Crime: ವರ್ಷದ ಬಳಿಕ ಸಿಕ್ಕಿಬಿದ್ದ ಮಗು ಕಳ್ಳಿ; 15 ಲಕ್ಷ ಹಣಕ್ಕೆ ಕಳ್ಳತನ ಮಾಡಿದ್ದ ಮನೋವೈದ್ಯೆ

ಆರೋಪಿ ರಶ್ಮಿ ಎಂಬ ಮನೋ ವೈದ್ಯೆ ಮಗುವನ್ನು ಕದ್ದೊಯ್ದಿರುವುದು ದೃಢಪಟ್ಟಿದ್ದು, ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮನೋ ವೈದ್ಯೆ ರೇಖಾಚಿತ್ರ

ಮನೋ ವೈದ್ಯೆ ರೇಖಾಚಿತ್ರ

  • Share this:
    ಬೆಂಗಳೂರು (ಮೇ. 31): ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಪ್ರಕರಣ ಒಂದು ವರ್ಷದ ಬಳಿಕ ಸುಖಾಂತ್ಯ ಕಂಡಿದೆ. ಮಗುವನ್ನು ಕದ್ದ ಆರೋಪಿ ವದ್ಯರಾಗಿರುವುದು ಪೊಲೀಸರಿಗೆ ಅಚ್ಚರಿ ತಂದಿದೆ. ರಶ್ಮಿ ಎಂಬ ವೈದ್ಯೆ ಕಳೆದೊಂದು ವರ್ಷದ ಹಿಂದೆ ಮಗುವನ್ನು ಕದ್ದುಕೊಂಡು ಹೋಗಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮಗು ಕಳ್ಳತನ ಮಾಡುತ್ತಿದ್ದ ಸಮಯದಲ್ಲಿ ಆಕೆಯ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯ ರೇಖಾಚಿತ್ರ ರಚಿಸಿ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದರು. ಆರೋಪಿ ರಶ್ಮಿ ಎಂಬ ಮನೋ ವೈದ್ಯೆ ಮಗುವನ್ನು ಕದ್ದೊಯ್ದಿರುವುದು  ದೃಢಪಟ್ಟಿದ್ದು, ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?

    ಕಳೆದ ವರ್ಷ ಅಂದರೆ 2020ರ ಮೇ 29 ರಂದು ಚಾಮರಾಜಪೇಟೆಯ ಹೆರಿಗೆ ಆಸ್ಪತ್ರೆಯಿಂದ ಮಗುವನ್ನು ಕಳ್ಳತನ ಮಾಡಲಾಗಿತ್ತು. ಮಗುವನ್ನು ಕದ್ದುಕೊಂಡು ಮಹಿಳೆ ಆಟೋದಲ್ಲಿ ಹೋಗುತ್ತಿದ್ದದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದರು.

    15 ಲಕ್ಷಕ್ಕೆ ಮಗು ಕಳ್ಳತನ ಮಾಡಿದ್ದ ವೈದ್ಯೆ

    ಮನೋ ವೈದ್ಯೆ ರಶ್ಮಿ 2014ರಲ್ಲಿ ಹುಬ್ಬಳಿಯ ಎಸ್ ಡಿಎಂ ಆಸ್ಪತ್ರೆಯಲ್ಲಿ ವೃತ್ತಿ ಸಲ್ಲಿಸುತ್ತಿದ್ದರು. ಈ ವೇಳೆ ಅವರಿಗೆ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ಕೊಪ್ಪಳ ಮೂಲದ ದಂಪತಿಗೆ ಬುದ್ಧಿಮಾಂದ್ಯ ಮಗುವಿತ್ತು. ಆಗ ಇದೇ ವೈದ್ಯೆರ ಬಳಿ ಚಿಕಿತ್ಸೆಗೆ ಅವರು ಮಗುವನ್ನು ಕರೆ ತರುತ್ತಿದ್ದರು. ಈ ವೇಳೆ ಅವರ ಗಾಢ ಪರಿಚಯ ಆಗಿತ್ತು. ಈ ಸಂದರ್ಭದಲ್ಲಿ ವೈದ್ಯೆ ರಶ್ಮಿ, ಆರೋಗ್ಯಯುತ ಮಗು ಜನಿಸುವ ಕುರಿತು ತಿಳಿಸಿದ್ದರು. ದಂಪತಿಗಳಿಗೆ ಈ ಕುರಿತು ಸಮಲೋಚನೆ ನಡೆಸಿದ ಮನೋ ವೈದ್ಯೆ ನಿಮಗೆ ನಿಮ್ಮ ಮಗುವೇ ಜನಿಸುತ್ತದೆ ಎಂದು ಭರವಸೆ ನೀಡಿದ್ದರು.  ಬಾಡಿಗೆ ತಾಯ್ತನದ ಮೂಲಕ ತಮ್ಮದೇ ಮಗುವನ್ನು ಪಡೆಯುವ ಬಗ್ಗೆ ಕೂಡ ತಿಳಿಸಿದ್ದರು. ನಿಮ್ಮ ಮಗುವನ್ನೇ ಬೇರೆ ಮಹಿಳೆಯ ಗರ್ಭದಲ್ಲಿ ಪಡೆಯುವ ಬಾಡಿಗೆ ತಾಯ್ತನದ ಯೋಜನೆ ನೀಡಿ ದಂಪತಿಗೆ ಮಗುವಿನ ಆಸೆ ಮೂಡಿಸಿದ್ದರು.

    ಇದನ್ನು ಓದಿ: 43 ಕೆಜಿ ತೂಕ ಕಳೆದುಕೊಂಡ ಅಧಿಕಾರಿ; ತೆಳ್ಳಗೆ ಆಗಬೇಕು ಎನ್ನುವವರಿಗೆ ಸ್ಪೂರ್ತಿ ತುಂಬಲಿದೆ ಇವರ ಕಥೆ

    ಮನೋ ವೈದ್ಯೆಯ ಅಸಲಿ ಸತ್ಯ

    ಆರೋಗ್ಯಯುತ ಮಗುವಿನ ಆಸೆ ಹಿನ್ನಲೆ ವೈದ್ಯರ ಮಾತಿಗೆ ದಂಪತಿಗಳು ಒಪ್ಪಿದ್ದರು. ಈ ಸಂಬಂಧ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.  2019 ರಲ್ಲಿ ವೈದ್ಯೆಯೇ ದಂಪತಿಗೆಳಿಗೆ  ಪೋನ್ ಮಾಡಿ ಮಗುವಿನ ವ್ಯವಸ್ಥೆ ಮಾಡಲು ಅವರ ಬಳಿ ಮುಂಗಡ ಹಣ ಪಡೆದಿದ್ದರು. ಅಷ್ಟೇ ಅಲ್ಲದೇ ದಂಪತಿ ಅಂಡಾಣು ಮತ್ತು ವಿರ್ಯಾಣುವನ್ನು ಅವರು ಪಡೆದಿದ್ದರು. ಆದರೆ, ಇದನ್ನು ಯಾವುದೇ ಮಹಿಳೆಗೂ ಇಂಜೆಕ್ಟ್ ಮಾಡಿರಲಿಲ್ಲ. ದಂಪತಿಗಳಿಗೆ ನಿಮ್ಮ ಮಗು ಬೇರೆಯೊಬ್ಬರ ಹೊಟ್ಟೆಯಲ್ಲಿ ಬೆಳಯುತ್ತಿದೆ ಎಂದು ಕಥೆ ಕಟ್ಟಿದ್ದರು. ಮನೋ ವೈದ್ಯೆಯ ಭರವಸೆಯ ಮಾತುಗಳನ್ನು ನಂಬಿ ಹಣ ಕೊಟ್ಟ ದಂಪತಿ ತಮ್ಮ ಮಗುವಿನ ಬಗ್ಗೆ ಅಪಾರ ಕನಸು ಕಂಡು ನಿರೀಕ್ಷೆಯಲ್ಲಿದ್ದರು.

    ಮಗು ನೀಡುವುದಾಗಿ ಮಾತು ನೀಡಿದ್ದ ವೈದ್ಯೆ ಕಡೆಗೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಯಾರೋದೊ ಮಗುವನ್ನು ಕಳ್ಳತನ ಮಾಡಿ, ಮಗುವನ್ನು ದಂಪತಿಗೆ ನೀಡಿ ಸಂಪೂರ್ಣ ಹಣ ಪಡೆದಿದ್ದರು. ಈತ ವೈದ್ಯೆ ಹಣ ಪಡೆದು ಸುಮ್ಮನಾದರು. ಇತ್ತ ಮಗು ತಮ್ಮದೆಂದು ನಂಬಿದ್ದ ದಂಪತಿಗಳು ಮಗುವನ್ನು ಬಹಳ ಜೋಪಾನವಾಗಿ ಮಗುವನ್ನು ಸಾಕುತ್ತಿದ್ದರು.

    ಇದೀಗ ಅಸಲಿ ವಿಷಯ ಹೊರ ಬಂದಿದ್ದು, ಮಗುವನ್ನು ದಂಪತಿಗಳಿಂದ ಮರಳಿ ಪಡೆಯಲಾಗಿದೆ. ಇತ್ತ ತಮ್ಮದೆಂದು ಅಕ್ಕರೆಯಿಂದ ಸಾಕಿದ ಮಗು ಇಲ್ಲದಂತೆ ಆಗಿ, ಜೊತೆಗೆ ಹಣ ಕಳೆದುಕೊಂಡ ದಂಪತಿ ಕಣ್ಣೀರಾಗುತ್ತಿದ್ದಾರೆ. ಮತ್ತೊಂದು ಕಡೆ ಸುಶಿಕ್ಷಿತ ಮನೋವೈದ್ಯೆಯೇ ಇಂತಹ ಹೀನ ಕೃತ್ಯ ಎಸಗಿ ಜೈಲು ಪಾಲಾಗುತ್ತಿದ್ದಾರೆ.
    Published by:Seema R
    First published: