Prepaid Electricity Meter: ಬೆಂಗಳೂರಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್: ರಿಚಾರ್ಜ್ ಮಾಡಿ, ಕರೆಂಟ್ ಬಳಸಿ

ನಿಮಗೆ ಎಷ್ಟು ವಿದ್ಯುತ್ ಬೇಕೋ ಅಷ್ಟಕ್ಕೆ ಮೊದಲೇ ಹಣ ಕಟ್ಟಿ, ಆಮೇಲೆ ವಿದ್ಯುತ್  ಬಳಸಬಹುದು. ಮೊಬೈಲ್ ಫೋನ್​​ಗಳಲ್ಲಿ ಪ್ರೀಪೇಯ್ಡ್ ಮಾದರಿಯ ವ್ಯವಸ್ಥೆ ಶೀಘ್ರದಲ್ಲೇ ನಿಮ್ಮ ಮನೆಯ ವಿದ್ಯುತ್ ಮೀಟರ್ ಗೂ ಬರಲಿದೆ. 

ಪ್ರೀಪೇಯ್ಡ್ ವಿದ್ಯುತ್ ಮೀಟರ್

ಪ್ರೀಪೇಯ್ಡ್ ವಿದ್ಯುತ್ ಮೀಟರ್

  • Share this:
ಲೈಟ್ ಜಾಸ್ತಿ ಹೊತ್ತು ಉರಿಸೊಲ್ಲ. ಟಿವಿ ನೋಡೋಕೆ ಮನೆಯಲ್ಲೇ ಇರೊಲ್ಲ. ಈ ಫ್ರಿಡ್ಜ್, ವಾಷಿಂಗ್ ಮಿಷನ್ ಬಳಸಿದ್ರೆ ಕರೆಂಟ್ ಬಿಲ್ ಇಷ್ಟೊಂದ್ ಬರುತ್ತಾ ಎಂದು ಬಹುತೇಕರು ಪ್ರಶ್ನಿಸುತ್ತಾರೆ. ಆದ್ರೆ, ಇನ್ಮುಂದೆ ಆ ಟೆನ್ಷನ್ ಬಿಟ್ಟಾಕಿ. ಯಾಕಂದ್ರೆ ಈ ಸಮಸ್ಯೆಗೆ ಬ್ರೇಕ್ ಹಾಕಲು ಸರ್ಕಾರ ಹೊಸ ಪ್ಲ್ಯಾನ್ ಮಾಡ್ತಿದೆ. ತಿಂಗಳ ಕೊನೆಯಾಗಿದ್ದೇ ತಡ ವಾಟರ್ ಬಿಲ್, ಕರೆಂಟ್ ಬಿಲ್, ಗ್ಯಾಸ್ ಬಿಲ್ ಅಂತ ಸಾಲು ಸಾಲು ಬಿಲ್ ಗಳು ಬರುತ್ತವೆ. ಬಿಲ್ ಬಂದ ಕೂಡಲೇ ಟೆನ್ಷನ್ ತರೋದು ಈ ಕರೆಂಟ್ ಬಿಲ್. ಆದರೆ, ಇನ್ಮುಂದೆ ಇಂತಹ ಟೆನ್ಷನ್ ಇರೋದಿಲ್ಲ. ಯಾಕಂದ್ರೆ, ನಿಮಗೆ ಎಷ್ಟು ವಿದ್ಯುತ್ ಬೇಕೋ ಅಷ್ಟಕ್ಕೆ ಮೊದಲೇ ಹಣ ಕಟ್ಟಿ, ಆಮೇಲೆ ವಿದ್ಯುತ್  ಬಳಸಬಹುದು. ಮೊಬೈಲ್ ಫೋನ್​​ಗಳಲ್ಲಿ ಪ್ರೀಪೇಯ್ಡ್ ಮಾದರಿಯ ವ್ಯವಸ್ಥೆ ಶೀಘ್ರದಲ್ಲೇ ನಿಮ್ಮ ಮನೆಯ ವಿದ್ಯುತ್ ಮೀಟರ್ ಗೂ ಬರಲಿದೆ. 

ರಾಜ್ಯದ ಎಲ್ಲಾ ಐದು ಎಸ್ಕಾಂ ವ್ಯಾಪ್ತಿಯಲ್ಲೂ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಜು.22ರಂದು ಪತ್ರ ಬರೆದಿರುವ ಕೇಂದ್ರ ಇಂಧನ ಸಚಿವಾಲಯ, ಕೂಡಲೇ ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ 2023ರ ಡಿಸೆಂಬರ್ ಒಳಗಾಗಿ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಬೇಕು ಎಂದು ಸ್ಪಷ್ಟಸೂಚನೆ ನೀಡಿತ್ತು.

ವಿದ್ಯುತ್ ಸೋರಿಕೆ, ನಷ್ಟ ತಗ್ಗಿಸಲು ಎಸ್ಕಾಂಗಳು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಿದರೆ ಶೇ.15ರಷ್ಟು ಪ್ರೋತ್ಸಾಹಧನವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಬಗ್ಗೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಅವರು ಈಗಾಗಲೇ ಎಸ್ಕಾಂಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಬೆಂಗಳೂರು ಹೊರವಲಯ ವ್ಯಾಪ್ತಿಯ ಚಂದಾಪುರದಲ್ಲಿ ಈಗಾಗಲೇ ಸ್ಮಾರ್ಟ್ ಮೀಟರ್ ಪ್ರಾಯೋಗಿಕ ಅಳವಡಿಕೆ ಜಾರಿಯಾಗಿದ್ದು, ಕೇಂದ್ರ ಸರ್ಕಾರವು 2020ರ ಜನವರಿಯಿಂದ ಈಚೆಗೆ ಅಳವಡಿಸಿರುವ ಮೀಟರ್ಗಳಿಗೂ ಸಹಾಯಧನ ನೀಡುವುದಾಗಿ ತಿಳಿಸಿದೆ. ಹೀಗಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಮತ್ತಷ್ಟು ಉಪ ವಿಭಾಗಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮ್ಮ ಮನೆಯ ವಿದ್ಯುತ್ ಬಿಲ್ ತುಂಬಾ ಜಾಸ್ತಿ ಬರುತ್ತಿದೆಯೇ..? ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಉಪಾಯ

ಕೇಂದ್ರ ಇಂಧನ ಇಲಾಖೆಯು ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಿಸಿ ಆದಾಯ ಸೋರಿಕೆ ತಡೆಯಲು ರೀ ವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಮ್  ಹೆಸರಿನಲ್ಲಿ ಯೋಜನೆ ರೂಪಿಸಿದೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಹಾಗೂ ವಿದ್ಯುತ್ ಸೋರಿಕೆಯಿಂದ ಉಂಟಾಗುತ್ತಿರುವ  ಅಗ್ರಿಗೇಟ್ ಟೆಕ್ನಿಕಲ್ ಅಂಡ್ ಕಮರ್ಷಿಯಲ್ ಲಾಸ್ ದೇಶಾದ್ಯಂತ ಶೇ.12ರಿಂದ 15ರಷ್ಟುಕಡಿಮೆ ಮಾಡಲು ಹಾಗೂ 2024-25ರ ವೇಳೆಗೆ ಶೂನ್ಯಕ್ಕೆ ತರಲು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ. ದೇಶಾದ್ಯಂತ ಒಟ್ಟು 3.03 ಲಕ್ಷ ಕೋಟಿ ರು. ವೆಚ್ಚವಾಗುವ ಈ ಯೋಜನೆಗೆ ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 97,631 ಕೋಟಿ ರೂ. ನೆರವು ನೀಡಲಾಗುತ್ತದೆ.

ರಾಜ್ಯದಲ್ಲಿ ಡಿಸೆಂಬರ್ 2023ರ ಒಳಗಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿದರೆ ಶೇ.15ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು. ಪ್ರತಿ ಮೀಟರ್ಗೆ ಕನಿಷ್ಠ 900 ರೂ. ಗಳನ್ನು ಕೇಂದ್ರ ಸರ್ಕಾರವೇ ಮರುಪಾವತಿ ಮಾಡುತ್ತೆ. ಈ ಬಗ್ಗೆ ಎಸ್ಕಾಂಗಳಿಂದ  ಕ್ರಿಯಾಯೋಜನೆ ಸಿದ್ಧಪಡಿಸಿ ಒಪ್ಪಿಗೆ ಪಡೆಯಬೇಕು. 2023ರ ಡಿಸೆಂಬರ್ ಒಳಗಾಗಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗುವ ಎಸ್ಕಾಂಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಪ್ರೀಪೇಯ್ಡ್ ಯೋಜನೆ ಜಾರಿ ಉದ್ದೇಶವೇನು..?

ಪ್ರತೀ ವರ್ಷ ಇಂಡಸ್ಟ್ರೀಸ್ ಹಾಗೂ ಮನೆಗಳಿಂದ ಕೋಟಿ ಕೋಟಿ ಹಣ ಬೆಸ್ಕಾಂಗೆ ನಷ್ಟವಾಗುತ್ತಿತ್ತು. ಈ ನಷ್ಟವನ್ನ ಕಡಿಮೆ ಮಾಡಲು ಮತ್ತು ವಿದ್ಯುತ್ ಪೂರೈಕೆ ಸುಧಾರಣೆಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಮತ್ತೊಂದೆಡೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆಗೆ ಸಹಕಾರ ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತೀ ಮೀಟರ್ ಅಳವಡಿಕೆಯ ಪ್ರೋತ್ಸಾಹಧನವನ್ನು ಮೊದಲೇ ನೀಡುವುದಿಲ್ಲ. ಮೀಟರ್ ಅಳವಡಿಕೆಯಾಗಿ ಒಂದು ತಿಂಗಳ ಬಿಲ್ಲಿಂಗ್ ಆದ ಮೇಲೆ ಮಾನಿಟರಿಂಗ್ ಕಮಿಟಿ ವರದಿ ಆಧಾರದ ಮೇಲೆ ಪ್ರೋತ್ಸಾಹಧನ ನೀಡಲಾಗುವುದು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ಮೊದಲು ಒಪ್ಪಂದಕ್ಕೆ ಸಹಿ ಹಾಕುವುದು ಕಡ್ಡಾಯ ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದಿಂದ 200 ಕೋಟಿ ರು. ಕನ್ಸಲ್ಟೆನ್ಸಿಗಾಗಿ ವೆಚ್ಚ ಮಾಡಬೇಕು. ಕೇಂದ್ರದ ಮಾರ್ಗಸೂಚಿ ಅನ್ವಯ ಯೋಜನೆ ಅನುಷ್ಠಾನಗೊಳಿಸಬೇಕು. ಯೋಜನೆಯು 2021-22ರಿಂದ 2025-26ರವರೆಗೆ ಅನ್ವಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಟ್ನಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ಈ ಪ್ರೀಪೇಯ್ಡ್ ವ್ಯವಸ್ಥೆ ತಾತ್ಕಾಲಿಕವಾಗಿ ಜಾರಿಯಲ್ಲಿದೆ. ಸಂಪೂರ್ಣವಾಗಿ ಡಿಜಿಟಲೀಕರಣವಾಗೋಕೆ ಕನಿಷ್ಟ ಎರಡು ವರ್ಷಗಳಾದ್ರೂ ಬೇಕೇ ಬೇಕು. ಆದರೆ, ಕೇಂದ್ರ ಸರ್ಕಾರದ ಈ ಪ್ರೀಪೇಯ್ಡ್ ಪ್ಲ್ಯಾನ್ ಪ್ಲಾಪ್ ಆಗುತ್ತಾ ಅಥವಾ ಸಕ್ಸಸ್ ಆಗುತ್ತೆ ಅಂತ ಕಾದು ನೋಡ್ಬೇಕಿದೆ.
Published by:Kavya V
First published: