಡಿಯೂರಪ್ಪ ಅವರ ಕಿರಿಯ ಮಗನೂ ಆದ ವಿಜಯೇಂದ್ರ ತಮ್ಮ ಟ್ವೀಟ್​ಗಳ ಮೂಲಕ ತಿಳಿಸಿದ್ದಾರೆ.
Published by:Vijayasarthy SN
First published: