KPYCC: 6 ತಿಂಗಳು ಮಾತ್ರ ರಕ್ಷ ರಾಮಯ್ಯಗೆ ಸ್ಥಾನ, ಬಳಿಕ ನಲಪಾಡ್​​ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ

ಫೆಬ್ರವರಿ ಬಳಿಕ ಮುಂದಿನ 2 ವರ್ಷ ಕೆಪಿವೈಸಿಸಿ ಅಧ್ಯಕ್ಷರಾಗಿ ನಲಪಾಡ್​​ ಅಧಿಕಾರ ನಡೆಸಲಿದ್ದಾರೆ.

ನಲಪಾಡ್​-ರಕ್ಷ ರಾಮಯ್ಯ

ನಲಪಾಡ್​-ರಕ್ಷ ರಾಮಯ್ಯ

  • Share this:
    ಬೆಂಗಳೂರು (ಜು. 5): ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ(KPYCC) ಆಯ್ಕೆಯಾಗಿದ್ದ ರಕ್ಷ ರಾಮಯ್ಯ (Raksha Rammaiah) ಅವರ ಅಧಿಕಾರ ಅವಧಿ ಕೇವಲ ಜನವರಿವರೆಗೆ ಮಾತ್ರ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕಳೆದ ಐದು ದಿನಗಳ ಹಿಂದೆ ರಾಜ್ಯ ಯುವ ಕಾಂಗ್ರೆಸ್​ ಘಟಕದ ಅಧ್ಯಕ್ಷರಾಗಿ ಮತ್ತೆ ಅಧಿಕಾರ ಮುಂದುವರೆಸಿರುವ ರಕ್ಷ ರಾಮಯ್ಯ, ಈ ಹುದ್ದೆಯಲ್ಲಿ 2022ರ ಜನವರಿ 31ರವರೆಗೆ ಮಾತ್ರ ಮುಂದುವರೆಯಲಿದ್ದು, ಆ ಬಳಿಕ ಮೊಹಮ್ಮದ್​ ನಲಪಾಡ್​ ಅಧ್ಯಕ್ಷರಾಗಲಿದ್ದಾರೆ.  ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೊಹಮ್ಮದ್ ನಲಪಾಡ್ (Mohammed Haris Nalapad​) ಆಸೆ ಕಡೆಗೂ ಪೂರೈಸಿದೆ. ಫೆಬ್ರವರಿ ಬಳಿಕ ಮುಂದಿನ 2 ವರ್ಷ ಅವರೇ ಕೆಪಿವೈಸಿಸಿ ಅಧ್ಯಕ್ಷರಾಗಿ ಅಧಿಕಾರ ನಡೆಸಲಿದ್ದಾರೆ.



    ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಅವರಿಗೆ ಅತಿ ಹೆಚ್ಚು ಮತಗಳು ಬಂದಿದ್ದವು. ಆದರೆ, ಕೆಲ ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ಮೊಹಮ್ಮದ್ ನಲಪಾಡ್ ಪಾಲಿಗೆ ಮುಳುವಾಗಿದೆ. ಈ ಪ್ರಕರಣ ಇನ್ನೂ ಕೋರ್ಟ್ ವಿಚಾರಣೆಯಲ್ಲಿರುವುದರಿಂದ ಅವರಿಗೆ ಆ ಸ್ಥಾನ ಕೈ ತಪ್ಪಿತ್ತು. ಅದರಂತೆ, ನಲಪಾಡ್ ಬಳಿಕ ಎರಡನೇ ಅತಿ ಹೆಚ್ಚು ಮತಗಳನ್ನ ಪಡೆದಿದ್ದ ರಕ್ಷ ರಾಮಯ್ಯ ಅವರಿಗೆ ಕೆಪಿಸಿಸಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಒಲಿದಿತ್ತು
    ಅಷ್ಟೇ ಅಲ್ಲದೇ ರಕ್ಷ ರಾಮಯ್ಯ ಮತ್ತೊಂದು ಅವಧಿಗೆ ರಾಜ್ಯ ಯೂತ್​ ಕಾಂಗ್ರೆಸ್​​ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಪಕ್ಷ ಅಧಿಕೃತವಾಗಿ ಘೋಷಣೆ ನಡೆಸಿರಲಿಲ್ಲ.

    ಇದನ್ನು ಓದಿ: ಮಹಿಳೆಯರ ಮೇಲಿನ ಗೌರವಕ್ಕೆ ದೇವೇಗೌಡರು ತೆನೆ ಹೊತ್ತ ಮಹಿಳೆಯನ್ನು ಪಕ್ಷದ ಚಿಹ್ನೆ ಮಾಡಿದ್ರು, ಆದರೆ, ಇವರು...

    ಬದಲಿಗೆ ಯೂತ್​ ಕಾಂಗ್ರೆಸ್​ ವೆಬ್​ಸೈಟ್​ನಲ್ಲಿ ಮಾತ್ರ ಪ್ರಕಟಿಸಲಾಗಿತ್ತು. ಇದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಮೊಹಮ್ಮದ್ ನಲಪಾಡ್ ತನ್ನ ಆಸೆಯನ್ನ ಜೀವಂತವಾಗಿರಿಸಿಕೊಂಡಿದ್ದರು. ಅದರ ಫಲವಾಗಿ ಕರ್ನಾಟಕ ಯೂತ್ ಕಾಂಗ್ರೆಸ್​ನಲ್ಲಿ ರಕ್ಷ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ಪರ ಎರಡು ಗುಂಪುಗಳು ಹುಟ್ಟಿಕೊಂಡಿವೆ. ನಲಪಾಡ್ ಅವರಿಗೆ ಅಧ್ಯಕ್ಷ ಹುದ್ದೆ ಕೊಡಿಸಲು ಡಿಕೆ ಶಿವಕುಮಾರ್ ಅವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದರು. ರಕ್ಷ ರಾಮಯ್ಯ ಪರ ಸಿದ್ದರಾಮಯ್ಯ ನಿಂತಿದ್ದರು.

    ಸಾಕಷ್ಟು ಗೊಂದಲ ಮೂಡಿಸಿದ್ದ ಕೆಪಿಐಸಿಸಿ ಚುನಾವಣಾ ಫಲಿತಾಂಶದ ಕುರಿತು ಈಗ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರ ಬಿದ್ದಿದೆ. ಅದರಂತೆ ಇನ್ನು ಆರು ತಿಂಗಳು ಮಾತ್ರ ರಕ್ಷ ರಾಮಯ್ಯ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಇದಾದ ಬಳಿಕ ನಲಪಾಡ್​​ಗೆ ಅಧಿಕಾರ ಸಿಗಲಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕಸರತ್ತು ಯಶಸ್ವಿಯಾಗಿದೆ ಎನ್ನಲಾಗಿದೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: