Sanchari Vijay RIP: ಅಣ್ಣನ ಸಾವಿಗೆ ಆತನೇ ಕಾರಣ: ದೂರು ದಾಖಲಿಸಿದ ನಟ ಸಂಚಾರಿ ವಿಜಯ್ ಸಹೋದರ!

ಅಪಘಾತದಿಂದಲೇ ಅಣ್ಣನ ಸಾವು ಸಂಭವಿಸಿದೆ. ಹೀಗಾಗಿ ಅಪಘಾತಕ್ಕೆ ಕಾರಣನಾದ ನವೀನ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಸಿದ್ದೇಶ್​ ಕುಮಾರ್​ ಮನವಿ ಮಾಡಿದ್ದಾರೆ.

ನಟ ಸಂಚಾರಿ ವಿಜಯ್​

ನಟ ಸಂಚಾರಿ ವಿಜಯ್​

 • Share this:
  ಬೆಂಗಳೂರು: ಅಪಘಾತಕ್ಕೊಳಗಾಗಿದ್ದ ನಟ ಸಂಚಾರಿ ವಿಜಯ್​​ ಅವರ ಮೆದುಳು ನಿಷ್ಕ್ರಿಯವಾಗಿರುದರಿಂದ ಅಂಗಾಂಗ ದಾನಕ್ಕೆ ಕುಟುಂಬ ಒಪ್ಪಿದೆ. ಕಿಡ್ನಿ, ಲಿವರ್​​, ಕಣ್ಣು ಸೇರಿ ಕೆಲ ಅಂಗಾಂಗಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಪಡೆದುಕೊಂಡು ನಾಳೆ ವಿಜಯ್​ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಆಸ್ಪತ್ರೆಯವರು ಹಸ್ತಾಂತರಿಸಲಿದ್ದಾರೆ. ಆ ಮೂಲಕ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಾವನ್ನು ಅಪೋಲೋ ಆಸ್ಪತ್ರೆ ದೃಢಪಡಿಸಿದೆ. ಸಂಚಾರಿ ವಿಜಯ್​ ತಂದೆ-ತಾಯಿ ತೀರಿಕೊಂಡಿದ್ದಾರೆ, ಮದುವೆ ಸಹ ಇನ್ನೂ ಆಗಿರಲಿಲ್ಲ. ಒಬ್ಬ ತಮ್ಮ ಇದ್ದು ಅವರೇ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಸೋದರ ಸಿದ್ದೇಶ್​ ಕುಮಾರ್​​ ಅಪಘಾತ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ.

  ನಮ್ಮಣ್ಣನಿಗೆ ಅಪಘಾತವಾಗಲು ಬೈಕ್​​ ಚಲಾಯಿಸುತ್ತಿದ್ದ ಗೆಳೆಯ ನವೀನ್ ಕಾರಣ ಎಂದು ನಟ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ದೂರಿನಲ್ಲಿ ನೇರವಾಗಿ ಆರೋಪಿಸಿದ್ದಾರೆ. ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿದ್ದೇಶ್ ಕುಮಾರ್ ದೂರು ದಾಖಲಿಸಿದ್ದಾರೆ. ನನ್ನ ಸಹೋದರ ವಿಜಯ್ ನನ್ನು ಬೈಕ್ ನಲ್ಲಿ ಹಿಂದೆ ಕೂರಿಸಿಕೊಂಡು ಜೆಪಿ ನಗರ 7ನೇ ಹಂತದ ರಸ್ತೆಯಲ್ಲಿ ವೇಗವಾಗಿ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದಾರೆ. ಹೀಗಾಗಿ ನಿಯಂತ್ರಣ ತಪ್ಪಿ ಬೈಕ್​​ ಸ್ಕಿಡ್ ಆಗಿ ಇಬ್ಬರು ವಾಹನ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸಂಚಾರಿ ವಿಜಯ್ ತಲೆಗೆ ಹಾಗೂ ತೊಡೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಶನಿವಾರ ರಾತ್ರಿ ಅಪಘಾತಕ್ಕೊಳಗಾದ ಸಂಚಾರಿ ವಿಜಯ್​​, ನವೀನ್​​ ಇಬ್ಬರನ್ನೂ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಚಾರಿ ವಿಜಯ್​​​ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವೈದ್ಯರು ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾದ ಕಾರಣ ಬ್ರೈಡ್​ ಡೆಡ್​​ ಆಗಿ ಸಾವನ್ನಪ್ಪಿದ್ದಾರೆ.

  ಇದನ್ನೂ ಓದಿ: Sanchari Vijay Mistake: ಕೊನೆ ಕ್ಷಣದಲ್ಲಿ ಸಂಚಾರಿ ವಿಜಯ್ ಅದೊಂದು ತಪ್ಪು ಮಾಡದಿದ್ದರೆ ಅನಾಹುತ ತಪ್ಪುತ್ತಿತ್ತು!

  ಅಪಘಾತದಿಂದಲೇ ಅಣ್ಣನ ಸಾವು ಸಂಭವಿಸಿದೆ. ಹೀಗಾಗಿ ಅಪಘಾತಕ್ಕೆ ಕಾರಣನಾದ ನವೀನ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಸಿದ್ದೇಶ್​ ಕುಮಾರ್​ ಮನವಿ ಮಾಡಿದ್ದಾರೆ. ನಟ ಸಂಚಾರಿ ವಿಜಯ್ ಸೋದರ ಸಿದ್ದೇಶ್ ದೂರಿನನ್ವಯ ನವೀನ್ ಮೇಲೆ ಜಯನಗರ ಸಂಚಾರಿ ಠಾಣೆಯಲ್ಲಿ FIR ದಾಖಲಾಗಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ನವೀನ್​ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಬೈಕ್​ ಸ್ಕಿಡ್​ ಆಗಿ ಬಿದ್ದ ಬಳಿಕ ಸ್ಥಳದಲ್ಲೇ ನಟ ಸಂಚಾರಿ ವಿಜಯ್​ ಪ್ರಜ್ಞಾಹೀನರಾಗಿದ್ದರು. ಬೈಕ್​ ಚಲಾಯಿಸುತ್ತಿದ್ದ ನವೀನ್​ಗೆ ಗಾಯಗಳಾಗಿತ್ತಾದರೂ ಪ್ರಜ್ಞೆ ಇತ್ತು. ಎದ್ದು ಬಂದು ವಿಜಯ್​​ರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವುದನ್ನು ಕಂಡೊಡನೆ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಹಿತರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಕೇವಲ 37 ವರ್ಷಕ್ಕೆ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಸಾವಿನ ಮನೆ ಸೇರಿದ್ದಾರೆ. ನಾಳೆ ಕುಟುಂಬಸ್ಥರು ಅಂತ್ಯಕ್ತಿಯೆ ನೆರವೇರಿಸಲಿದ್ದಾರೆ.
  Published by:Kavya V
  First published: