ಸಿದ್ದರಾಮಯ್ಯ ಬಾದಾಮಿಯ ಇಮ್ಮಡಿ ಪುಲಿಕೇಶಿ: ಸಿದ್ದು ಮನೆ ಮುಂದೆ ಹುಲಿಯಾ ಅಭಿಮಾನಿಗಳ ದಂಡು

ಸಿದ್ದರಾಮಯ್ಯ ಮುಂದಿನ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಿ ಗೆದ್ದು ಸಿಎಂ ಆಗಬೇಕು. ಅವರು ಗೆಲ್ಲದಿದ್ದರೆ ತಾವು ರಾಜಕೀಯ ನಿವೃತ್ತಿ ಆಗುತ್ತೇವೆ ಎಂದು ಬಾದಾಮಿಯಿಂದ ಬೆಂಗಳೂರಿಗೆ ಬಂದ ಸ್ಥಳೀಯ ನಾಯಕರುಗಳು ಹೇಳಿದ್ದಾರೆ.

ಸಿದ್ದರಾಮಯ್ಯ (ಫೈಲ್ ಚಿತ್ರ)

ಸಿದ್ದರಾಮಯ್ಯ (ಫೈಲ್ ಚಿತ್ರ)

 • Share this:
  ಬೆಂಗಳೂರು (ಜುಲೈ 06): ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆನ್ನುವುದು ಜನರ ಇಚ್ಛೆ. ಅವರು ಚಾಮರಾಜಪೇಟೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ಜಮೀರ್ ಅಹ್ಮದ್ ಹಲವು ಬಾರಿ ಹೇಳುತ್ತಲೇ ಬಂದಿದ್ದಾರೆ. ಇದು ಅವರು ಸಿದ್ದರಾಮಯ್ಯ ಮೇಲಿನ ಪ್ರೀತಿಯ ದ್ಯೋತಕವಾಗಿ ನೀಡಿದ ಹೇಳಿಕೆಯಾದರೂ ಅವು ವಿವಾದಗಳಿಗೆ ಕಾರಣವಂತೂ ಆಗಿವೆ. ಜೊತೆಗೆ, ಬಾದಾಮಿಯಲ್ಲಿರುವ ಸಿದ್ದರಾಮಯ್ಯ ಅವರ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನ ಗೆಲ್ಲಿಸಿ ಮಾನ ಉಳಿಸಿದ ಬಾದಾಮಿ ಜನರಿಗೆ ತಮ್ಮ ನೆಚ್ಚಿನ ಹುಲಿಯಾ ಮತ್ತೊಮ್ಮೆ ತಮ್ಮ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂಬುದು ಆಸೆಯಾಗಿದೆ. ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆಂದು ಜಮೀರ್ ಹೇಳಿಕೆ ನೀಡಿದಾಗೆಲ್ಲಾ ಬಾದಾಮಿಯ ಸಿದ್ದು ಅಭಿಮಾನಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಇಂದು ಬಾದಾಮಿಯಿಂದ ನೂರಾರು ಮಂದಿ ಜನರು ಬೆಂಗಳೂರಿಗೆ ಆಗಮಿಸಿ ಸಿದ್ದರಾಮಯ್ಯ ಅವರ ನಿವಾಸವನ್ನು ಸುತ್ತುವರೆದು ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಹಾಕಿದರು. ಹೌದೋ ಹುಲಿಯಾ, ಬಾದಾಮಿ ಹುಲಿಯಾ ಎಂಬಿತ್ಯಾದಿ ಘೋಷಣೆಗಳನ್ನ ಕೂಗಿ ತಮ್ಮ ಅಭಿಮಾನವನ್ನ ಮೆರೆದರು. ಹಾಗೆಯೇ, ಮುಂದಿನ ಚುನಾವಣೆಯಲ್ಲಿ ಬಾದಾಮಿಯಲ್ಲೇ ಸ್ಪರ್ಧಿಸಬೇಕು ಎಂದು ಸಿದ್ದರಾಮಯ್ಯ ಅವರನ್ನ ಒತ್ತಾಯಿಸಿದರು.

  ಮುಂದಿನ ಬಾರಿಯೂ ಸಿದ್ದರಾಮಯ್ಯ ಉತ್ತರ ಕರ್ನಾಟದಿಂದಲೇ ಮುಖ್ಯಮಂತ್ರಿ ಬರಬೇಕು. ಸಿದ್ದರಾಮಯ್ಯ ಬಾದಾಮಿಯ ಇಮ್ಮಡಿ ಪುಲಿಕೇಶಿ. ಅವರು ಮುಂದಿನ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿ ಆಗಬೇಕು ಎಂದು ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಅವರು ನಮ್ಮೆಲ್ಲರ ನೆಚ್ಚಿನ ನಾಯಕ. ಅವರು ಒಳ್ಳೆಯ ಕೆಲಸಗಳನ್ನ ಮಾಡಿ ಜನಪ್ರೀತಿ ಗಳಿಸಿದ್ದಾರೆ. ಕ್ಷೇತ್ರದ ಎಲ್ಲಾ ಸಮುದಾಯಗಳ ಜನರು ಸೇರಿ ಅವರನ್ನ ಗೆಲ್ಲಿಸುತ್ತೇವೆ. ಸಿದ್ದರಾಮಯ್ಯ ಅವರು ಈ ಬಾರಿ ಗೆಲ್ಲುವುದು ನಿಶ್ಚಿತ ಮಾತ್ರ ಅಲ್ಲ, 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

  ಕಳೆದ ಬಾರಿ ಬಾದಾಮಿಯಲ್ಲಿ ತೀರಾ ಅಲ್ಪಮತಗಳ ಅಂತರದಿಂದ ಗೆದ್ದಾಗ ನಿಮ್ಮ ಪ್ರೀತಿ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಥಳೀಯ ನಾಯಕರು, ಸಿದ್ದರಾಮಯ್ಯ ಬಗ್ಗೆ ನಮಗೆ ಆಗಲೂ ಪ್ರೀತಿ ಇತ್ತು. ಈ ಬಾರಿ ಅವರ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆ. ಮುಂಬರುವ ಚುನಾವಣೆಯಲ್ಲಿ ಅವರನ್ನ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಇಲ್ಲದಿದ್ದರೆ ನಾವು ರಾಜಕೀಯ ನಿವೃತ್ತಿ ಆಗುತ್ತೇವೆ ಪಣ ತೊಟ್ಟರು.

  ಇದನ್ನೂ ಓದಿ: DCM Laxman Savadi: ಡಿಸಿಎಂ ಸವದಿ ಪುತ್ರನ ಕಾರು ಅಪಘಾತ – ರೈತ ಸಾವು; ನನ್ನ ಮಗ ಆ ಕಾರಿನಲ್ಲಿ ಇರಲೇ ಇಲ್ಲ ಎಂದ ಲಕ್ಷ್ಮಣ ಸವದಿ

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ ಟಿ ದೇವೇಗೌಡ ಅವರ ಎದುರು ಸಿದ್ದರಾಮಯ್ಯ ಹೀನಾಯ ಸೋಲನುಭವಿಸಿದರು. ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಯ ಬಿ ಶ್ರೀರಾಮುಲು ಸ್ಪರ್ಧೆ ಮಾಡಿ ಸಿದ್ದರಾಮಯ್ಯ ಅವರಿಗೆ ನಿಕಟ ಪೈಪೋಟಿ ನೀಡಿದರು. ಬಹುತೇಕ ಶ್ರೀರಾಮುಲು ಅವರೇ ಗೆಲ್ಲಬಹುದು ಎಂಬಂತಹ ಸಂದರ್ಭವೂ ಬರುವುದರಲ್ಲಿತ್ತು. ಆದರೆ, ಕೆಲವೇ ಮತಗಳ ಅಂತರದಿಂದ ಸಿದ್ದರಾಮಯ್ಯ ಗೆದ್ದು ಮಾನ ಉಳಿಸಿಕೊಂಡರು. ನಂತರ ಅವರು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ಹಿಸಿದರು. ಈಗ ಅವರು ವಿಪಕ್ಷ ನಾಯಕರಾಗಿ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ ನೆರವು: ದಶರಥ್ ಸಾವೂರು
  Published by:Vijayasarthy SN
  First published: