Schools Reopen: ಮಕ್ಕಳು ಶಾಲೆಗೆ ಮರಳಲಿ, ಅವರಿಗೆ 2 ಲಕ್ಷ ರೂಪಾಯಿ ಇನ್ಶುರೆನ್ಸ್ ಮಾಡಿಸಿ; ಸರ್ಕಾರಕ್ಕೆ ತಜ್ಞರ ಶಿಫಾರಸ್ಸು

ತಜ್ಞರ ಸಮಿತಿಯು ಶನಿವಾರ ಶಾಲೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ವಿಶೇಷ ಅಗತ್ಯತೆಗಳು ಮತ್ತು ವಿವಿಧ ರೀತಿಯ ಆರೋಗ್ಯ ಸೌಲಭ್ಯಗಳನ್ನು ನೀಡಬೇಕೆಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಜೂ.21): ಕರ್ನಾಟಕದಲ್ಲಿ ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ಇಂದಿನಿಂದ ಎರಡನೇ ಹಂತದ ಅನ್​ಲಾಕ್​ ಜಾರಿ ಮಾಡಲಾಗಿದೆ. ಆದರೆ ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನೂ ಸಹ ನಿರ್ಧಾರವಾಗಿಲ್ಲ. 3ನೇ ಅಲೆ ಹೆಚ್ಚಾಗಿ ಮಕ್ಕಳಿಗೆ ಅಪ್ಪಳಿಸುವ ಭಯವಿರುವುದರಿಂದ ಈ ಬಗ್ಗೆ ಸರ್ಕಾರವು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಿದೆ. ಹಾಗಾದ್ರೆ ಶಾಲೆಗಳನ್ನು ತೆರೆಯುವ ಬಗ್ಗೆ ತಜ್ಞರ ಸಮಿತಿ ಏನ್ ಹೇಳುತ್ತೆ? ಹೃದ್ರೋಗ ಸರ್ಜನ್ ಡಾ. ದೇವಿಶೆಟ್ಟಿ  ನೇತೃತ್ವದ 16 ಮಂದಿಯನ್ನೊಳಗೊಂಡ ತಜ್ಞರ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಶಾಲೆಗಳನ್ನು ತೆರೆಯುವಂತೆ ಶಿಫಾರಸ್ಸು ಮಾಡಿದೆ. ಹೌದು, ಇದರ ಜೊತೆಗೆ ಶಾಲೆಗೆ ಬಂದು ಪಾಠ ಕೇಳುವ ಪ್ರತಿಯೊಬ್ಬ ವಿದ್ಯಾರ್ಥಿಗೂ 2 ಲಕ್ಷ ರೂ. ಆರೋಗ್ಯ ವಿಮೆ ಮಾಡಿಸಿ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

  ಕೋವಿಡ್​ 3ನೇ ಅಲೆಯ ನಿಯಂತ್ರಣ ಮತ್ತು ನಿರ್ವಹಣೆಯ ಉನ್ನತ ಮಟ್ಟದ ತಜ್ಞರ ಸಮಿತಿಯು ಶನಿವಾರ ಶಾಲೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ವಿಶೇಷ ಅಗತ್ಯತೆಗಳು ಮತ್ತು ವಿವಿಧ ರೀತಿಯ ಆರೋಗ್ಯ ಸೌಲಭ್ಯಗಳನ್ನು ನೀಡಬೇಕೆಂದು ಹೇಳಲಾಗಿದೆ.

  ಶಾಲೆಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ರಾಜ್ಯ ಸರ್ಕಾರ 2 ಲಕ್ಷ ಆರೋಗ್ಯ ವಿಮೆ ಸೌಲಭ್ಯವನ್ನು ನೀಡಬೇಕೆಂದು ನಾವು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರಕ್ಕೆ ಅವರಲ್ಲಿ ವಿಶ್ವಾಸ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಸಮಿತಿಯ ಸದಸದ್ಯರೊಬ್ಬರು ಹೇಳಿದ್ದಾರೆ.

  ಇದನ್ನೂ ಓದಿ:ಕೋವಿಡ್ ಪರಿಹಾರ ಹಣವನ್ನು ನುಂಗಿದ ಬ್ಯಾಂಕ್ EMI; ಮನೆ ಮಾರುವ ಪರಿಸ್ಥಿತಿಯಲ್ಲಿ ಆಟೋ ಚಾಲಕ..!

  ಇಡೀ ವಿಶ್ವದಲ್ಲಿ ಶಾಲೆಗಳು ಸೋಂಕು ಹರಡುವ ತಾಣಗಳಾಗಿರುವ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ವರದಿ ಹೇಳುತ್ತದೆ. ಶಾಲೆಗಳನ್ನು ಮತ್ತೆ ತೆರೆಯುವ ಬಗ್ಗೆ ವೈಜ್ಞಾನಿಕ ಮಾರ್ಗದರ್ಶನದ ಅಗತ್ಯವಿದೆ ಎಂದರು.

  ದೊಡ್ಡ ನಗರಗಳು, ಚಿಕ್ಕ ಪಟ್ಟಣಗಳು, ಹಳ್ಳಿಗಳಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಸ್ವಾಯತ್ತ ಶಾಲೆಗಳನ್ನು ತೆರೆಯಬೇಕೆಂದು ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಸಮಿತಿ ಹೇಳುವ ಪ್ರಕಾರ, ಕರ್ನಾಟಕದ 2.3 ಕೋಟಿ ಮಕ್ಕಳಲ್ಲಿ 0-18 ವಯಸ್ಸಿನ 3.4 ಲಕ್ಷ ಮಕ್ಕಳಿಗೆ ಕೊರೋನಾ 3ನೇ ಅಲೆ ತಗುಲುತ್ತದೆ. ಅವರಲ್ಲಿ 23,804 ಮಕ್ಕಳಿಗೆ ಆಸ್ಪತ್ರೆಯ ಅವಶ್ಯಕತೆ ಇರುತ್ತದೆ. 6,801 ಮಕ್ಕಳಿಗೆ ಐಸಿಯು ಹಾಗೂ 43,358 ಮಕ್ಕಳಿಗೆ ಕೋವಿಡ್​ ಕೇರ್​ ಸೆಂಟರ್​​​​ನ ಅಗತ್ಯತೆ ಇರುತ್ತದೆ. ಉಳಿದ ಅಂದರೆ 2.6 ಲಕ್ಷ ಮಕ್ಕಳು ಮನೆಯಲ್ಲೇ ಚಿಕಿತ್ಸೆ ಪಡೆದರೆ ಸಾಕು. ಇನ್ನು, ಶೇ.85ರಷ್ಟು ಮಕ್ಕಳಿಗೆ ರೋಗ ಲಕ್ಷಣಗಳೇ ಇರುವುದಿಲ್ಲ ಎಂದು ತಜ್ಞರ ಸಮಿತಿ ಹೇಳುತ್ತಿದೆ.

  ಇದನ್ನೂ ಓದಿ:ಮಂಗಳೂರಿನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಟ್ರಕ್​; ಚಾಲಕ-ಕ್ಲೀನರ್​ ಇಬ್ಬರೂ ಸಮುದ್ರಪಾಲು..!

  ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯಬಹುದು ಎಂದು ಸಮಿತಿಯಲ್ಲಿರುವ ವೈದ್ಯರು
  ಅಭಿಪ್ರಾಯಪಟ್ಟಿದ್ದಾರೆ.

  ಮಕ್ಕಳು ಶಾಲೆಗಳಿಗೆ ಹೋಗುವುದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಪೌಷ್ಠಿಕ ಆಹಾರ ದೊರೆಯುತ್ತದೆ. ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಒಂದು ವೇಳೆ, ಶಾಲೆ ತೆರೆಯುವುದನ್ನು ವಿಳಂಬ ಮಾಡಿದರೆ ಮಕ್ಕಳಲ್ಲಿ ಅಪೌಷ್ಠಿಕಾಂಶ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಮಕ್ಕಳು ಬಾಲಕಾರ್ಮಿಕರಾಗುತ್ತಾರೆ, ಬಾಲ್ಯ ವಿವಾಹಗಳು ನಡೆಯುತ್ತವೆ. ಭಿಕ್ಷಾಟನೆ ಹೆಚ್ಚಾಗಿತ್ತದೆ, ಮಕ್ಕಳ ಕಳ್ಳಸಾಗಣೆ ಶುರುವಾಗುತ್ತದೆ. ಆಗ ಮಕ್ಕಳ ಪರಿಸ್ಥಿತಿ ತುಂಬಾ ಶೋಚನೀಯವಾಗುತ್ತದೆ ಎಂದು ವರದಿ ಹೇಳಿದೆ.

  ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್​ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

  ಒಟ್ಟಾರೆ 3ನೇ ಕೊರೋನಾ ಅಲೆ ಭೀತಿ ನಡುವೆ ಶಾಲೆಗಳನ್ನು ಆರಂಭಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಜ್ಞರ ಸಲಹೆಯನ್ನು ಸ್ವೀಕರಿಸಿ ಸರ್ಕಾರ ಶಾಲೆಗಳನ್ನು ಶೀಘ್ರವೇ ಆರಂಭಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರಾ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ.

  ​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: