ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ನಮ್ಮ ಹಣಕಾಸಿನ ಇತಿಮಿತಿ ಒಳಗೆ ನಾನು ನನ್ನ ಡ್ಯೂಟಿ ಮಾಡಿದ್ದೇನೆ. ಸಿದ್ದರಾಮಯ್ಯ ನವರ ಆಡಳಿತದಲ್ಲಿ ಅವರು ಎಲ್ಲರಿಗೂ ಏನ್ ಮಾಡಿದ್ದಾರೆ ಅಂತಾ ಗೊತ್ತಿದೆ. ಮುಂದಿನ ದಿನಗಳಲ್ಲಿ ಯಾರು, ಯಾವ ವರ್ಗವನ್ನು ಬಿಟ್ಟಿದ್ದೀವೋ ಅವರಿಗೆ ನೆರವು ನೀಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಬೆಂಗಳೂರಿನ ಈಸ್ಟ್ ಜೋನ್ ವಾರ್ ರೂಮ್ ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಿಎಂ, ಅಲ್ಲಿ ನಾನೇ ಸೋಂಕಿತ ಕರೆ ಸ್ವೀಕರಿಸಿ, ಬೆಡ್ ಸಮಸ್ಯೆ ಸರಿಪಡಿಸಿದ್ದೇನೆ. ರಾಜ್ಯದಲ್ಲಿ ಇವಾಗ ಆಕ್ಸಿಜನ್ ಬೆಡ್ ಸಿಗುತ್ತಿದೆ. ಐಸಿಯು ಬೆಡ್ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಕೊರೋನಾ ಸೋಂಕಿತರಿಗಾಗಿ 28 ಕೇಂದ್ರಗಳಲ್ಲಿ 3 ಸಾವಿರ ಬೆಡ್ ಲಭ್ಯ ಇದೆ. ಇದರಲ್ಲಿ ೧ ಸಾವಿರ ಆಕ್ಸಿಜನ್ ಬೆಡ್ಗಳಿವೆ. ಕೋವಿಡ್ ಸೆಂಟರ್ನಲ್ಲಿ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಸ್ಲಂನಲ್ಲಿ ಇರೋರು ಕೊವೀಡ್ ಕೇರ್ ಸೆಂಟರ್ ಬಳಸಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಮೊದಲಿದ್ದ ಸಮಸ್ಯೆ ಈಗ ಇಲ್ಲ, ಸಾಕಷ್ಟು ಸುಧಾರಣೆ ಆಗಿದೆ. ಇನ್ನು ರಾಜ್ಯದಲ್ಲಿ ಲಸಿಕೆ ಕೊರತೆ ಇರೋದು ನಿಜ.ಆದರೆ ಇನ್ಮುಂದೆ ಸಮಸ್ಯೆ ಆಗದ ರೀತಿ ಕ್ರಮ ವಹಿಸುತ್ತೇವೆ. ಲಸಿಕೆ ಹೆಚ್ಚು ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಕೋವಿಡ್ ನಿರ್ವಹಣೆ ಬಗ್ಗೆ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಿಪಕ್ಷ ನಾಯಕ ಹರಿಹಾಯ್ದಿದ್ದಾರೆ. ಮೋದಿ ಕಣ್ಣೀರು ಹಾಕಿದ ವಿಚಾರವಾಗಿ, ಇದೆಲ್ಲಾ ಬರೀ ನಾಟಕದ ಕಣ್ಣೀರು. ನಾಟಕದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಣ್ಣೀರು ಹಾಕಿ ಮೋದಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಚಪ್ಪಾಳೆ, ತಟ್ಟೆ, ಜಾಗಟೆ, ದೀಪ, ಕಣ್ಣೀರು-ಇವುಗಳಿಂದ ಕೊರೋನಾ ಓಡಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: Yellow fungus: ಬ್ಲ್ಯಾಕ್ ಆಯ್ತು, ವೈಟ್ ಆಯ್ತು.. ಈಗ ಭಾರತದಲ್ಲಿ ಯೆಲ್ಲೋ ಫಂಗಸ್ ಪತ್ತೆ! ಕೀವು-ನೋವು ಭಾದಿಸಲಿದೆಯಂತೆ
ಚಾಮರಾಜನಗರದ ಪರಿಹಾರ ಸಿಕ್ಕಿದ್ದು ನಮ್ಮ ಹೋರಾಟದಿಂದ. ಲಸಿಕೆ ವಿಚಾರದಲ್ಲಿ ನಾವು ಅಪಪ್ರಚಾರ ಮಾಡಿಲ್ಲ. ಲಸಿಕೆ ಇಲ್ಲದೇ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೇಂದ್ರದಿಂದ ಬರುವ ಲಸಿಕೆ ತಾರತಮ್ಯ ಆಗಿದೆ. ನೀವು ಮೊದಲು ಅದನ್ನು ಕೇಳಿ. ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ಬೇರೆ ದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು, ಪ್ರಧಾನಿಗಳೇ ಮೊದಲು ಹಾಕಿಸಿಕೊಂಡರು. ಆದರೆ ನಮ್ಮ ಪ್ರಧಾನಿ ತಡವಾಗಿ ಹಾಕಿಸಿಕೊಂಡರು. ಪ್ರಧಾನಿ ತಡ ಮಾಡಿದ್ದರಿಂದ ಸ್ವಲ್ಪ ಅನುಮಾನ ಇತ್ತು. ಅದು ಅಲ್ಲದೇ 6 ಕೋಟಿ ಲಸಿಕೆ ರಫ್ತು ಮಾಡಿದರು. ಪ್ರಚಾರಕ್ಕಾಗಿ ರಫ್ತು ಮಾಡಿದ್ದು ಯಾಕೆ? ರಾಜ್ಯಕ್ಕೆ 8 ಕೋಟಿ ಲಸಿಕೆ ಸದ್ಯ ಅಗತ್ಯ ಇದೆ. 4 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಬೇಕಿದೆ. ನಾವು ಶಾಸಕರ ನಿಧಿಯಿಂದ 100ಕೋಟಿ ಕೊಡುತ್ತೇವೆ. ಆದರೆ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ