ಬೆಂಗಳೂರು (ಜು. 5): ಮೇಕೇದಾಟು ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ಗೆ ಸಿಎಂ ಪತ್ರ ಬರೆದಿದ್ದು ತಪ್ಪು ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಅಣೆಕಟ್ಟು ಕಟ್ಟಲು ಅವರ ಅನುಮತಿ ಯಾಕೆ ಬೇಕು. ನಮ್ಮ ಕೆಲಸ ನಾವು ಮಾಡಬೇಕು. ಕೋರ್ಟ್ ಆದೇಶದಂತೆ ನಾವು ಕೆಲಸ ಮಾಡಬೇಕು. ಇವರು ಪತ್ರ ಬರೆದಿದ್ದಕ್ಕೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬೇಡಿ ಎಂದು ಸ್ಟಾಲಿನ್ ಪತ್ರಿಕ್ರಿಯಿಸಿರುವುದು. ಪತ್ರ ಬರೆದು ಅನುಮತಿ ಕೇಳಿದರೆ ಯಾರು ಒಪ್ಪಲ್ಲ ಎಂದರು.
ಮೇಕೆದಾಟು ಯೋಜನೆಯಿಂದ ಎರಡು ರಾಜ್ಯಗಳಿಗೂ ಯಾವುದೇ ಸಮಸ್ಯೆ ಇಲ್ಲ. ಡ್ಯಾಮ್ ಕಟ್ಟೋದರಿಂದ ಅವರ ಪಾಲಿನ ನೀರಿಗೆ ಸಮಸ್ಯೆ ಆಗಲ್ಲ. ನಮ್ಮ ಸರ್ಕಾರ ಇದ್ದಾಗ ನೀರಿನ ವಿಚಾರದಲ್ಲಿ ಪತ್ರ ಬರೆದು ಅನುಮತಿ ಕೇಳಿಲ್ಲ ಎಂದರು.
ಮುಖ್ಯುಸಿಎಂ ಜತೆ ವಿಪಕ್ಷಗಳು ಶಾಮೀಲು ಎನ್ನುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ಯತ್ನಾಳ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಹ ಭ್ರಷ್ಟಾಚಾರ ಸರ್ಕಾರದಲ್ಲಿ ಇವರೇಕೆ ಶಾಸಕನಾಗಿ ಮುಂದುವರೆಯಬೇಕು ಎಂದು ಪ್ರಶ್ನಿಸಿದರು. ಯತ್ನಾಳ್ ಬಹಳ ದಿನದಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅಂತಹ ಕಡೆ ಶಾಸಕನಾಗಿ ಮುಂದುವರೆದಿದ್ದು ಯಾಕೆ . ಇನ್ನು ವಿಪಕ್ಷಗಳ ಕುರಿತು ಮಾತನಾಡುವ ಯಾವುದೇ ಅಧಿಕಾರ ಅವರಿಗಿಲ್ಲ ಎಂದು ಇದೇ ವೇಳೆ ತಿರುಗೇಟು ನೀಡಿದರು.
ಇದನ್ನು ಓದಿ: ಇಂದು ಸಂಜೆಯೂ ಮುಂದುವರೆಯಲಿದೆ ವರುಣನ ಆರ್ಭಟ; ಮನೆಯಿಂದ ಹೊರಡುವ ಮುನ್ನ ಎಚ್ಚರ!
ರಾಜ್ಯದ ಮಹತ್ವಕಾಂಕ್ಷೆಯ ಮೇಕೆದಾಟು ಯೋಜನೆಗೆ ಈಗಾಗಲೇ ಎನ್ಜಿಟಿ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದೆ. ಆದರೆ ಇದಕ್ಕೆ ತಮಿಳುನಾಡು ಸರ್ಕಾರ ಅಡ್ಡಿ ಪಡಿಸಿದೆ. ಇದೇ ಹಿನ್ನಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಯೋಜನೆ ಆರಂಭಿಸಿದ್ದು, ಈ ಯೋಜನೆಗೆ ಸಹಕಾರ ನೀಡುವಂತೆ ಕೋರಿದ್ದರು. ಮೇಕೆದಾಟು ಕುಡಿಯುವ ನೀರಿನ ಯೋಜನೆಯಿಂದ ಎರಡು ರಾಜ್ಯಗಳಿಗೂ ಸಹಾಯವಾಗಿದೆ, ಸುಪ್ರೀಂ ಕೋರ್ಟ್ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಸುಪ್ರೀಂ ಕೋರ್ಟ್ 400ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಿದ್ದು, 4.75 ಟಿಎಂಸಿ ನೀರು ಕುಡಿಯುವ ನೀರಿಗೆ ಅವಕಾಶ ನೀಡಿತ್ತು. ಈ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದರು.
ಈ ಪತ್ರಕ್ಕೆ ಉತ್ತರಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್, ಈ ಯೋಜನೆ ಕೈಗೊಳ್ಳದಂತೆ ಪತ್ರದ ಮೂಲಕ ತಿಳಿಸಿದ್ದರು. ಅಲ್ಲದೇ, ಕಾವೇರಿ ನದಿ ಪಾತ್ರದಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಎರಡು ಜಲವಿದ್ಯುತ್ ಯೋಜನೆಗಳಿಗೂ, ಕರ್ನಾಟಕದ ಮೇಕೆದಾಟು ಯೋಜನೆಗೂ ಹೋಲಿಕೆ ಮಾಡಬೇಡಿ. ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯಡಿ 67.16 ಟಿಎಂಸಿ ನೀರಿನ ಸಂಗ್ರಹ ಪ್ರಸ್ತಾಪ ಮಾಡಿದೆ. ಇದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಈ ಯೋಜನೆ ಜಾರಿಯಾದರೆ, ಅಂತಾರಾಜ್ಯ ನೀರಾವರಿ ಹಂಚಿಕೆಯ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ