ಕೋರಮಂಗಲ ಅಪಘಾತಕ್ಕೆ ಒಂದೆರಡು ಗಂಟೆ ಮೊದಲು ವಾರ್ನಿಂಗ್ ಕೊಟ್ಟಿದ್ದ ಪೊಲೀಸರು
Koramangala Accident- ನಿನ್ನೆ ಸೋಮವಾರ ರಾತ್ರಿ 10:35ಕ್ಕೆ ಕೋರಮಂಗಲದ ಅಪೋಲೊ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ನಲ್ಲಿ ವೇಗವಾಗಿ ಸಾಗಿಬಂದಿದ್ದ ಕಾರನ್ನು ಪೊಲೀಸರು ತಡೆದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರಂತೆ.
ಬೆಂಗಳೂರು, ಆ. 31: ಕೋರಮಂಗಲದ 80 ಅಡಿ ರಸ್ತೆಯಲ್ಲಿ ಇಂದು ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಬಲಿಯಾದ ಘಟನೆ ದಿಗ್ಭ್ರಮೆ ಮೂಡಿಸಿದೆ. ಹೊಸೂರಿನ ತಳಿ ಕ್ಷೇತ್ರದ ಡಿಎಂಕೆ ಸಂಸದ ವೈ ಪ್ರಕಾಶ್ ಅವರ ಮಗ ಕರುಣಾ ಸಾಗರ್ ಈ ಮೃತರ ಪೈಕಿ ಇದ್ದಾರೆ. ಇವರು ಚಲಾಯಿಸುತ್ತಿದ್ದ ಆಡಿ ಕಾರು ಬಹಳ ವೇಗವಾಗಿ ಸಾಗಿ ಫೂಟ್ಪಾತ್ ತಡೆಗೋಡೆ ಗುದ್ದಿ ಬಳಿಕ ಬ್ಯಾಂಕ್ ಕಟ್ಟಡಕ್ಕೆ ಗುದ್ದಿ ಅಪಘಾತವಾಗಿದೆ. ಕಾರಿನಲ್ಲಿದ್ದ ಎಲ್ಲಾ ಏಳು ಮಂದಿಯೂ ದಾರುಣ ಸಾವು ಕಂಡಿದ್ಧಾರೆ. ತಡರಾತ್ರಿ ಈ ಅಪಘಾತ ಸಂಭವಿಸುವುದಕ್ಕೂ ಮುನ್ನ ಪೊಲೀಸರ ಕಣ್ಣಿಗೆ ಈ ಕಾರು ಬಿದ್ದಿತ್ತಂತೆ. ರಾತ್ರಿ 10:35ರ ಸುಮಾರಿಗೆ ಅತಿವೇಗವಾಗಿ ಸಾಗುತ್ತಿದ್ದ ಈ ಕಾರನ್ನು ಕೋರಮಂಗಲದ ಅಪೋಲೋ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದರು. ಈ ಘಟನೆಯ ವಿವರ ನೀಡಿದ ಕಾನ್ಸ್ಟೆಬಲ್ ಪ್ರಶಾಂತ್, ತಾವು ಯಾಕೆ ರ್ಯಾಷ್ ಡ್ರೈವಿಂಗ್ ಮಾಡಿದಿ ಎಂದು ಪ್ರಶ್ನಿಸಿದ್ದರಂತೆ. ಇದೇ ರಸ್ತೆಯಲ್ಲಿ ತಮ್ಮ ಮನೆ ಇದೆ. ಎಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಕರುಣ್ ಸಾಗರ್ ತಮಗೆ ತಿಳಿಸಿದರು. ನೈಟ್ ಕರ್ಫ್ಯೂ ಇದೆ. ಹುಷಾರಾಗಿ ನಿಧಾನವಾಗಿ ಹೋಗಿ ಎಂದು ತಾನು ಅವರಿಗೆ ತಿಳಿಹೇಳಿದ್ದಾಗಿ ಪೊಲೀಸ್ ಕಾನ್ಸ್ಟೆಬಲ್ ಪ್ರಶಾಂತ್ ಹೇಳುತ್ತಾರೆ.
ಅಪಘಾತಕ್ಕೊಳಗಾದ ಕಾರು ವೇಗವಾಗಿ ಚಲಾಯಿಸುತ್ತಿದ್ದು ಮಾತ್ರವಲ್ಲ ಓವರ್ ಲೋಡ್ ಕೂಡ ಆಗಿತ್ತು. ಐದು ಜನರು ಕೂರಬೇಕಿದ್ದ ಕಾರಿನಲ್ಲಿ ಏಳು ಮಂದಿ ಇದ್ದರು. ಡ್ರೈವರ್ ಸೀಟಿನ ಪಕ್ಕದ ಒಂದೇ ಸೀಟಿನಲ್ಲಿ ಒಬ್ಬ ಹುಡುಗ ಹಾಗೂ ಒಬ್ಬ ಹುಡುಗಿ ಇಬ್ಬರೂ ಕೂತಿದ್ದರು. ಹಿಂಬದಿ ಸೀಟ್ನಲ್ಲಿ ಮೂರು ಮಂದಿ ಕೂರಬೇಕಾದ ಜಾಗದಲ್ಲಿ ನಾಲ್ವರು ಕೂತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಕಾರು ಚಲಾಯಿಸುತ್ತಿದ್ದನೆನ್ನಲಾದ ಕುರಣ್ ಸಾಗರ್ ಅವರಿಗೆ ಕಾರನ್ನು ವಗವಾಗಿ ಚಲಾಯಿಸುವ ಕ್ರೇಜ್ ಇತ್ತು. ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಂದಲೇ ಅವರ ಡ್ರೈವಿಂಗ್ ಕ್ರೇಜ್ ಬಗ್ಗೆ ಸುಳಿವು ಸಿಗುತ್ತದೆ. ಆದರೆ, ಅಷ್ಟು ತಡರಾತ್ರಿ ಈ ಏಳು ಮಂದಿ ಎಲ್ಲಿಗೆ ಹೋಗಿ ಬಂದಿದ್ದರು ಎಂಬುದು ಗೊತ್ತಾಗಬೇಕಿದೆ.
ಇದೇ ವೇಳೆ, ಅಪಘಾತ ನಡೆದ ಸ್ಥಳದಲ್ಲಿದ್ದ ಓಲಾ ಕ್ಯಾಬ್ ಚಾಲಕ ಸತೀಶ್ ಎಂಬಾತ ಇದೀಗ ಕರುಣ್ ಸಾಗರ್ ವಿರುದ್ಧ ರ್ಯಾಷ್ ಡ್ರೈವಿಂಗ್ ದೂರು ಕೊಟ್ಟು ಎಫ್ಐಆರ್ ದಾಖಲಿಸಿದ್ದಾರೆ. ಘಟನೆ ಸಂಬಂಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅವರು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ. ಸತೀಶ್ ದೂರಿನ ಆಧಾರದ ಮೇಲೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇನ್ನು, ಕಾರಿನಲ್ಲಿ ಮೃತರ ಪೈಕಿ ಇದ್ದ ಬಿಂದು ಎಂಬಾಕೆ ಬ್ರಿಟನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ಬಂದಿದ್ದರು. ಕರುಣ್ ಸಾಗರ್ ಜೊತೆ ಇವರ ಮದುವೆ ನಿಶ್ಚಯವಾಗಿತ್ತೆಂಬ ಮಾಹಿತಿ ಇದೆ. ಇನ್ನು, ಮೃತ ಕರುಣ್ ಸಾಗರ್ ಅವರ ತಂದೆ ವೈ ಪ್ರಕಾಶ್ ಅವರು ತಳಿ ಕ್ಷೇತ್ರದ ಮಾಜಿ ಡಿಎಂಕೆ ಶಾಸಕರಾಗಿದ್ದಾರೆ. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸ್ನೇಹಿತರೂ ಹೌದು. ಅಪಘಾತ ನಡೆದ ಬಳಿಕ ರಾಮಲಿಂಗಾರೆಡ್ಡಿ ಅವರು ಹೊಸೂರಿನಲ್ಲಿರುವ ಅವರ ಮನೆಗೂ ತೆರಳಿದ್ದರು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)