BS yediyurappa: ಬಿಎಸ್​ವೈ ಬಗ್ಗೆ ಅನುಕಂಪವಿದೆ, ಅವರ ಮುಂದಿನ ಜೀವನ ಸುಖಕರವಾಗಿರಲಿ; ಸಿದ್ದರಾಮಯ್ಯ

ಮೋದಿ  ಅವರಿಗೆ ಒಂದಿಷ್ಟು ಮರ್ಯಾದೆ ಇದ್ದರೆ, ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಿ

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು (ಜು. 26): ತಮ್ಮ ಸರ್ಕಾರದ ಎರಡನೇ ವರ್ಷದ ಸಾಧನ ಸಮಾವೇಶದ ಸಂಭ್ರಮದ ದಿನದಂದೇ ಬಿಎಸ್​ ಯಡಿಯೂರಪ್ಪ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕಡೆಗೂ ಉತ್ತರ ಸಿಕ್ಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಎಸ್​ ಯಡಿಯೂರಪ್ಪ ರಾಜೀನಾಮೆ ನಿರೀಕ್ಷಿತವಾದದ್ದೆ. ಈ ಕುರಿತು ಈ ಹಿಂದೆಯೇ ಹೇಳಿದ್ದೆ. ಯಡಿಯೂರಪ್ಪ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ ಎಂದಿದ್ದಾರೆ.  ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದು, ಇನ್ನು ಎರಡು ವರ್ಷ ಅಧಿಕಾರ ಅವಧಿ ಇದ್ದು, ಅದಕ್ಕೂ ಮೊದಲೇ ಸಿಎಂ ಸ್ಥಾನಕ್ಕೆ ವಯಸ್ಸಿನ ನೆಪ ಹೇಳಿ ಬಿಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗಿದೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಪ್ರಮುಖ ಕಾರಣ ವಯಸ್ಸಾ ಅಥವಾ ಅವರ ಸರ್ಕಾರದ ಭ್ರಷ್ಟಚಾರವಾ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

  ಇದೇ ವೇಳೆ ನಾಯಕತ್ವ ಬದಲಾವಣೆಯಿಂದ ನಮಗೆ ಸಂಭ್ರಮವಿಲ್ಲ. ಯಡಿಯೂರಪ್ಪ ಹೋದರೂ, ಇನ್ನೊಬ್ಬರು ಬಂದರೂ ಅದರ ಭ್ರಷ್ಟತೆಯ ಆತ್ಮ ಬದಲಾಗುವುದಿಲ್ಲ. ದುಡ್ಡಿನ ಬಲದಿಂದ ನಡೆಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ಹಾದಿಯಿಂದ ಅಧಿಕಾರಕ್ಕೆ ಬಂದಿದೆ. ನಮ್ಮ ಸಂಭ್ರಮ ಏನಿದ್ದರೂ ಭ್ರಷ್ಟ ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಸೋಲಿಸಿದಾಗ. ಆ ದಿನಗಳು ಕೂಡ ಶೀಘ್ರದಲ್ಲಿಯೇ ಬರಲಿದೆ ಎಂದು ಟ್ವೀಟ್​ ಮೂಲಕ ಕುಟುಕಿದ್ದಾರೆ.  ಬಿಜೆಪಿ ಸರ್ಕಾರ ಎಂದರೆ ಅದು ಭಷ್ಟ್ರಚಾರ ಜಾರಿ ಪಾರ್ಟಿ. ಬಿ ಎಸ್​ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಾಯ್ತುಂಬ ಮಾತನಾಡಿದ್ದಾರೆ. ಭ್ರಷ್ಟಚಾರದ ವಿರುದ್ಧ ಮಾತನಾಡುವ ಪ್ರಧಾನಿ ಮೋದಿ ನಾ ಖಾವುಂಗಾ, ನಾ ಖಾನೆ ದೂಂಗಾ’ ಎಂದು ಹೇಳುತ್ತಾರೆ. ಮೋದಿ  ಅವರಿಗೆ ಒಂದಿಷ್ಟು ಮರ್ಯಾದೆ ಇದ್ದರೆ, ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಇದೇ ವೇಳೆ ಸವಾಲ್​ ಹಾಕಿದ್ದಾರೆ.

  ಯಡಿಯೂರಪ್ಪ ಬದಲಾವಣೆಯಿಂದ ಕಾಂಗ್ರೆಸ್ ಗೆ ಪ್ಲಸ್ ಮೈನಸ್ ಮುಖ್ಯ ಅಲ್ಲ.ಆದರೆ, ಒಬ್ಬ ಭ್ರಷ್ಟ ಮುಖ್ಯಮಂತ್ರಿ ಹೋಗುತ್ತಿದ್ದಾರೆ ಎನ್ನುವುದು ಮುಖ್ಯ ಎಂದು ಕೂಡ ಅವರು ತಿಳಿಸಿದ್ದಾರೆ.

  ಇದನ್ನು ಓದಿ: ದೆಹಲಿಯಲ್ಲಿ ಅಮಿತ್​ ಶಾ ತುರ್ತು ಸಭೆ; ರಾಜ್ಯಕ್ಕೆ ನಾಳೆ ಧರ್ಮೇಂದ್ರ ಪ್ರಧಾನ್

  ಮುಖ್ಯಮಂತ್ರಿ ಪದತ್ಯಾಗದ ಕುರಿತು ಸರಣಿ ಟ್ವೀಟ್​ಗಳ ಮೂಲಕ ಹರಿಹಾಯ್ದಿರುವ ಕಾಂಗ್ರೆಸ್​, ರಾಜೀನಾಮೆ ವಿಚಾರ ಪ್ರಸ್ತಾಪಿಸಿದ ಸಾಧನ ಸಮಾವೇಶದಲ್ಲಿ ಬಿ ಎಸ್​ ಯಡಿಯೂರಪ್ಪ ಅವರು  ಕಣ್ಣೀರಿಟ್ಟಿದ್ದು, ಇದು ಒಬ್ಬ ವ್ಯಕ್ತಿಯ ಕಣ್ಣೀರಲ್ಲ, ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಅವರ ರಾಜೀನಾಮೆ ಹಿಂದೆ ಸಂತೋಷ ಕಾಣಲಿಲ್ಲ, ಬದಲಿಗೆ ಅವರ ನಿರ್ಧಾರದಲ್ಲಿ ನೋವಿತ್ತು. ಆ ನೋವು ಕೊಟ್ಟವರು ಯಾರು ಎಂಬುದನ್ನು ಅವರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದೆ. 

  ಮೊನ್ನೆ ಮೊನ್ನೆಯವರೆಗೂ ನಾನೇ ಇನ್ನೆರೆಡು ವರ್ಷ ಸಿಎಂ ಎನ್ನುತ್ತಿದ್ದವರು ಈಗ ಏಕಾಏಕಿ ರಾಜೀನಾಮೆ ನೀಡಿದ ಕಾರಣವೇನು ಹೇಳಿ? ನಮ್ಮ ಸಿಎಂ ಬಿಎಸ್​ವೈ ಎಂದು ಪದೇ ಪದೇ ಹೇಳುತ್ತಿದ್ದ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ತಮ್ಮ ಭೀಷ್ಮನನ್ನು  ಬಾಣ ಬಿಟ್ಟು ಶರಶಯ್ಯೆಯಲ್ಲಿ ಮಲಗಿಸಿಬಿಟ್ಟಿದ್ದಾರೆ ಎಂದು ಕುಟುಕಿದ್ದಾರೆ. 

  ಸಿಎಂ ರಾಜೀನಾಮೆ ನೀಡಿರುವುದು ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ? ಬೆದರಿಕೆಗಾಗಿಯೇ? ಬ್ಲಾಕ್‌ಮೇಲ್‌ಗಾಗಿಯೇ? ಯಾವ ಕಾರಣಕ್ಕಾಗಿ  ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಇದೇ ವೇಳೆ  ಕಾಂಗ್ರೆಸ್​ ಒತ್ತಾಯಿಸಿದೆ.
  Published by:Seema R
  First published: