Ganesha Festival- ಗಣೇಶ ಗಲಾಟೆ; ಹಿಂದೂಪರ ಸಂಘಟನೆಗಳಿಂದ ಬಿಬಿಎಂಪಿ ಮುತ್ತಿಗೆ

ಗಣೇಶ ಹಬ್ಬ ಆಚರಣೆ ವೇಳೆ ಗಣಪತಿ ಮೂರ್ತಿ ಎತ್ತರ ಇತ್ಯಾದಿ ವಿಚಾರದಲ್ಲಿ ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿಗಳಿಗೆ ಹಿಂದೂಪರ ಸಂಘಟನೆಗಳು ವಿರೋಧಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿದವು.

ಹಿಂದೂಪರ ಸಂಘಟನೆಯ ಕಾರ್ಯಕರ್ತರಿಂದ ಬಿಬಿಎಂಪಿ ಮುತ್ತಿಗೆ

ಹಿಂದೂಪರ ಸಂಘಟನೆಯ ಕಾರ್ಯಕರ್ತರಿಂದ ಬಿಬಿಎಂಪಿ ಮುತ್ತಿಗೆ

  • Share this:
ಬೆಂಗಳೂರು, ಸೆ. 09: ನಾಳೆಯಿಂದ ಆರಂಭವಾಗಲಿರುವ ಗಣೇಶ ಉತ್ಸವ ಆಚರಣೆಗೆ (Ganesha Festival Celebrations) ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹೊರಡಿಸಿರುವ ನಿಯಮಗಳನ್ನು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ವಿರೋಧಿಸಿದ್ದು, ಅದರ ಸದಸ್ಯರು ಇಂದು ಬಿಬಿಎಂಪಿ ಕೇಂದ್ರ ಕಚೇರಿ (BBMP head quarters) ಮುತ್ತಿಗೆ ಹಾಕಿದರು. ಗಣೇಶೋತ್ಸವ ಆಚರಣೆ ಹೆಸರಲ್ಲಿ ಬಿಬಿಎಂಪಿ ಆವರಣದಲ್ಲಿ ಗದ್ದಲ ಉಂಟಾಯಿತು. ಸಂಘಟನೆಗಳ ನೂರಾರು ಕಾರ್ಯಕರ್ತರಿಂದ ಬ್ಯಾರಿಕೇಡ್ ತಳ್ಳಿ ಬಿಬಿಎಂಪಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಗಣೇಶ ಮೂರ್ತಿಗಳನ್ನು ತಂದು ಪ್ರತಿಭಟನೆಯಲ್ಲಿ ಭಾಗಿಯಾದರು. ಬೃಹತ್ ಹನ್ನೆರಡು ಅಡಿ ಗಣೇಶ ಮೂರ್ತಿಯನ್ನು ಕಚೇರಿ ಆವರಣಕ್ಕೆ ತರಲು ಅವಕಾಶ ಕೊಡದ್ದಕ್ಕೆ ಪೊಲೀಸರು-ಕಾರ್ಯಕರ್ತರ ನಡುವೆ ನೂಕುನುಗ್ಗಾಟ ನಡೆಯಿತು. ಬ್ಯಾರಿಕೇಡ್ ತಳ್ಳಾಡಿ ಬೃಹತ್ ಗಣಪತಿ ಮೂರ್ತಿ ತೆಗೆದುಕೊಂಡು ಹೋಗಲು ಒತ್ತಾಯ ಪಡಿಸಿ, ಕಡೆಗೂ ಮೂರ್ತಿಯನ್ನು ಆವರಣದ ಒಳಗೆ ತೆಗೆದುಕೊಂಡು ಹೋಗುವಲ್ಲಿ ಸಂಘಟನೆಗಳು ಯಶಸ್ವಿಯಾದವು. ಈ ಮಧ್ಯೆ ಮನವಿ ಅಲಿಸಲು ಬಂದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ (Gaurav Gupta) ಅವರ ವಾಹನಕ್ಕೆ ಮುತ್ತಿಗೆ ಹಾಕಿದರು.

ಗಣಪತಿ ಹಬ್ಬಕ್ಕೆ ಷರತ್ತು ವಿಧಿಸಲು ಇವರು ಯಾರು.? ಹಿಂದೂ ಕಾರ್ಯಕರ್ತ ಆಕ್ರೋಶ- ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಮಾತನಾಡಿ, ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಗಣಪತಿಯ ಎತ್ತರ, ವಾರ್ಡ್ ಗೆ ಒಂದು ಗಣಪ, ಹಾಗೂ ಕೇವಲ ಮೂರುದಿನಕ್ಕೆ ಸೀಮಿತ ಮಾಡಿ ಗಣೇಶೋತ್ಸವ ಆಚರಣೆ ನಿಯಮ ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ. ಗಣೇಶ ವಿಸರ್ಜನೆಗೆ ಬಿಬಿಎಂಪಿ ಎಲ್ಲಾ ಕಡೆ, ಎಲ್ಲಾ ದಿನ ಕಲ್ಯಾಣಿ ವ್ಯವಸ್ಥೆ ಮಾಡಲೇ ಬೇಕು, ಇಲ್ಲವಾದಲ್ಲಿ ಕೆರೆಗೆ ವಿಸರ್ಜಿಸಲಾಗುವುದು ಎಂದರು. ಮನೆಯಲ್ಲಿ ಎರಡು ಅಡಿ ಎತ್ತರದ್ದೇ ಗಣೇಶ ಇಡಬೇಕೆಂದು ಹೇಳಲು ನಿಮಗ್ಯಾವ ಅಧಿಕಾರ ಇದೆ, ಈವರೆಗೆ ಇರದ ನಿಯಮಗಳು ಈಗ್ಯಾಕೆ ಎಂದು ಪ್ರಶ್ನಿಸಿದರು. ಗಣಪತಿಯನ್ನು ಲಾಟರಿಗೆ ತಂದಿಟ್ಟಿದ್ದಾರೆ. ಲಾಟರಿಯಲ್ಲಿ ಬಂದ ಸಮಿತಿ ಮಾತ್ರ ಆಚರಣೆ ಮಾಡಬೇಕು ಎಂದಿದ್ದಾರೆ. ಇದ್ಯಾವ ತುಘಲಕ್ ದರ್ಬಾರ್, ಇದೇನು ದೊಂಬರಾಟನಾ ಎಂದು ಅಸಮಾಧಾನ ಹೊರಹಾಕಿದರು. ಯಾರಾದರೂ ಹಬ್ಬ ಎಷ್ಟೇ ಸಂಭ್ರಮದಿಂದ, ಎಷ್ಟೇ ದೊಡ್ಡ ಮೂರ್ತಿ ಇಟ್ಟು ಆಚರಣೆ ಮಾಡಿದ್ರೂ ಅವರಿಗೆ ಸಮಿತಿಯ ಬೆಂಬಲ ಇದೆ ಎಂದರು.

ಇದನ್ನೂ ಓದಿ: Sourav Ganguly Biopic- ಲವ್ ಫಿಲಂಸ್​ನಿಂದ ಗಂಗೂಲಿ ಬಯೋಪಿಕ್ ಸಿನಿಮಾ ನಿರ್ಮಾಣ

ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ.!!

ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ತಜ್ಞರೊಂದಿಗೆ ಚರ್ಚಿಸಿ ಈ ನಿಯಮಗಳನ್ನು ಮಾಡಿದೆ. ಬೇರೆ ಯಾವ ಹಿನ್ನೆಲೆಯೂ ಇಲ್ಲ. ಸಮಿತಿಯ ಬೇರೆ ಬೇರೆ ಮನವಿಗಳನ್ನೂ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಸಮಾಧಾನಪಡಿಸಿದರು. ದೇವಸ್ಥಾನ ಹಾಗೂ ಮನೆಯ ಹಬ್ಬದ ಆಚರಣೆಗೆ ಯಾವುದೇ ನಿರ್ಬಂಧಗಳಿಲ್ಲ. ಸಾರ್ವಜನಿಕ ಜಾಗದ ಆಚರಣೆ ಮಾತ್ರ ಸೀಮಿತವಾಗಿ ಮಾಡಬೇಕೆಂಬ ನಿಯಮವಿದೆ. ಹೀಗಾಗಿ ಜನರು ಸರ್ಕಾರದ ಆದೇಶಕ್ಕೆ ಮಾನ್ಯತೆ ಕೊಡಬೇಕೆಂದು ಮನವಿ ಮಾಡಿದರು. ಸಮಿತಿಯಿಂದ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ಮುಂದುವರೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆದಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: