Police Suicide- ಮಾಜಿ ಸೇನಾ ಯೋಧ ಹಾಗೂ ಪೊಲೀಸ್ ಹೆಡ್​ಕಾನ್ಸ್​ಟೆಬಲ್ ಸದಾಶಿವ ಆತ್ಮಹತ್ಯೆ

ಬೆಂಗಳೂರಿನ ಗಿರಿನಗರದಲ್ಲಿ ಹೆಡ್ ಕಾನ್ಸ್​ಟೆಬಲ್ ಸದಾಶಿವ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಅವರ ಈ ನಿರ್ಧಾರಕ್ಕೆ ಕಾರಣ ಗೊತ್ತಾಗಿಲ್ಲ. 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ 9 ವರ್ಷ ಹಿಂದೆ ಅವರು ಪೊಲೀಸ್ ಇಲಾಖೆ ಸೇರಿದ್ದರು.

ಸೈಬರ್ ಕ್ರೈಮ್ ಠಾಣೆ ಹೆಡ್​ಕಾನ್ಸ್​ಟೆಬಲ್ ಸದಾಶಿವ

ಸೈಬರ್ ಕ್ರೈಮ್ ಠಾಣೆ ಹೆಡ್​ಕಾನ್ಸ್​ಟೆಬಲ್ ಸದಾಶಿವ

  • Share this:
ಬೆಂಗಳೂರು, ಆ. 30: ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ (Benglauru city Cyber Crime Police Station) ಹೆಡ್ ಕಾನ್ಸ್​ಟೆಬಲ್ ಆಗಿದ್ದ 47 ವರ್ಷದ ಸದಾಶಿವ್ (Head Constable Sadashiva) ಅವರು ಗಿರಿನಗರದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಇಂದು ಸೋಮವಾರ ಬೆಳಗ್ಗೆ ಮನೆಯಲ್ಲೇ ಅವರು ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಗಿರಿನಗರ ಪೊಲೀಸ್ ಠಾಣೆಯಲ್ಲಿ (Girinagar Police Station) ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ.

ಸದಾಶಿವ ಅವರು ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್​ಟೆಬಲ್ ಆಗಿದ್ದರು. 9 ವರ್ಷಗಳಿಂದ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿದ್ದ ಅವರು ಸೈಬರ್ ಕ್ರೈಮ್ ಠಾಣೆಗೆ ಮುನ್ನ ವಿಜಯನಗರ ಪೊಲೀಸ್ ಠಾಣೆ, ಸಿಸಿಬಿ ಮೊದಲಾದೆಡೆ ಕೆಲಸ ಮಾಡಿದ್ದರು. ಪೊಲೀಸ್ ಇಲಾಖೆಗೆ ಬರುವ ಮುನ್ನ ಅವರು ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಕೂಡ ಸಲ್ಲಿಸಿದ್ದರು. ಸೇನೆಯಿಂದ ನಿವೃತ್ತರಾದ ಬಳಿಕ ಅವರು ಪೊಲೀಸ್ ಇಲಾಖೆ ಸೇರಿದ್ದರೆನ್ನಲಾಗಿದೆ.

ಇದನ್ನೂ ಓದಿ: Drugs Case: ಬೇಕಂತಲೇ ಅರೆಸ್ಟ್ ಆಗಿದ್ದ ಡ್ರಗ್ ಪೆಡ್ಲರ್ ಥಾಮಸ್ ಕಲು; ಸೆಲಬ್ರಿಟಿ ಸೋನಿಯಾ ಮನೆಯಲ್ಲಿ ಗಾಂಜಾ ಪತ್ತೆ

ಕೆಲ ತಿಂಗಳ ಹಿಂದೆ ಸಿಐಡಿ ಪೊಲೀಸ್ ವಿಭಾಗದಲ್ಲಿ ಡಿವೈಎಸ್​ಪಿ ಆಗಿದ್ದ ಲಕ್ಷ್ಮೀ ಎಂಬುವರು ನಾಗರಬಾವಿ ಬಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಭಾರತದಾದ್ಯಂತ ಐದಾರು ವರ್ಷಗಳ ಅವಧಿಯಲ್ಲಿ ಅಂದಾಜು ಸಾವಿರ ಮಂದಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಇದೆ. ಕೆಲಸದ ಒತ್ತಡ, ರಜೆ ನಿರಾಕರಣೆ ಇತ್ಯಾದಿ ಕಾರಣಗಳಿಂದಲೇ ಹೆಚ್ಚು ಜನರು ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಐದು ವರ್ಷಗಳ ಹಿಂದೆ ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಕೂಡ ಇಂಥದ್ದೇ ಒಂದು ಕಾರಣಕ್ಕೆ ಆಗಿದ್ದು ನೆನಪಿರಬಹುದು. ರಜೆ ನಿರಾಕರಣೆ, ವರ್ಗಾವಣೆ ಇತ್ಯಾದಿ ವಿಚಾರದಲ್ಲಿ ಮೇಲಧಿಕಾರಿ ಹಾಗೂ ರಾಜಕಾರಣಿಗಳ ಕಿರುಕುಳದ ಬಗ್ಗೆ ಗಣಪತಿ ಅವರು ಆತ್ಮಹತ್ಯೆಗೆ ಮುನ್ನ ವಿಡಿಯೋ ಹೇಳಿಕೆ ನೀಡಿದ್ದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಮುನಿರಾಜು ಹೊಸಕೋಟೆ
Published by:Vijayasarthy SN
First published: