Bitcoin ಹಗರಣದಲ್ಲಿ ಭಾಗಿಯಾಗಿಲ್ಲವಾದರೆ BJP ನಾಯಕರು ಸಿಡಿಮಿಡಿಗೊಳ್ಳುತ್ತಿರುವುದು ಏಕೆ: Priyank Kharge ಪ್ರಶ್ನೆ

ಸರ್ಕಾರದ ಪರವಾಗಿ ಸಚಿವ ಸುಧಾಕರ್‌ ಪತ್ರಿಕಾಗೋಷ್ಠಿ ಏಕೆ? ಪೋಲಿಸರಿಂದ ಪತ್ರಿಕಾ ಪ್ರಕಟಣೆ ಏಕೆ‌? ಬಿಜೆಪಿ ನಾಯಕ ಸಿಡಿಮಿಡಿಗೊಂಡಿದ್ದು ಏಕೆ? ನಮ್ಮ ಸರಳ ಪ್ರಶ್ನೆಗಳಿಗೆ ಉತ್ತರವಿಲ್ಲ ಏಕೆ ಎಂದು ಸರಣಿ ಪ್ರಶ್ನೆಗಳ ಮೂಲಕ ಕಿಡಿಕಾರಿದ್ದಾರೆ.

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

  • Share this:
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪ್ರತಿಧ್ವನಿಸುತ್ತಿರುವ ಬಿಟ್​​ ಕಾಯಿನ್​​ ಹಗರಣದ (Bitcoin Scam) ಸದ್ದು ದಿನೇ ದಿನೇ ಜೋರಾಗುತ್ತೆ ಇದೆ. ಕಾಂಗ್ರೆಸ್​​ ಮುಖಂಡ, ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ (Priyank Kharge ) ಹಾಗೂ ರಾಜ್ಯ ಬಿಜೆಪಿ ನಾಯಕರ (BJP leaders) ಮಧ್ಯೆ ವಾಕ್ಸಮರ ಮುಂದುವರೆದಿದೆ. ಬಿಜೆಪಿ ನಾಯಕರ ವ್ಯಂಗ್ಯದ ಬಗ್ಗೆ ಟ್ವೀಟ್​ (Tweet) ಮೂಲಕ ಪ್ರಿಯಾಂಕ್​ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಟ್ ಕಾಯಿನ್​​ ಗಂಭೀರ ಪ್ರಕರಣವಲ್ಲ ಎಂದ ಸಿಎಂ ಬೊಮ್ಮಾಯಿ (CM Basavaraj Bommai) ಅವರು, ಪ್ರಧಾನಿ ನರೇಂದ್ರ ಮೋದಿ (PM Narendra Modi ) ಬಳಿ ವಿಷಯವನ್ನು ಪ್ರಸ್ತಾಪಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ನಂತರ ಸರ್ಕಾರದ ಪರವಾಗಿ ಸಚಿವ ಸುಧಾಕರ್‌ ಪತ್ರಿಕಾಗೋಷ್ಠಿ ಏಕೆ? ಪೋಲಿಸರಿಂದ ಪತ್ರಿಕಾ ಪ್ರಕಟಣೆ ಏಕೆ‌? ಬಿಜೆಪಿ ನಾಯಕ ಸಿಡಿಮಿಡಿಗೊಂಡಿದ್ದು ಏಕೆ? ನಮ್ಮ ಸರಳ ಪ್ರಶ್ನೆಗಳಿಗೆ ಉತ್ತರವಿಲ್ಲ ಏಕೆ ಎಂದು ಸರಣಿ ಪ್ರಶ್ನೆಗಳ ಮೂಲಕ ಕಿಡಿಕಾರಿದ್ದಾರೆ.

3ನೇ ಸಿಎಂ ಹೇಳಿಕೆಯಿಂದ ಶುರುವಾದ ವಾಕ್ಸಮರ

ಬಿಟ್​​ ಕಾಯಿನ್​​ ಹಗರಣ ಬಿಜೆಪಿ ಸರ್ಕಾರಕ್ಕೆ ಉರುಳಾಗಿದ್ದು, ಬಸವರಾಜ ಬೊಮ್ಮಾಯಿಯವರು ಸಿಎಂ ಸ್ಥಾನದಿಂದ ಕೆಳಗಿಳಿಯಬಹುದು. ಈ ಅವಧಿಯಲ್ಲಿ ಬಿಜೆಪಿಯಿಂದ 3ನೇ ಸಿಎಂ ಬರಬಹುದು ಎಂದು ಇತ್ತೀಚೆಗೆ ಪ್ರಿಯಾಂಕ್​ ಖರ್ಗೆ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕೆಂಡಾಮಂಡಲರಾಗಿದ್ದ ಬಿಜೆಪಿ ನಾಯಕರು ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.





ಪ್ರಿಯಾಂಕ್​ ಖರ್ಗೆ ವಿರುದ್ಧ ಸಿಡಿದೆದ್ದ ಸುಧಾಕರ್​

ನಿನ್ನೆ ಸಚಿವ ಸುಧಾಕರ್​​ ಪ್ರಿಯಾಂಕ್​ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾನ್ಯ ಪ್ರಿಯಾಂಕ್ ಖರ್ಗೆ ಅವರ ಸಾಂದರ್ಭಿಕ ಮರೆವು, ಜಾಣ ಕುರುಡು, ಕೀಳು ರಾಜಕೀಯದ ಆಲೋಚನೆಗಳು ಯಾರನ್ನು ಮೆಚ್ಚಿಸಲು ಎನ್ನುವುದು ಜನರಿಗೆ ತಿಳಿದಿದೆ. ಚಳಿ,ಮಳೆ,ಗಾಳಿಗಳ ಕಷ್ಟ ಅರಿಯದ ಅವರು ಆನುವಂಶಿಕ ನೆರಳಿನಲ್ಲೇ ವಿಹರಿಸಲಿ, ಆದರೆ ಸಂಪುಟ ಸಚಿವರಿಗೆ ಸರ್ಕಾರದ ಪರವಾಗಿ ಮಾತನಾಡುವ ಸಾಮೂಹಿಕ ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆತದ್ದೇಕೆ ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಅಪಪ್ರಚಾರ, ಸುಳ್ಳಿನ ರಾಜಕಾರಣವನ್ನು ಬಿಜೆಪಿ ಸಹಿಸುವುದಿಲ್ಲ. ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ನೂರು ಸುಳ್ಳು ಹೇಳುವ ನಿಮ್ಮ ಕುತಂತ್ರಗಳನ್ನು ಜನರ ಮುಂದಿಡಲೇಬೇಕು. ಸಚಿವರು ಮಾತ್ರವಲ್ಲ, ಪ್ರತಿಯೊಬ್ಬ ಕಾರ್ಯಕರ್ತ ಕೂಡ ಕಾಂಗ್ರೆಸ್ ಪಕ್ಷದ ನಾಟಕವನ್ನು ಬಯಲಿಗೆಳೆಯಲು ಸಿದ್ಧರಾಗಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Bitcoin Scam: ಬಿಟ್‌ಕಾಯಿನ್ ಹಗರಣದ ಬಗ್ಗೆ ಇಂದು ಮಹತ್ವದ ಸಂಸದೀಯ ಸ್ಥಾಯಿ ಸಮಿತಿ ಸಭೆ!

ಸಿಎಂ ಬೊಮ್ಮಾಯಿ ಮೇಲೆ ಗಂಭೀರ ಆರೋಪ

ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್​ ಖರ್ಗೆ ಸಿಎಂ ಬೊಮ್ಮಾಯಿ ವಿರುದ್ಧ ನೇರ ಆರೋಪ ಮಾಡಿದ್ದರು. ಬಿಟ್​​ ಕಾಯಿನ್​ ಹಗರಣದ ಬಗ್ಗೆ ನಾನು ಮಾತನಾಡಿದ್ದಕ್ಕೆ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿದ್ದಾರೆ. ಬಿಜೆಪಿಯವರಿಗೆ ಮಾತನಾಡಲು ವಿಷಯಗಳೇ ಇಲ್ಲ. ಪ್ರಿಯಾಂಕ್​​ ಖರ್ಗೆಗೆ ಮಾಹಿತಿ ಇಲ್ಲ ಎಂದಿದ್ದರು. ಕಾಂಗ್ರೆಸ್​​​ನವರು ಹಗರಣದಲ್ಲಿ ಇದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಅವರ ಮಾತಿನ ದಾಟಿ ನೋಡಿದರೆ ಬೇರೆ ಅರ್ಥ ಬರುತ್ತೆ. ನೀವು-ನಾವು ಇಬ್ಬರೂ ಇದರಲ್ಲಿ ಇದ್ದೇವೆ,  ಸೆಟಲ್ ಮಾಡಿಕೊಳ್ಳೋಣ ಎನ್ನುವಂತಿತ್ತು ಅವರ ಹೇಳಿಕೆ ಎಂದು ತಿರುಗೇಟು ನೀಡಿದ್ದರು.

ಬಿಜೆಪಿ ಸರ್ಕಾರದ ಬಗ್ಗೆ ಲೇವಡಿ

ಈ ಸರ್ಕಾರದಿಂದ ಸ್ಪಷ್ಟ ಸತ್ಯಾಂಶ ಹೊರಬರಲ್ಲ, ಯಾಕೆಂದರೆ ಎಲ್ಲರೂ ಇದರಲ್ಲಿ ಇದ್ದಾರೆ. ಪೊಲೀಸ್, ಸರ್ಕಾರ ಎಲ್ಲರೂ ಇದ್ದಾರೆ. ಇಲ್ಲಿ ಯಾರು ತನಿಖೆ ಮಾಡಿದರೂ ಸತ್ಯಾಂಶ ಹೊರಬರಲ್ಲ. ಸುಪ್ರೀಂ ಕೋರ್ಟ್ ಜಡ್ಜ್ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬರಲಿದೆ. ಸತ್ಯಾಂಶ ಹೊರಬಂದ ನಂತರ ಕ್ರಮ ಆಗಲಿದೆ. ಮೂರನೇ ಸಿಎಂ ಯಾರು ಬೇಕಾದರೂ ಆಗಲಿ. ನಾನು ಯಾರ ಹೆಸರನ್ನೂ ಇಲ್ಲಿ ‌ಹೇಳಲ್ಲ. ಮಾಜಿ ಗೃಹ ಸಚಿವರು, ಹಾಲಿ ಸಿಎಂ ಸರ್ವಜ್ಞರಿದ್ದಾರೆ. ಅವರು ಇದರ ಬಗ್ಗೆ ನಿಜಾಂಶ ಹೇಳಲಿ ಬಿಡಿ ಎಂದು ಲೇವಡಿ ಮಾಡಿದ್ದರು.
Published by:Kavya V
First published: