HOME » NEWS » State » BENGALURU URBAN SIDDARAMAIAH ASK CM AND MINISTER SUDHAKAR TO RESIGN OVER CHAMARAJANAGAR CASE KVD

ಚಾಮರಾಜನಗರ ಆಕ್ಸಿಜನ್​ ದುರಂತ: ಸಿಎಂ, ಸಚಿವ ಸುಧಾಕರ್​​ ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಇನ್ನಷ್ಟು ಜನರನ್ನು ಬಲಿ ಪಡೆಯುವುದು ಬೇಡ. ಜನರ ಜೀವ ರಕ್ಷಿಸಲು ಸಾಧ್ಯವಾಗದ ಇಂಥ ಸರ್ಕಾರ ಇರುವುದಕ್ಕಿಂತ ತೊಲಗುವುದೆ ಲೇಸು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Kavya V | news18-kannada
Updated:May 3, 2021, 2:21 PM IST
ಚಾಮರಾಜನಗರ ಆಕ್ಸಿಜನ್​ ದುರಂತ: ಸಿಎಂ, ಸಚಿವ ಸುಧಾಕರ್​​ ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.
  • Share this:
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 24 ಮಂದಿ ಸಾವನ್ನಪ್ಪಿರುವುದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಸರ್ಕಾರದ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. 24 ಜೀವಹಾನಿ ದುರಂತಕ್ಕೆ ಸಿಎಂ ಬಿಎಸ್​ವೈ, ಆರೋಗ್ಯ ಸಚಿವ ಕೆ.ಸುಧಾಕರ್​ ನೇರಹೊಣೆ. ನೈತಿಕ ಹೊಣೆ ಹೊತ್ತು ಇಬ್ಬರು ಕೂಡಲೇ ರಾಜೀನಾಮೆ ಕೊಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಟ್ವೀಟ್​​​ ಮೂಲಕ ಸಿದ್ದರಾಮಯ್ಯ ಅವರು ಸರ್ಕಾರ, ಜಿಲ್ಲಾಸ್ಪತ್ರೆ ವೈದ್ಯರು, ಜಿಲ್ಲಾಡಳಿತರ ವಿರುದ್ಧ ಹರಿಹಾಯ್ದಿದ್ದಾರೆ.

ಚಾಮರಾಜನಗರದ ಘಟನೆಯಿಂದ ಬಹಳ ನೋವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ರಾಜ್ಯದಲ್ಲಿ ಆಕ್ಸಿಜನ್​ ಸಿಗದೇ ಉಂಟಾಗಿರುವ ಸರಣಿ ಸಾವುಗಳ ಮುಂದುವರಿದ ಭಾಗವಿದು. ಈ ಸಾವಿಗೆ ಬಿಜೆಪಿ ಸರ್ಕಾರ, ಜಿಲ್ಲಾಸ್ಪತ್ರೆಯ ವೈದ್ಯರು, ಜಿಲ್ಲಾಡಳಿತವೇ ನೇರ ಹೊಣೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿರೋದಕ್ಕೆ ಈ ಅಮಾನವೀಯ ಪ್ರಕರಣವೇ ಸಾಕ್ಷಿ. ಅಧಿಕಾರದ ಲಾಲಾಸೆಗೆ ಬಿಜೆಪಿ ಸರ್ಕಾರ ಇನ್ನಷ್ಟು ಜನರನ್ನು ಬಲಿ ಪಡೆಯುವುದು ಬೇಡ. ಜನರ ಜೀವ ರಕ್ಷಿಸಲು ಸಾಧ್ಯವಾಗದ ಇಂಥ ಸರ್ಕಾರ ಇರುವುದಕ್ಕಿಂತ ತೊಲಗುವುದೆ ಲೇಸು ಎಂದು ಕಿಡಿ ಕಾರಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಆರೋಗ್ಯ ಸಚಿವ ಕೆ.ಸುಧಾಕರ್​ ಈ ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು. ಹೈಕೋರ್ಟ್​​ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿ ಮೂಲಕ ಪ್ರಕರಣದ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯಡಿಯೂಪರಪ್ಪ ನಾಳೆ ಸಂಜೆ 4 ಗಂಟೆಗೆ ಸಂಪುಟ ಸಭೆ ಕರೆದಿದ್ದಾರೆ.



ಆಕ್ಸಿಜನ್​ ಕೊರತೆಯಿಂದಾಗಿ ರಾಜ್ಯದಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದ ಹಿನ್ನೆಲೆ ಈ ಸಚಿವ ಸಂಪುಟ ಸಭೆ ಕರೆಯಲಾಗಿದೆ.  ಆಯಾ ಜಿಲ್ಲಾ ಉಸ್ತುವಾರಿಗಳು ಜಿಲ್ಲೆಯಲ್ಲೇ ಠಿಕಾಣಿ ಹೂಡಲು ಸಿಎಂ ನಾಳೆ ಸಂಪುಟ ಸಭೆಯಲ್ಲಿ ಸೂಚನೆ ನೀಡುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಜೊತೆಗೆ ಒಂದು ತಿಂಗಳ ಮಟ್ಟಿಗೆ ಕೈಗಾರಿಕೆ ಬಳಕೆಗೆ ಆಕ್ಸಿಜನ್ ಸ್ಥಗಿತ ಮಾಡಿ ವೈದ್ಯಕೀಯ ಬಳಕೆಗೆ ಆದೇಶ ಮಾಡುವ ಸಾಧ್ಯತೆಯೂ ದಟ್ಟವಾಗಿದೆ.  ಈ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
Published by: Kavya V
First published: May 3, 2021, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories