Bengaluru Rains: ನಿರಂತರ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ನೀರು, ಕಾರ್ ಮುಳಗಡೆ, ಕುಸಿದ ಕಟ್ಟಡ
ಹಲಸೂರಿನ ಲಿಡೋ ಮಾಲ್ ಬಳಿ ಶಂಕರ್ ಎಂಬವರಿಗೆ ಸೇರಿದ ಸುಮಾರು 50 ವರ್ಷ ಹಳೆಯ ಕಟ್ಟಡ (Building Collapse) ನೆಲಸಮವಾಗಿದೆ. ಮನೆ ಕುಸಿಯುವ ಅನುಮಾನ ಹಿನ್ನೆಲೆ ನಿನ್ನೆ ರಾತ್ರಿಯೇ ಕುಟುಂಬಸ್ಥರು ಮತ್ತೊಂದು ಮನೆಗೆ ತೆರಳಿದ್ದರು. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಣ್ಣುಪಾಲಾಗಿವೆ.
ಕಳೆದ 15 ದಿನಗಳಿಂದ ಸೂರ್ಯದೇವ ರಾಜಧಾನಿಯಲ್ಲಿ (Bengaluru Rains) ಪ್ರಖರವಾಗಿಯೇ ಕಾಣಿಸಿಕೊಳ್ಳುತ್ತಲೇ ಇಲ್ಲ. ನಿರಂತರ ಮಳೆಯಿಂದಾಗಿ ಬೆಂಗಳೂರು (Bengaluru) ಹೈರಾಣು ಆಗಿದ್ದು, ಜೋರು ಮಳೆಯಲ್ಲಿ ಕೆಲಸಗಳಿಗೆ ತೆರಳುವಂತಾಗಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಗೆ ಪದೇ ಪದೇ ನೀರು ನುಗ್ಗುತ್ತಿರೋದರಿಂದ (Flood) ನಿವಾಸಿಗಳು ಬಿಬಿಎಂಪಿ (BBMP) ವಿರುದ್ರ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಲಸೂರಿನ ಲಿಡೋ ಮಾಲ್ ಬಳಿ ಶಂಕರ್ ಎಂಬವರಿಗೆ ಸೇರಿದ ಸುಮಾರು 50 ವರ್ಷ ಹಳೆಯ ಕಟ್ಟಡ (Building Collapse) ನೆಲಸಮವಾಗಿದೆ. ಮನೆ ಕುಸಿಯುವ ಅನುಮಾನ ಹಿನ್ನೆಲೆ ನಿನ್ನೆ ರಾತ್ರಿಯೇ ಕುಟುಂಬಸ್ಥರು ಮತ್ತೊಂದು ಮನೆಗೆ ತೆರಳಿದ್ದರು. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಣ್ಣುಪಾಲಾಗಿವೆ. ತುಂಬಾ ಹಳೆ ಕಟ್ಟಡ ಜೊತೆಗೆ ಮಣ್ಣು ಕುಸಿಯುತ್ತಲೇ ಇತ್ತು. ಸ್ಥಳೀಯರೂ ಸಹ ಇದರ ಬಗ್ಗೆ ಮಾಲೀಕರಿಗೆ ಹೇಳಿದ್ರೂ ವಾಸವಾಗಿದ್ದರು. ಕಟ್ಟಡ ಬಿದ್ದ ಹಿನ್ನೆಲೆ ಮೂರು ಬೈಕ್ ಗಳು ಜಖಂ ಆಗಿವೆ.
ಬೆಂಗಳೂರು ವಲಯವಾರು ಮಳೆಯ ಮಾಹಿತಿ
ಪೂರ್ವ ವಲಯ: ಎರಡು ಮರಗಳು ಧರೆಶಾಹಿ ಟ್ರಿನಿಟಿ ವೃತ್ತ, ಆರ್ ಟಿನಗರದಲ್ಲಿ ಎರಡು ಮರ ನೆಲಕ್ಕುರುಳಿವೆ.ಲಿಡೋ ಮಾಲ್ ಬಳಿ ಕಟ್ಟಡ ಕುಸಿತ, ಯಾವುದೇ ಪ್ರಾಣಾಪಾಯವಾಗಿಲ್ಲ
ಪಶ್ಚಿಮ ವಲಯ: ಚಲವಾದಿಪಾಳ್ಯದ ಮನೆಯೊಂದಕ್ಕೆ ನುಗ್ಗಿದ ನೀರು. ಕಂಠೀರವ ನಗರದಲ್ಲಿ ಗೋಡೆ ಕುಸಿತ ಯಾವುದೇ ಪ್ರಾಣಾಪಾಯವಾಗಿಲ್ಲ
ರಾಜರಾಜೇಶ್ವರಿ ನಗರ ವಲಯ: ಸಣ್ಣ ಪ್ರಮಾಣದ ಮಳೆಯಾಗಿದ್ದರಿಂದ ಯಾವುದೇ ಹಾನಿಯಾಗಿಲ್ಲ
ದಾಸರಹಳ್ಳಿ ವಲಯ: ಮಲ್ಲಸಂದ್ರದ ಮನೆಯೊಂದಕ್ಕೆ ನುಗ್ಗಿದ ಮಳೆ ನೀರು.ಮಲ್ಲಸಂದ್ರ ಕೆರೆ ತುಂಬಿ ಹರಿದಿದ್ದರಿಂದ ಮನೆಗೆ ನುಗ್ಗಿದ ಕೆರೆ ನೀರು
ಮಹದೇವಪುರ ವಲಯ: ಎಂಟು ಕಡೆ ಮಳೆ ನೀರು ನುಗ್ಗಿದ್ದರ ಬಗ್ಗೆ BBMP ಗೆ ದೂರು ಬಂದಿದೆ. ಬಸವನಪುರ ಮುಖ್ಯ ರಸ್ತೆ, ಸೀಗೆಹಳ್ಳಿ ವೇತ್ತ ಸರ್ಕಾರಿ ಶಾಲೆ, ಹೊರಮಾವು ವಡರಪಾಳ್ಯ, ಟಿ.ಸಿ.ಪಾಳ್ಯದ ಮುಖ್ಯ ರಸ್ತೆ, ನ್ಯೂ ಹಾರಿಝನ್ ಶಾಲೆಯ ರಸ್ತೆ, ವಿಜ್ಞಾನ ನಗರದ ರೆಡ್ಡಿ ಲೇಔಟ್, ಅಣ್ಣಸಂದ್ರ ಪಾಳ್ಯದ ಅಪೆಕ್ಸ್ ಆಸ್ಪತ್ರೆ ರಸ್ತೆ, ಬೆಳ್ಳಂದೂರು ಸಮೀಪದ ಮಾರುತಿ ಗಾರ್ಡನ್ ನಲ್ಲಿ ನೀರು ನುಗ್ಗಿದೆ
ಯಲಹಂಕ ವಲಯ: ತಿಂಡ್ಲು ಮುಖ್ಯ ರಸ್ತೆಯ ವಿಎಂಎಸ್ ಗಾರ್ಡನ್, ನಂಜಪ್ಪ ವೃತ್ತದ ಚಾರಟರಿಯಪ್ಪ ರಸ್ತೆ, ವಿದ್ಯಾರಣ್ಯಪುರದ ವೈಷ್ಣವಿ ಅಪಾರ್ಟ್ ಮೆಂಟ್, ಹೆಬ್ಬಾಳ ಸಮೀಪದ ಮಾರಪ್ಪನಪಾಳ್ಯದ ಡಿಫೆನ್ಸ್ ಶಾಲೆ, ಸರಾಯಿಪಾಳ್ಯದ ಟುಬಾ ಲೇಔಟ್
ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಅನುಗ್ರಹ ಲೇಔಟ್, ಬಿಳೆಕಳ್ಳಿಯ ಕೆವಿಆರ್ ಪ್ರಿಕ್ಸ್ ಅಪಾರ್ಟ್ ಮೆಂಟ್, ಕೂಡ್ಲುವಿನ ಸೋಮೇಶ್ವರ ದೇವಸ್ಥಾನದ ಪಕ್ಕದ ಏರಿಯಾ, ಕೋಟೆಬೀರೇಶನಹಳ್ಳಿಯ ಲೇಕ್ ವ್ಯೂ ಸಿಟಿ ಅಪಾರ್ಟ್ ಮೆಂಟ್, ಶ್ರೀದೇವಿನಗರದ ಜನಾರ್ದನ ಬೇಕರಿ ರಸ್ತೆ, ಹೆಚ್ ಎಸ್ ಆರ್ ಲೇಔಟ್ ನ ಆರನೇ ಸ್ಟ್ರೀಟ್ 10 ನೇ ಕ್ರಾಸ್ ನಲ್ಲಿ ಮಳೆ ನೀರು ನುಗ್ಗಿದೆ.
ಇಂದು ಮಧ್ಯಾಹ್ನ ಸಿಎಂ ಸಭೆ
ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಮಧ್ಯಾಹ್ನ 1 ಗಂಟೆಗೆ ಸಭೆ ನಡೆಸಲಿದ್ದಾರೆ. ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಮಳೆಯಿಂದ ಆಗಿರುವ ಸಮಸ್ಯೆಗಳು, ನಿರಂತರ ಮಳೆಯಿಂದ ಉಂಟಾಗಿರುವ ಬೆಳೆ ನಷ್ಟ, ಬೆಳೆ ನಷ್ಟ ಪರಿಹಾರ, ಮಳೆ ಸಮಸ್ಯೆಗೆ ಇಲ್ಲಿ ವರೆಗೂ ಮಾಡಿರುವ ಪರಿಹಾರ ಕಾರ್ಯಗಳು, ಮುಂದೆ ಮತ್ತಷ್ಟು ಮುಂಜಾಗ್ರತಾ ಕ್ರಮ ವಹಿಸುವುದು ಹಾಗೂ ಮಳೆಯಿಂದ ಉಂಟಾಗಿರುವ ಹೆದ್ದಾರಿ ರಸ್ತೆಗುಂಡಿಗಳ ಸರಿಪಡಿಸುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.
ಡಿಸಿ, ಸಿಇಒ ಗಳ ಜೊತೆ ಸಿಎಂ ವೀಡಿಯೋ ಸಂವಾದ ನಡೆಸಲಿದ್ದಾರೆ. ಸಭೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಮಳೆ ಹಾನಿ ಪರಿಹಾರ ಕಾರ್ಯಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.