ಬೆಂಗಳೂರು : ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಪರಿಸ್ಥಿತಿ ದಿನೇ ದಿನೇ ಕೈ ಮೀರುತ್ತಿದೆ. ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆಸಿದ ವಿಡಿಯೋ ಸಂವಾದದಲ್ಲೂ ಈ ಬಗ್ಗೆ ಚರ್ಚಿಸಲಾಯಿತು. ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳವಾಗುವುದರ ಬಗ್ಗೆ ಮಾಹಿತಿ ಪಡೆದ ಮೋದಿ ಕೊರೋನಾ ನಿಯಂತ್ರಣಕ್ಕೆ ಬಿಬಿಎಂಪಿಗೆ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಸಂವಾದದಲ್ಲಿ ಸದ್ಯದ ಕೊರೋನಾ ಸ್ಥಿತಿಗತಿ ಬಗ್ಗೆ ಪರಾಮರ್ಶೆ ಮಾಡಲಾಯಿತು. ಈ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಬೆಂಗಳೂರಿನ ಬಗ್ಗೆ ವಿಶೇಷವಾಗಿ ಚರ್ಚೆ ಮಾಡಲಾಯಿತು.
ಊಹೆಗೂ ಮೀರಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಇದರ ಜೊತೆಗೆ ಹಾಸಿಗೆ ವ್ಯವಸ್ಥೆ, ಆಕ್ಸಿಜನ್ ಪೂರೈಕೆ ಕೂಡ ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ನಿಯಂತ್ರಣ ಮಾಡಲು ಬಿಬಿಎಂಪಿಗೆ ಪ್ರಧಾನಿ ಮೋದಿ ಕೆಲವೊಂದಿಷ್ಟು ಸಲಹ ಸೂಚನೆಯನ್ನು ಕೊಟ್ಟಿದ್ದಾರೆ.
ಕಂಟೈನ್ಮೆಂಟ್ ಝೋನ್ ಹೆಚ್ಚಿಸುವಂತೆ ಮೋದಿ ಸಲಹೆ.!
ಸದ್ಯ ಬೆಂಗಳೂರಿನಲ್ಲಿ 15 ಸಾವಿರದ ಗಡಿಯನ್ನೂ ದಾಟಿರುವ ಕೊರೋನಾ ಪ್ರಕರಣ ಮೇ ಮೊದಲ ವಾರದಲ್ಲೇ 25 ಸಾವಿರದ ಗಡಿ ದಾಟಲಿದೆ ಅಂತ ಅಂದಾಜಿಸಲಾಗಿದೆ. ಈ ಹಿನ್ನೆಲೆ ಮೋದಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ಝೋನ್ ಗಳ ಮೇಲೆ ಹೆಚ್ಚಿನ ನಿಗಾ ಇಡಲು ಸೂಚಿಸಿದ್ದಾರಂತೆ. ಸಾಧ್ಯವಾದರೆ ಕಂಟೈನ್ಮೆಂಟ್ ಝೋನ್ಗಳನ್ನು ವಿಭಜಿಸಿ ಮೈಕ್ರೋ ಕಂಟೈನ್ಮೆಂಟ್ ಝೋನ್ಗಳನ್ನಾಗಿ ಮಾಡಿ. ಇದೂ ಯಶಸ್ವಿಯಾಗದೆ ಹೋದರೆ ಕೊನೆಯ ದಾರಿಯಾಗಿ ಬೆಂಗಳೂರಲ್ಲಿ ಲಾಕ್ ಡೌನ್ ಮಾಡಿ ಎಂದು ಮೋದಿ ಸೂಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತ, ಕೋವಿಡ್ ಅನ್ನು ಯಾವ ರೀತಿ ಕಂಟ್ರೋಲ್ ಮಾಡಬೇಕು. ಅದಕ್ಕೆ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಬೇಕು. ಕೇಂದ್ರದಿಂದ ಏನೆಲ್ಲಾ ಸೌಲಭ್ಯ ಗಳು ಬೇಕು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.
ಆಕ್ಸಿಜನ್ ಕೊರತೆ ಒಪ್ಪಿಕೊಂಡ ಬಿಬಿಎಂಪಿ
ಆಕ್ಸಿಜನ್ ಇಲ್ಲದೆ ಜನರು ಪರದಾಡುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿದೆ. ಇದಾಗಿಯೂ ಸಮಸ್ಯೆಗಳೇನು ಇಲ್ಲ ಎನ್ನುತ್ತಿದ್ದ ಅಧಿಕಾರಿಗಳು ಹಾಗೂ ಸರ್ಕಾರವೇ ಈಗ ಕೊರತೆಗಳ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಜೊತೆಗಿನ ವೀಡಿಯೋ ಸಂವಾದದ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕೂಡ ನಗರದಲ್ಲಿ ಆಕ್ಸಿಜನ್ ಅಭಾವ ಇದೆ ಎಂದ ಒಪ್ಪಿಕೊಂಡಿದ್ದಾರೆ. ಆಕ್ಸಿಜನ್ ಗಿಂತಲೂ ಆಕ್ಸಿಜನ್ ಟ್ಯಾಂಕರ್ ಗಳ ಕೊರತೆ ಹೆಚ್ಚಾಗಿದೆ. ಅದನ್ನ ಯಾವ ರೀತಿ ಎದುರಿಸಬೇಕು ಎನ್ನುವುದು ಕೂಡಾ ಚರ್ಚೆ ಆಗಿದೆ. ಅದರ ಜೊತೆ ಬೇರೆ ರಾಜ್ಯಗಳಿಂದ ಆಮದು-ರಪ್ತು ಬಗ್ಗೆ ಕೂಡಾ ಪ್ರಸ್ತಾಪ ಆಗಿದೆ. ಇದರಿಂದ ಕೇಂದ್ರ ಸರ್ಕಾರವೂ ಕೂಡ ಆದಷ್ಟು ಬೇಗ ಸಿಲಿಂಡರ್ ವ್ಯವಸ್ಥೆ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ಹೋಟೆಲ್ಗಳಲ್ಲಿ ಕೇರ್ ಸೆಂಟರ್ ವ್ಯವಸ್ಥೆ
ಇನ್ನು ಹಾಸಿಗೆ ಕೊಡಲು ಸಾಧ್ಯವಾಗದ ಖಾಸಗಿ ಆಸ್ಪತ್ರೆಗಳು ಹೋಟೆಲ್ ಗಳ ಜೊತೆ ಕೈಜೋಡಿಸಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಲು ಬಿಬಿಎಂಪಿ ಸೂಚಿಸಿದೆ. ಈಗಾಗಲೇ ಸರ್ಕಾರ 50% ಹಾಸಿಗೆ ಮೀಸಲಿಡಬೇಕು ಎಂದು ಹೇಳಿದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ 66 ಖಾಸಗಿ ಆಸ್ಪತ್ರೆ ಇದನ್ನು ಉಲ್ಲಂಘಿಸಿದ್ದು, ಅಂಥಾ ಆಸ್ಪತ್ರೆಗಳಿಗೆ ಪಾಲಿಕೆ ನೋಟಿಸ್ ಕೂಡ ಕೊಟ್ಟಿದೆ. ಈಗ ನಾನ್ ಕೋವಿಡ್ ಪೇಶೆಂಟ್ಗಳ ಕಾರಣದಿಂದ ಹಾಸಿಗೆ ಒದಗಿಸಲು ಸಾಧ್ಯವಾಗದೆ ಇರುವವರು ಹೋಟೆಲ್ ಗಳಲ್ಲಿ ಕೇರ್ ಸೆಂಟರ್ ಮಾದರಿಯಲ್ಲಿ ಬೆಡ್ ಒದಗಿಸಲು ಪಾಲಿಕೆ ಖಡಕ್ ಸೂಚನೆ ಕೊಟ್ಟಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ