ಬೆಂಗಳೂರು (ಆ. 22): ಕೋವಿಡ್ ನಿಂದಾಗಿ ಕಳೆದೊಂದುವರೆ ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ನಾಳೆಯಿಂದ ಆರಂಭವಾಗಲಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ 9 ಮತ್ತ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೌತಿಕ ತರಗತಿಗಳು ನಾಳೆ ಆರಂಭವಾಗಿದೆ. ಶಾಲೆ ಆರಂಭ ಕುರಿತು ಈಗಾಗಲೇ ಸರ್ಕಾರ ಸಕಲ ಸಿದ್ಧತೆ ನಡೆಸಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಶಾಲೆಗೆ ಆಗಮಿಸುವಂತೆ ಈಗಾಗಲೇ ಶಿಕ್ಷಣ ಸಚಿವ ಬಿಸಿ ನಾಗೇಶ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಾಳೆಯಿಂದ ಶಾಲೆ ಆರಂಭವಾಗಲಿರುವ ಹಿನ್ನಲೆ ಮುಖ್ಯಮಂತ್ರಿಗಳು ಖುದ್ದು ಶಾಲೆಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ನಾಳೆ ಅವರು ಮಲ್ಲೇಶ್ವರಂ ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಕ ಮಲ್ಲೇಶ್ವರಂನ ನಿರ್ಮಲಾ ರಾಣಿ ಅನುದಾನಿ ಫ್ರೌಢ ಶಾಲೆಗೆ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಕ್ಕಳ ಸುರಕ್ಷತೆಯ ಜೊತೆಗೆ ಅವರ ಶೈಕ್ಷಣಿಕ ಭವಿಷ್ಯದ ಹಿತಾಸಕ್ತಿಗಳನ್ನೂ ಪರಿಗಣಿಸಿ, ತಜ್ಞರ ಸಲಹೆಗಳಿಗೆ ಅನುಗುಣವಾಗಿ, ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು, ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಯಾವುದೇ ಆತಂಕವಿಲ್ಲದೆ ಸರ್ಕಾರದೊಂದಿಗೆ ಸಹಕರಿಸಲು ಕೋರುತ್ತೇನೆ ಎಂದಿದ್ದಾರೆ. ಜೊತೆಗೆ ಸಚಿವ ಸಂಪುಟದ ಸಹೋದ್ಯೋಗಿಗಳು, ಆಯಾ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು, ಶಿಕ್ಷಕರನ್ನು ಪ್ರೋತ್ಸಾಹಿಸಿ, ಪೋಷಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಿ ಎಂದು ಸಲಹೆ ನೀಡಿದ್ದಾರೆ
ಕಳೆದೊಂದುವರೆ ವರ್ಷಗಳ ಬಳಿಕ ವಿದ್ಯಾರ್ಥಿಗಳು ಕೂಡ ಶಾಲೆಗೆ ಬರಲು ಉತ್ಸುಕರಾಗಿದ್ದಾರೆ. ರಾಜ್ಯದ ಐದು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ 26 ಜಿಲ್ಲೆಗಳಲ್ಲಿ ನಾಳೆ ಶಾಲೆಗಳು ಆರಂಭಾಗಿದ್ದು, ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತೆ ವಹಿಸಿದೆ.
ಮುಖ್ಯಮಂತ್ರಿಗಳು ಶಾಲೆ ಭೇಟಿ ಜೊತೆಗೆ ನಾಳೆ ಶಿಕ್ಷಣ ಸಚಿವರು ಬೇರೆ ಬೇರೆ ಕಡೆ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಜೊತೆ, ಶಿಕ್ಷಕರ ಜೊತೆ ಸಂವಾದ ನಡೆಸಲಿದ್ದಾರೆ. ಈ ವೇಳೆ ಕೋವಿಡ್ ನಿಯಮಗಳ ಕೂಡ ಅವರು ಪರಿಶೀಲನೆ ನಡೆಸಲಿದ್ದಾರೆ. ಈ ಸಂಬಂಧ ಈಗಾಗಲೇ ಶಿಕ್ಷಣ ಸಚಿವರು ಮಾತನಾಡಿದ್ದು, ಶಾಲೆ ಆರಂಭದ ಮೊದಲ ದಿನವೇ ಹಲವು ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಕೊರೋನಾ ಮಾರ್ಗಸೂಚಿಯೊಂದಿಗೆ ಭೌತಿಕ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ 9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿವೆ. ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭಿಸಲು 5,492 ಪಿಯು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ.
ಇದನ್ನು ಓದಿ: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ನಲ್ಲಿ ಸಮಸ್ಯೆ; ಇನ್ಫೋಸಿಸ್ ಸಿಇಒಗೆ ಸಮನ್ಸ್
ಶಾಲೆಗಳು ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲೆಯಿಂದ ಕೋವಿಡ್ ಹರಡಬಾರದು. ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತರಗತಿಯಲ್ಲಿ ಹೆಚ್ಚು ಮಕ್ಕಳು ಇರದಂತೆ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆಯನ್ನು ಮತ್ತೊಮ್ಮೆ ನೀಡಿದ್ದಾರೆ. 9 ನೇ ತರಗತಿಗಳು ಹೇಗೆ ನಡೆಯಲಿದೆ ಎಂಬುದನ್ನು ಪರಿಗಣಿಸಿ 7 ಮತ್ತು 8ನೇ ತರಗತಿ ಕೂಡ ನೋಡಿಕೊಂಡು ತೆರೆಯಲಾಗುವುದು ಎಂದಿದ್ದಾರೆ.
ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕಿರುವುದು ಕಡ್ಡಾಯವಾಗಿದೆ. ಶಾಲೆಗೆ ಆಗಮಿಸುವ ಶಿಕ್ಷಕರು ಮತ್ತು ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಭೌತಿಕ ತರಗತಿಗೆ ಹಾಜರಾಗುವುದು ಕಡ್ಡಾಯವಾಗಿಲ್ಲವಾದರೂ, ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವಂತೆ ಮನವಿ ಮಾಡಲಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ