ಬೆಂಗಳೂರು: ತಿಂಗಳಿಗೆ ಕೇವಲ 2,000 ರೂ. ಆದಾಯ ಹೊಂದಿರುವ 34 ವರ್ಷದ ಹಾಲು ವ್ಯಾಪಾರಿಗೆ (cowherd) 2 ಕೋಟಿ ರೂ. ವಹಿವಾಟು ನಡೆಸಿದ್ದಕ್ಕಾಗಿ 40 ಲಕ್ಷ ರೂ. ಸರಕು ಮತ್ತು ಸೇವಾ ತೆರಿಗೆ (GST) ಪಾವತಿಸಲು ನೋಟಿಸ್(notice) ನೀಡಲಾಗಿದೆ. ಬಾಗಲೂರಿನ ಚೊಕ್ಕನಹಳ್ಳಿ (Chokkanahalli) ಗ್ರಾಮದ ಮುನಿರಾಜು ದನ ಮೇಯಿಸಿ, ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನೋಟಿಸ್ನಿಂದ ಗಾಬರಿಗೊಂಡ ಮುನಿರಾಜು ಬ್ಯಾಂಕ್ (bank branch) ಹಾಗೂ ಜಿಎಸ್ಟಿಯನ್ನು ನಿರ್ವಹಿಸುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿದ್ದಾರೆ. ಅವರ ಖಾತೆಯಲ್ಲಿ ನಿಜವಾಗಿಯೂ ದೊಡ್ಡ ವಹಿವಾಟು (huge transaction) ನಡೆದಿರುವುದು ಗೊತ್ತಾಗಿದೆ. ಆದರೆ ಇದು ಕುಟುಂಬದ ಸ್ನೇಹಿತರಿಂದ ಆಗಿರುವ ವಂಚನೆ (fraud ) ಎಂಬುವುದು ತಿಳಿದು ಬಂದಿದೆ.
ಹಸು ಸಾಲ ಹೆಸರಲ್ಲಿ ವಂಚನೆ
ಸರ್ಕಾರದಿಂದ ‘ಹಸು ಸಾಲ’ ಕೊಡಿಸುವ ನೆಪದಲ್ಲಿ ಪಾನ್ ಕಾರ್ಡ್, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ಕುಟುಂಬದ ಸ್ನೇಹಿತೆ ಝಾನ್ಸಿ ವಂಚನೆ ಎಸಗಿದ್ದಾರೆ. ಲಿಂಗರಾಜಪುರಂ ನಿವಾಸಿ ಝಾನ್ಸಿ ವಿರುದ್ಧ ಮುನಿರಾಜು ಬಾಗಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ (ಜಾರಿ), ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು ಮುನಿರಾಜು ಅವರಿಗೆ ನೋಟಿಸ್ ನೀಡಿದ್ದಾರೆ. ಮುನಿರಾಜು ಮತ್ತು ಆತನ ಹೆಂಡತಿಯು ಒಂದು ಹಸುವನ್ನು ಖರೀದಿಸಲು ಬಯಸಿದ್ದರು. ಏಪ್ರಿಲ್ನಲ್ಲಿ ಮುನಿರಾಜು ಅವರ ತಾಯಿಯ ಸ್ನೇಹಿತೆ ಝಾನ್ಸಿ ಅವರು ಸರ್ಕಾರದಿಂದ ‘ಹಸು ಸಾಲ’ ಕೊಡಿಸುವ ಭರವಸೆ ನೀಡಿದರು. ಝಾನ್ಸಿ ತರಕಾರಿ ಮಾರಾಟ ಮಾಡುತ್ತಿದ್ದು, ಆಕೆಯ ಪತಿ ಉದ್ಯಮಿಯಾಗಿದ್ದಾರೆ.
ಎಲ್ಲಾ ದಾಖಲೆಗಳನ್ನು ಪಡೆದು ದೋಖಾ
ಝಾನ್ಸಿ ನನ್ನ ತಾಯಿಗೆ ವರ್ಷಗಳಿಂದ ಪರಿಚಯ. ನನ್ನ ತಾಯಿ ಲಿಂಗರಾಜಪುರದಲ್ಲಿ ತರಕಾರಿ ಮಾರುತ್ತಾರೆ. ನನ್ನ ಪ್ಯಾನ್ ಮತ್ತು ಆಧಾರ್ ಕಾರ್ಡ್ಗಳ ನಕಲು ಪ್ರತಿಗಳನ್ನು ನೀಡುವಂತೆ ಝಾನ್ಸಿ ನನ್ನನ್ನು ಕೇಳಿದಳು. ಅಲ್ಲದೆ, ನನ್ನ ಪತ್ನಿಯ ಪ್ಯಾನ್ ಮತ್ತು ಆಧಾರ್ ನ ನಕಲು ಪ್ರತಿಗಳನ್ನು ಕೇಳಿದ್ದಾಳು. ನಾನು ಮತ್ತು ನನ್ನ ಪತ್ನಿ ಬಾಗಲೂರಿನಲ್ಲಿರುವ ಬ್ಯಾಂಕ್ನಲ್ಲಿ ಜಂಟಿ ಖಾತೆ ಹೊಂದಿದ್ದು, ಪಾಸ್ಬುಕ್ನ ನಕಲು ಪ್ರತಿಯನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
OTPಯನ್ನೂ ಪಡೆದುಕೊಂಡಿದ್ದ ಚಾಲಾಕಿ
ಕೆಲವು ತಿಂಗಳ ನಂತರ ಝಾನ್ಸಿ ಮುನಿರಾಜುಗೆ ಸಾಲದ ಕೆಲಸ ಆಗುತ್ತಿದೆ ಎಂದು ಹೇಳಿದ್ದರು. ಮೊಬೈಲ್ ಗೆ ಪಾಸ್ವರ್ಡ್ (OTP) ಬರುತ್ತೆ ಅದನ್ನು ತನಗೆ ಕಳುಹಿಸುವಂತೆ ಕೇಳಿದ್ದರಂತೆ. ಅದರ ಪ್ರಕಾರ, OTP ಆಗಸ್ಟ್ 20 ರಂದು ಬಂದಿತು. ನಾನು ಅದನ್ನು ಝಾನ್ಸಿಯೊಂದಿಗೆ ಹಂಚಿಕೊಂಡಿದ್ದೇನೆ. ನಂತರ, ನಾನು ಝಾನ್ಸಿಗೆ ಕರೆ ಮಾಡಿದೆ. ನನ್ನ ಸಾಲದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು. ಆದರೆ, ನಾನು ಸರ್ಕಾರದಿಂದ ಯಾವುದೇ ಸಾಲ ಪಡೆದಿಲ್ಲ.
ಇದನ್ನೂ ಓದಿ: Engagement ಬಳಿಕ ಅನುಮಾನ; ನೊಂದು ಮದುವೆಗೂ ಮುನ್ನ ಮಸಣ ಸೇರಿದ ಹುಬ್ಬಳ್ಳಿ ಯುವತಿ!
ಹಸು ಸಾಲದ ಕಥೆ ಬಯಲು
ಅಕ್ಟೋಬರ್ 12 ರಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ನನ್ನ ಮೊಬೈಲ್ಗೆ ಕರೆ ಮಾಡಿ ನನ್ನ ಬ್ಯಾಂಕ್ ಖಾತೆಯಲ್ಲಿ 2 ಕೋಟಿ ರೂಪಾಯಿ ವಹಿವಾಟು ನಡೆದಿದೆ. ನಾನು ಯಾವುದೇ ಜಿಎಸ್ಟಿ ಪಾವತಿಸಿಲ್ಲ ಎಂದು ಹೇಳಿದರು. ಹೀಗಾಗಿ ನಾನು 40 ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕಿದೆ ಅಂದರು, ನಾನು ಗಾಬರಿಯಾದೆ. ನನಗೆ ಜಿಎಸ್ಟಿ ಅಥವಾ ಇತರ ಯಾವುದೇ ರೀತಿಯ ತೆರಿಗೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದೆ. ಮುನಿರಾಜು ಅವರ ಆರ್ಥಿಕ ಸ್ಥಿತಿಗತಿ ಅರಿತ ಅಧಿಕಾರಿಗಳು, ಬ್ಯಾಂಕ್ ಖಾತೆ ವಿವರಗಳನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದೀರಾ ಎಂದು ಪ್ರಶ್ನಿಸಿದಾಗ, ಮುನಿರಾಜು ಹಸು ಸಾಲದ ಕಥೆಯನ್ನು ಹೇಳಿದ್ದಾರೆ.
ಬಡಪಾಯಿ ಮಾತು ನಂಬಿದ ಅಧಿಕಾರಿಗಳು
ಅಧಿಕಾರಿಗಳ ನಿರ್ದೇಶನದಂತೆ ಕಳೆದ ವಾರ ಅಕ್ಟೋಬರ್ನಲ್ಲಿ ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಮುನಿರಾಜು ಭೇಟಿ ನೀಡಿದ್ದರು. ತನ್ನ ಖಾತೆಯಲ್ಲಿ 2 ಕೋಟಿ ರೂಪಾಯಿ ವಹಿವಾಟು ನಡೆದಿಲ್ಲ ಎಂದು ಹೇಳಿಕೆ ತೆಗೆದುಕೊಂಡಿದ್ದಾರೆ. ನಂತರ ಝಾನ್ಸಿ, ಆಕೆಯ ಪತಿ ಮತ್ತು ಇತರರು ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಮುನಿರಾಜು ಬಾಗಲೂರು ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ಜಿಎಸ್ಟಿ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಝಾನ್ಸಿ ಅವರ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಝಾನ್ಸಿ ಮತ್ತು ಇತರರ ವಿರುದ್ಧ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ