ನಿಮ್ಮ ಕೈಗಳ ಮೇಲೆ ರಕ್ತವಿದೆ, ಅದ್ಹೇಗೆ ನಿದ್ದೆ ಮಾಡ್ತೀರಾ? ಸಿಎಂ ಬೊಮ್ಮಾಯಿ ಮಾತಿಗೆ ಕೆರಳಿದ ಸಿದ್ದರಾಮಯ್ಯ!

Siddaramaiah V/S CM Bommai Tweet War: ನಾನು ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ, ನೀವು ರಾಜ್ಯದ ಸಿಎಂ ಎಂಬುದನ್ನ ಮರೆಯಬೇಡಿ. ನಿಮ್ಮ RSS ಸಿದ್ಧಾಂತದಿಂದ ಹೊರ ಬನ್ನಿ. ಅಂಕಿ ಅಂಶಗಳನ್ನ ಮುಂದಿಟ್ಟುಕೊಂಡು ಮಾತನಾಡಿ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಸಂಬಂಧ ಟ್ವೀಟ್​ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮ ಕೈಗಳ ಮೇಲೆ ರಕ್ತ ಇದೆ. ಅದೇಗೆ ನಿದ್ದೆ ಮಾಡುತ್ತೀರಾ ಎಂದು ಕಟುವಾಗಿಯೇ ಕುಟುಕಿದ್ದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ. ಇಂದು ಸಿಎಂ ಬೊಮ್ಮಾಯಿ ವಿರುದ್ಧ ವಿಪಕ್ಷ ಸರಣಿ ಟ್ವೀಟ್ ಮಾಡಿದ್ದಾರೆ. ನಾನು ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ, ನೀವು ರಾಜ್ಯದ ಸಿಎಂ ಎಂಬುದನ್ನ ಮರೆಯಬೇಡಿ. ನಿಮ್ಮ RSS ಸಿದ್ಧಾಂತದಿಂದ ಹೊರ ಬನ್ನಿ. ಅಂಕಿ ಅಂಶಗಳನ್ನ ಮುಂದಿಟ್ಟುಕೊಂಡು ಮಾತನಾಡಿ. ಆರೋಪ ಮಾಡುವಾಗ ಪೂರಕ ಅಂಶಗಳಿರಬೇಕು, ನಿಮ್ಮದು ಆಧಾರರಹಿತವಾದ ಆರೋಪ ಎಂದು ಟ್ವೀಟ್​ ಮೂಲಕ ತಿವಿದರು.

ರಾಜಕೀಯ ಕೋಮುದ್ವೇಷ ಎಲ್ಲರಿಗೆ ಗೊತ್ತಿದೆ

ಜನರನ್ನ ಭಾವನಾತ್ಮಕವಾಗಿ ಹಿಡಿದಿಡುವ ಬುದ್ಧಿ ಬಿಡಿ. ನಿಮ್ಮ ರಾಜಕೀಯ ಕೋಮುದ್ವೇಷ ಎಲ್ಲರಿಗೆ ಗೊತ್ತಿದೆ. ನಿಜವಾದ ಹಿಂದುಗಳು ನಿಮ್ಮ ಭಾವನೆ ಅರ್ಥ ಮಾಡಿಕೊಳ್ತಾರೆ. ನಿಮ್ಮ‌ಹೇಳಿಕೆಗೆ ಅಂಕಿಅಂಶ ಸಮೇತ ಉತ್ತರ ಇಲ್ಲಿದೆ ನೋಡಿ ಎಂದು ಅಂಕಿಅಂಶಗಳನ್ನು ಸಿದ್ದರಾಮಯ್ಯ ಪೋಸ್ಟ್​ ಮಾಡಿದ್ದಾರೆ. ಪ್ರಕಾಶ್ ಕುಳಾಯಿ,ಕೇಶವ್ ಶೆಟ್ಟಿ,ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ,ಕಲ್ಲಪ್ಪ ಹಂಡಿಬಾಗ್, ದನ್ಯಶ್ರೀ,ದಾನಪ್ಪ ಹತ್ಯೆ ಆರೋಪಿಗಳು ಯಾರು? ಬಂಧಿತರೆಲ್ಲರೂ ಸಂಘ ಪರಿವಾರದವರೇ ಇದ್ದರು. ಇದರ ಬಗ್ಗೆ ಯಾಕೆ ‌ನೀವು‌ ಸತ್ಯ ಹೇಳ್ತಿಲ್ಲ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಪ್ರಶ್ನಿಸಿದರು.

ಕಿರಿಯರಿದ್ದೀರಿ ತಿದ್ದಿಕೊಳ್ಳಿ

ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ. ಇಂತಹ ಬೇಜವಾಬ್ದಾರಿ ಹೇಳಿಕೆಗಿಂತ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು. ಈ ಆರೋಪಕ್ಕಾಗಿ ನಾನು ಕಾನೂನುಕ್ರಮಕ್ಕೆ ಮುಂದಾಗಬಹುದು. ಕಿರಿಯರಿದ್ದೀರಿ ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ ಎಂದು ಟ್ವೀಟಿಸಿದ್ದಾರೆ. 2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ/ಪಿಎಫ್ಐ ಸಂಘಟನೆಯವರು. ಹನ್ನೊಂದು ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಗೆ ಸೇರಿದವರು ಎಂದು ಆರೋಪಿಸಿದರು.

ನಗೆಪಾಟಲಿಗೀಡಾಗಿದ್ದು ನೆನಪಿದೆಯೇ?

ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ನಿಮ್ಮ ಪಕ್ಷದವರೇ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿದ್ದ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ? ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ಬೊಮ್ಮಾಯಿ ಅವರೇ, ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆಯ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ, ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸಿ ಒಬ್ಬ ಹಿಂದು ಯುವಕನ ಸಾವಿಗೆ ನ್ಯಾಯಕೊಡಿಸಲು ಪ್ರಯತ್ನಿಸುವಿರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: HDK vs Siddaramaiah: ಡಿಕೆ ಶಿವಕುಮಾರ್ ಸಿಎಂ ಆಗೋಕೆ ಬಿಡ್ತಾರಾ ಇವರು?; ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ವಾಗ್ದಾಳಿ

ನ್ಯಾಯ ಕೊಡಿಸಿ ನೋಡೋಣ..

ಮಂಗಳೂರಿನ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನರೇಶ್ ಶೆಣೈಯ ಖಾಸಾ ದೋಸ್ತ್ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್​ ಕುಮಾರ್​ ಕಟೀಲ್​​, ಕಟ್ಟಾ ಹಿಂದೂ ಆಗಿದ್ದ ಬಾಳಿಗಾ ಅವರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಸೋದರಿಯರಿಗೆ ದಯವಿಟ್ಟು ನೀವಿಬ್ಬರೂ ಕೂಡಿ ನ್ಯಾಯ ಕೊಡಿಸಿ ಎಂದು ಸವಾಲೆಸೆದಿದ್ದಾರೆ.

ಅವರೇ, ನೀವು ಮತ್ತು ನಿಮ್ಮ ಪಕ್ಷದ ನಾಯಕರು ಆಗಾಗ ಟಿಪ್ಪು ಸುಲ್ತಾನ ಹೆಸರಿನ ಜಪ ಮಾಡುವ ಮೊದಲು ನಿಮ್ಮದೇ ನಾಯಕರಾದ ಯಡಿಯೂರಪ್ಪ, ಜಗದೀಶ್​ ಶೆಟ್ಟರ್​, ಆರ್​​.ಅಶೋಕ್ ಸೇರಿದಂತೆ ನಿಮ್ಮದೇ ಪಕ್ಷದ ನಾಯಕರು ಟಿಪ್ಪು ವೇಷ ಹಾಕಿ ಖಡ್ಗಹಿಡಿದು ಕುಣಿದಾಡಿದ ಪೋಟೊಗಳನ್ನು ನೋಡಿ ಕಣ್ತುಂಬಿಕೊಳ್ಳಿ ಎಂದು ಹಳೆ ಫೋಟೋವನ್ನು ಟ್ವೀಟ್​ ಮಾಡಿ ತಿರುಗೇಟು ಕೊಟ್ಟಿದ್ದಾರೆ.
Published by:Kavya V
First published: