ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮುಂದೆ ಉದ್ದುದ್ದ ಸಾಲುಗಳು ಸಾಮಾನ್ಯವಾಗಿತ್ತು. ಆದರೆ ಅದ್ಯಾವಾಗ ಸರ್ಕಾರ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಿಸಿಕೊಂಡಿತೋ ಆಗ ಖಾಸಗಿ ಆಸ್ಪತ್ರೆಗಳ ಮುಂದೆ ಇದ್ದಿದ್ದ ಕ್ಯೂ ಇದ್ದಕ್ಕಿದ್ದ ಹಾಗೆ ಮಾಯವಾಗಲು ಶುರುವಾಯ್ತು. ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಪರಿಣಾಮ ಸದ್ಯ, ಖಾಸಗಿ ಆಸ್ಪತ್ರೆಗಳ ಕೂಡಿಟ್ಟ ಲಸಿಕೆ ಶೇಖರಣೆ ಖರ್ಚಾಗದೆ ಆಸ್ಪತ್ರೆಗಳು ಗೋಳಾಡುತ್ತಿವೆ.
ಕೇಂದ್ರ ಸರ್ಕಾರ ಉಚಿತ ಲಸಿಕೆ ಕೊಡುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆ ಕಡೆ ಮುಖ ಮಾಡದ ಮಂದಿ
ತಜ್ಞರ ಅಭಿಪ್ರಾಯ ಪ್ರಕಾರ ಇಷ್ಟೊತ್ತಿಗಾಗಲೇ ಕೊರೋನಾ ಮೂರನೇ ಅಲೆ ಅಪ್ಪಳಿಸ ಬೇಕಿತ್ತು. ಆದರೆ ಅದೃಷ್ಟವಶಾತ್ ಪರಿಸ್ಥಿತಿ ಹತೋಟಿಯಲ್ಲಿದೆ. ಇದರ ನಡುವೆ ಕೊರೋನಾದಿಂದ ಪರಾಗಲಿರುವ ದೊಡ್ಡ ಅಸ್ತ್ರ ಎಂದರೆ ಅದು ಲಸಿಕೆ ಮಾತ್ರ. ಹೀಗಾಗಿ ಲಸಿಕೆಗೂ ಬೇಡಿಕೆ ಹೆಚ್ಚಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಶೇಖರಣೆ ಮಾಡಿಟ್ಟುಕೊಂಡು ಜನರು ಬಾರದೆ ಗೋಳಾಡುತ್ತಿವೆ. ಮೊದಲು ಲಸಿಕೆ ಉಚಿತವಾಗಿ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಮಣಿದ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿಕೊಂಡಿತು. ಹೀಗಾಗಿ ಶೇ. 75 ಸರ್ಕಾರಿ ಆಸ್ಪತ್ರೆಗಳಿಗೆ ಶೇ. 25 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗೆ ಲಸಿಕೆಯನ್ನು ಕೇಂದ್ರ ಸರಬರಾಜು ಮಾಡುತ್ತಿದೆ. ಶೇ.25 ರಷ್ಟು ಲಸಿಕೆ ಮಾತ್ರ ಖಾಸಗಿ ಕ್ಚೇತ್ರಕ್ಕೆ ಸಿಗುತ್ತಿದ್ದರೂ ಅದನ್ನು ಖರ್ಚು ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಚಿಂತೆಗೆ ಬಿದ್ದಿದೆ. ಇದಕ್ಕೆ ಕಾರಣ ಸರ್ಕಾರ ಲಸಿಕೆ ಉಚಿತವಾಗಿ ಕೊಡುತ್ತಿರುವ ಹಿನ್ನೆಲೆ ಜನರು ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಲಸಿಕೆ ಪಡೆದುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ.
ವ್ಯಾಕ್ಸಿನ್ ಖರೀದಿಯಿಂದ ಹಿಂದೆ ಸರಿಯುತ್ತಿರುವ ಖಾಸಗಿ ಆಸ್ಪತ್ರೆಗಳು.!!
ಹೌದು, ಈಗ 25% ಲಸಿಕೆ ಮಾತ್ರ ಇದ್ರೂ ಜನರು ಬರದೆ ಖಾಸಗಿ ಆಸ್ಪತ್ರೆಗಳಿಗೆ ತಳಮಳ ಶುರುವಾಗಿದೆ. ಮೂರನೇ ಅಲೆ ಮನಗಂಡು ಸರ್ಕಾರಕ್ಕೆ 15 ಲಕ್ಷ ಡೋಸ್‌ಗೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿತ್ತು. ಆದರೆ ಜನರು ಉಚಿತವಾಗಿ ಲಸಿಕೆ ಪಡೆಯಲು ಮುಂದಾಗಿರುವ ಹಿನ್ನೆಲೆ ಅರ್ಧಕ್ಕರ್ಧ ಲಸಿಕೆ ಅಂದರೆ 7.50 ಲಕ್ಷ ಡೋಸ್ ಮಾತ್ರ ಸಾಕು ಎಂದು ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹೇಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‌ಗೆ 630 ರೂ ಹಾಗೂ ಸೇವಾ ಶುಲ್ಕ 150 ಸೇರಿಸಿ ಪ್ರತಿ ಡೋಸ್ ಗೆ 780 ರೂ. ಪಡೆದುಕೊಳ್ಳುತ್ತಿದೆ. ಇದೇ ರೀತಿ ಕೋವ್ಯಾಕ್ಸಿನ್‌ಗೆ 1260 ರೂ. ಹಾಗೂ ಸೇವಾ ಶುಲ್ಕ 150 ಸೇರಿಸಿ 1,410 ರೂ.ಅನ್ನು ಜನರಿದಂ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೋವಿಶೀಲ್ಡ್‌ಗೆ 630 ಮತ್ತು ಕೋವ್ಯಾಕ್ಸಿನ್‌ಗೆ 1260 ರೂಪಾಯಿಗೆ ಖಾಸಗಿ ಕ್ಷೇತ್ರಕ್ಕೆ ಮಾರಾಟ ಮಾಡುತ್ತಿದೆ. ಆದರೀಗ ಸರ್ಕಾರದಿಂದ ಕೊಂಡುಕೊಂಡು ಕೂಡಿಟ್ಟಿರುವ ಲಸಿಕೆ ಖರ್ಚಾಗದೆ ಖಾಸಗಿ ಆಸ್ಪತ್ರೆಗಳು ಕಂಗಾಲಾಗಿ ಕೂತಿದೆ.
ಇದನ್ನೂ ಓದಿ: Vaccine For Children: ಸೆಪ್ಟೆಂಬರ್ ಕೊನೆಗೆ ಮಕ್ಕಳಿಗೂ ಸಿಗಲಿದೆಯಂತೆ ಕೊರೊನಾ ಲಸಿಕೆ!
ಖಾಸಗಿ ಆಸ್ಪತ್ರೆಗಳ ಲಸಿಕೆ ವಾಪಾಸ್ ಖರೀದಿಸಲು ಬಿಬಿಎಂಪಿ ಚಿಂತನೆ.!!
ಹೀಗಾಗಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಅಧ್ಯಕ್ಷ ಮನವಿ ಮಾಡಿಕೊಂಡಿದೆ. ಕನಿಷ್ಠ ಪಕ್ಷ ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಸರ್ಕಾರವೇ ವಾಪಾಸ್ ಖರೀದಿಸಿ ಸೇವಾ ಶುಲ್ಕ ಮಾತ್ರ ತಮಗೆ ಪಾವತಿಸಿದರೆ ಸಾಕು ಎಂಬ ನಿಲುವಿಗೆ ಖಾಸಗಿ ಆಸ್ಪತ್ರೆಗಳ ಬಂದಿದೆ. ಹೀಗಾಗಿ ಆದಿಯಾಗಿ ಬೆಂಗಳೂರು ನಗರದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕೆಯನ್ನು ವಾಪಾಸ್ ಖರೀದಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಸರ್ಕಾರದ ಖರ್ಚಿನಲ್ಲಿ ಪುನಃ ಲಸಿಕೆ ಖರೀದಿಸುವುದು ಆಗುವ ಮಾತಲ್ಲ. ಹೀಗಾಗಿ ಸಿಎಸ್ಆರ್ ಫಂಡ್ ಬಂಡವಾಳ ಮಾಡಿಕೊಂಡು ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಖರೀದಿಸಲು ಪಾಲಿಕೆ ಮುಂದಾಗಿದೆ. ಈ ಮೂಲಕ ಅದನ್ನೂ ಸೇವಾ ಶುಲ್ಕ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಲಸಿಕೆ ಹಂಚಿಕೆ ಮಾಡುವ ಲೆಕ್ಕಾಚಾರ ಬಿಬಿಎಂಪಿಯದ್ದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ