ಅಪಾರ್ಟ್ಮೆಂಟ್ ಪ್ಲ್ಯಾಟ್ ಮಾಲೀಕರು ಖಾತಾ ರಿಜಿಸ್ಟ್ರೇಷನ್ಗಾಗಿ ಎದುರಿಸುತ್ತಿದ್ದ ಸಮಸ್ಯೆಯನ್ನು ಹೊಸ ನಿಯಮದ ಮೂಲಕ ಬಗೆಹರಿಸಲಾಗಿದೆ. ಖಾತಾ ರಿಜಿಸ್ಟ್ರೇಷನ್ ಸಂಬಂಧ ನಾಗರೀಕರು, ಪ್ಲ್ಯಾಟ್ ಮಾಲೀಕರ ದೂರುಗಳ ಅನ್ವಯ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಸಕಾಲ ಯೋಜನೆಯಡಿ ಇನ್ಮುಂದೆ ಪ್ಲ್ಯಾಟ್ ಮಾಲೀಕರು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಖಾತಾವನ್ನು ಪಡೆಯಬಹುದು. ಈ ಮೊದಲು ಅಪಾರ್ಟ್ಮೆಂಟ್ನ ಎಲ್ಲಾ ಪ್ಲ್ಯಾಟ್ ಮಾಲೀಕರು ಖಾತಾ ರಿಜಿಸ್ಟ್ರೇಷನ್ಗೆ ಒಟ್ಟಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ಖಾತಾ ನೀಡಲಾಗುತ್ತಿತ್ತು. ಯಾರೋ ಒಬ್ಬರು ಅರ್ಜಿ ಸಲ್ಲಿಸದಿದ್ದರೆ ಉಳಿದ ಎಲ್ಲರ ಅರ್ಜಿಯನ್ನು ತಿರಸ್ಕರಿಸಲಾಗುತ್ತಿತ್ತು.
ಅಪಾರ್ಟ್ಮೆಂಟ್ಗಳಲ್ಲಿ ಪ್ಲ್ಯಾಟ್ ಹೊಂದಿರುವ ಬಹುತೇಕರು ವಿದೇಶಗಳಲ್ಲಿ, ಬೇರೆಡೆ ನೆಲೆಸಿರುತ್ತಾರೆ. ಅವರು ಅರ್ಜಿ ಸಲ್ಲಿಸದಿದ್ದರೆ ನೆರೆಹೊರೆಯ ಪ್ಲ್ಯಾಟ್ ನವರ ರಿಜಿಸ್ಟ್ರೇಷನ್ ಸಹ ತಿರಸ್ಕೃತಗೊಳ್ಳುತ್ತಿತ್ತು. ಈ ಸಮಸ್ಯೆಯನ್ನು ಮನಗಂಡು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೊಸ ನಿಯಮದ ಪ್ರಕಾರ ಪ್ಲ್ಯಾಟ್ ಮಾಲೀಕರು ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿ 30 ದಿನಗಳ ಒಳಗೆ ಖಾತಾವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಖಾತಾ ಸಿಗದಿದ್ದರೆ, ಅಧಿಕಾರಿಗಳ ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ. ಸಕಾಲ ಯೋಜನೆಯ ನಿರ್ದೇಶಕರಾದ ರಾಜೀವ್ ಚಾವ್ಲಾ ಈ ಸಂಬಂಧ ಬಿಬಿಎಂಪಿ ಆಯುಕ್ತರು ಹಾಗೂ ಕಂದಾಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಪ್ಲ್ಯಾಟ್ ಮಾಲೀಕರು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಖಾತಾ ರಿಜಿಸ್ಟ್ರೇಷನ್ ಮಾಡುವಂತೆ ಸೂಚಿಸಿದ್ದಾರೆ. ಸಂಕೀರ್ಣ ಕಟ್ಟಡಗಳಲ್ಲಿ ಒಂದು ಮನೆಯನ್ನು ಹೊಂದಿರುವ ಎಲ್ಲರೂ ಅರ್ಜಿ ಸಲ್ಲಿಸಿ ಹೊಸ ಖಾತಾವನ್ನು ಪಡೆಯಬಹುದಾಗಿದೆ. ಇನ್ಮುಂದೆ ಸಕಾಲದಲ್ಲಿ ಮುನ್ಸಿಪಲ್ ಸಬ್ ನಂಬರ್ ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ