School Fee Hike: ಈ ವರ್ಷವೇ ಇನ್ನೂ ಮುಗಿದಿಲ್ಲ, ಆಗಲೇ ಮುಂದಿನ ವರ್ಷದ ಸ್ಕೂಲ್ ಫೀಸ್ ಹೆಚ್ಚು ಮಾಡಿವೆ ಶಾಲೆಗಳು.. ಹೇಗೆ ಸ್ವಾಮಿ ಫೀಸ್ ಕಟ್ಟೋದು?

ಕಳೆದ ವರ್ಷ ಕೂಡಾ ಸರ್ಕಾರ, ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿತ್ತು. ಸರ್ಕಾರ ಫೀಸ್ ಕಮ್ಮಿ ಮಾಡಿ ಎಂದರೂ ಅನೇಕ ಶಾಲೆಗಳು ಕೊನೆವರಗೆ ಪೋಷಕರನ್ನು ಸತಾಯಿಸಿದ್ದವು. ಕೆಲವು ಶಾಲೆಗಳು ಮಾತ್ರ ಅಳೆದೂ ತೂಗಿ ಅಲ್ಪಸ್ವಲ್ಪ ಶುಲ್ಕ ಕಡಿತ ಮಾಡಿದ್ದವು. ಆದ್ರೆ ಈ ಬಾರಿ ಮಾತ್ರ ಕಳೆದ ವರ್ಷದ್ದೂ ಸೇರಿ ಡಬಲ್ ಶುಲ್ಕ ವಸೂಲಿ ಮಾಡೋಕೆ ಖಾಸಗಿ ಶಾಲೆಗಳು ನಿಂತುಬಿಟ್ಟಿವೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಬದುಕುಳಿದರೇ ಪವಾಡ ಎನ್ನುವಂಥಾ ಪರಿಸ್ಥಿತಿ ಎಲ್ಲೆಡೆ ಇದೆ. ಇಂಥಾದ್ರಲ್ಲಿ ಬೆಂಗಳೂರಿನ ಕೆಲ ಖಾಸಗಿ ಶಾಲೆಗಳು ಇದ್ಯಾವುದನ್ನೂ ಲೆಕ್ಕಿಸದೇ ತಮ್ಮ ಎಂದಿನ ಲೂಟಿ ಮುಂದುವರೆಸಿವೆ. ಕಳೆದಿರುವ ಒಂದು ವರ್ಷದ ಲೆಕ್ಕವೇ ಇನ್ನೂ ಅಸ್ಪಷ್ಟವಿರುವಾಗ ಈ ಶಾಲೆಗಳು 2021-22ನೇ ವರ್ಷದ ಅಡ್ಮಿಶನ್ ಆರಂಭಿಸಿಬಿಟ್ಟಿವೆ, ಸಾಲದಕ್ಕೆ ವಾರ್ಷಿಕ ಶುಲ್ಕವನ್ನ ದಿಢೀರನೆ ಶೇಕಡಾ 20-25ರಷ್ಟು ಹೆಚ್ಚು ಮಾಡಿವೆ.

ಕಳೆದ ವರ್ಷ ಕೂಡಾ ಸರ್ಕಾರ, ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿತ್ತು. ಸರ್ಕಾರ ಫೀಸ್ ಕಮ್ಮಿ ಮಾಡಿ ಎಂದರೂ ಅನೇಕ ಶಾಲೆಗಳು ಕೊನೆವರಗೆ ಪೋಷಕರನ್ನು ಸತಾಯಿಸಿದ್ದವು. ಕೆಲವು ಶಾಲೆಗಳು ಮಾತ್ರ ಅಳೆದೂ ತೂಗಿ ಅಲ್ಪಸ್ವಲ್ಪ ಶುಲ್ಕ ಕಡಿತ ಮಾಡಿದ್ದವು. ಆದ್ರೆ ಈ ಬಾರಿ ಮಾತ್ರ ಕಳೆದ ವರ್ಷದ್ದೂ ಸೇರಿ ಡಬಲ್ ಶುಲ್ಕ ವಸೂಲಿ ಮಾಡೋಕೆ ಖಾಸಗಿ ಶಾಲೆಗಳು ನಿಂತುಬಿಟ್ಟಿವೆ.

ಆನ್​ಲೈನ್ ಮೂಲಕ ಈಗಾಗ್ಲೇ ಅನೇಕ ಶಾಲೆಗಳು ಪೋಷಕರ ಜೊತೆ ಸಭೆಗಳನ್ನು ನಡೆಸುತ್ತಿವೆ. ಸಭೆಯ ನಂತರ ಶುಲ್ಕ ಹೆಚ್ಚು ಮಾಡಿರುವ ಸಂದೇಶಗಳನ್ನೂ ಕಳಿಸುತ್ತಿವೆ. ಇದನ್ನು ನೋಡಿ ಪೋಷಕರು ಹೌಹಾರಿದ್ದಾರೆ. ಸಿಬಿಎಸ್​​ಇ, ಐಸಿಎಸ್​​ಇ ಸಿಲಬಸ್ನ ಪಠ್ಯಕ್ರಮ ಅನುಸರಿಸುವ ಶಾಲೆಗಳು, ಅಂತಾರಾಷ್ಟ್ರೀಯ ಶಾಲೆಗಳು, ಉತ್ತಮ ಸೌಕರ್ಯಗಳನ್ನು ಹೊಂದಿರುವ ಕೆಲ ಇಂಗ್ಲಿಷ್ ಮೀಡಿಯಂ ಶಾಲೆಗಳು ಫೀಸ್ ಹೆಚ್ಚಳದ ನಿರ್ಧಾರ ತೆಗೆದುಕೊಂಡು ಪೋಷಕರಿಗೂ ತಿಳಿಸಿವೆ.

ಆದ್ರೆ ಖಾಸಗಿ ಶಾಲೆಗಳ ಈ ನಡೆ ಅನೇಕ ಪೋಷಕರಿಗೆ ಗೊಂದಲ ಮೂಡಿಸಿದೆ. ಈ ಶೈಕ್ಷಣಿಕ ವರ್ಷ ಶಿಕ್ಷಣ ಇಲಾಖೆಯೇ 1ರಿಂದ 9ನೇ ತರಗತಿಯವರಗೆ ಮಕ್ಕಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಿದೆ. ಉಳಿದಂತೆ 10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯೇ ನಡೆದಿಲ್ಲ. ಶೈಕ್ಷಣಿಕ ವರ್ಷ ಮುಗಿದು ಬೇಸಿಗೆ ರಜೆಯ ನಂತರವಷ್ಟೇ ಮುಂದಿನ ತರಗತಿಗಳ ಅಡ್ಮಿಶನ್ ನಡೆಯುತ್ತಿತ್ತು. ಆದ್ರೆ ಈ ಬಾರಿ ಮಾತ್ರ ವಿಚಿತ್ರವಾಗಿ ಮೊದಲೇ ಶುಲ್ಕ ವಸೂಲಿ ಮಾಡೋದು ಮಾತ್ರ ಅಲ್ಲ, ಹೆಚ್ಚಳ ಕೂಡಾ ಮಾಡಿಬಿಟ್ಟಿದ್ದಾರೆ ಎಂದು ಪೋಷಕರು ಕಳವಳ ವ್ಯಕ್ತಪಡಿಸ್ತಿದ್ದಾರೆ.

ಇದನ್ನೂ ಓದಿ: https://kannada.news18.com/news/state/bengaluru-private-schools-rises-fees-in-this-year-amid-of-covid-19-pandemic-bangalore-news-sct-556649.html

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕೆಲ ಶಾಲೆಗಳು ಈ ರೀತಿ ಮಾಡುತ್ತಿವೆ. ರಾಜ್ಯದಲ್ಲಿ ಸುಮಾರು 300 ಶಾಲೆಗಳು ಹೀಗೆ ಮಾಡುತ್ತಿರೋದ್ರಿಂದ ಎಲ್ಲಾ ಖಾಸಗಿ ಶಾಲೆಗಳೂ ಹೀಗೇ ಮಾಡ್ತಿವೆ ಎನ್ನುವ ತಪ್ಪು ಸಂದೇಶ ಪೋಷಕರಿಗೆ ರವಾನೆಯಾಗುತ್ತಿದೆ. ಈ ಬಗ್ಗೆ ಹಿಂದೆಯೂ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದಿದ್ರೂ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಡಿ ಶಶಿಕುಮಾರ್ ತಿಳಿಸಿದ್ದಾರೆ.

ಆದರೆ ಇದು ತಮಗೆ ಅನಿವಾರ್ಯವಾದ ನಿರ್ಧಾರ ಎನ್ನುತ್ತಿವೆ ಶುಲ್ಕ ಹೆಚ್ಚಳ ಮಾಡಿರುವ ಶಾಲೆಗಳು. ಇಡೀ ವರ್ಷ ಶಾಲೆ ತೆರೆಯದೇ ಇರಬಹುದು, ಆದರೆ ಸಿಬ್ಬಂದಿಗೆ ವೇತನ ಕೊಟ್ಟಿದ್ದೇವೆ. ಆನ್​ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಖರ್ಚು ಮಾಡಿದ್ದೇವೆ. ಅಲ್ಲದೇ ಶಾಲಾ ಕಟ್ಟಡದ ಶುಲ್ಕ, ವಿದ್ಯುತ್ ಮತ್ತು ನೀರಿನ ಶುಲ್ಕ ಎಲ್ಲವನ್ನೂ ಕಟ್ಟಿದ್ದೇವೆ. ಎಷ್ಟೇ ಮನವಿ ಮಾಡಿಕೊಂಡರೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸರ್ಕಾರದ ಕಡೆಯಿಂದ ಯಾವುದೇ ಸಹಾಯವಾಗಲೀ ಪರಿಹಾರವಾಗಲೀ ಸಿಕ್ಕಿಲ್ಲ. ಒಂದು ವರ್ಷ ಶುಲ್ಕ ಹೆಚ್ಚಳ ಮಾಡದಿದ್ದರೂ ಖರ್ಚುಗಳೆಲ್ಲಾ ಹೆಚ್ಚೇ ಆಗಿದ್ದವು. ಹಾಗಾಗಿ ಈ ಬಾರಿ ಶುಲ್ಕ ಹೆಚ್ಚಳ ಅನಿವಾರ್ಯ ಎನ್ನುತ್ತಾರವರು.

ಶಿಕ್ಷಣ ಇಲಾಖೆಯ ಸಹಾಯವಾಣಿಗೆ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ 900ಕ್ಕೂ ಹೆಚ್ಚು ದೂರಿನ ಕರೆಗಳು ಬಂದಿದ್ದವು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳಿಗೆಲ್ಲಾ ಈ ವಿಚಾರ ಗೊತ್ತಿರುವಂಥದ್ದೇ. ಆದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕ ಪೋಷಕರು ಕೋವಿಡ್​ನಿಂದಾಗಿ ಕೆಲಸ ಕಂಡುಕೊಂಡಿದ್ದಾರೆ. ಒಂದು ವರ್ಷದ ಶುಲ್ಕವನ್ನೇ ಅನೇಕರು ಪೂರ್ಣವಾಗಿ ಪಾವತಿಸಿಲ್ಲ. ಅಂಥಾದ್ರಲ್ಲಿ ಈಗ ಹೆಚ್ಚುವರಿ ಶುಲ್ಕವನ್ನು ಆದಷ್ಟು ಬೇಗ ಅಂದ್ರೆ ಏಪ್ರಿಲ್ ತಿಂಗಳು ಮುಗಿಯುವುದರೊಳಗೆ ಪಾವತಿಸದಿದ್ರೆ ವಿದ್ಯಾರ್ಥಿಯ ಅಡ್ಮಿಶನ್ ಮಾಡಿಕೊಳ್ಳುವುದಿಲ್ಲ ಎಂದೂ ಅನೇಕ ಶಾಲೆಗಳು ಪೋಷಕರಿಗೆ ಸಂದೇಶ ರವಾನೆ ಮಾಡಿವೆ.
Published by:Soumya KN
First published: