#ShutThePothole Mega Impact: ನ್ಯೂಸ್​18 ಅಭಿಯಾನದಿಂದ ಎಚ್ಚೆತ್ತ ಬಿಬಿಎಂಪಿ: ರಸ್ತೆಗುಂಡಿ ಮುಚ್ಚಲು ಟಾಸ್ಕ್​ ಫೋರ್ಸ್​ ರಚನೆ

News18 Impact: ಮಲಗಿದ್ದ ಇಲಾಖೆಗಳನ್ನು ಬಡಿದೆಬ್ಬಿಸುವ ಕೆಲಸಕ್ಕೆ ನ್ಯೂಸ್​18 ಕೈ ಹಾಕಿದ ಕೆಲವೇ ದಿನಗಳಲ್ಲಿ, ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. ಇದು ನ್ಯೂಸ್​18 ಇಂಪ್ಯಾಕ್ಟ್​ ಎಂಬುದಕ್ಕಿಂತ, ನಗರವಾಸಿಗಳ ಸುರಕ್ಷತೆಗೆ ಸಿಕ್ಕ ಗೆಲುವು ಎಂದು ನಮ್ಮ ತಂಡ ಪರಿಗಣಿಸುತ್ತದೆ

ರಸ್ತೆ ಗುಂಡಿ ಮುಚ್ಚುತ್ತಿರುವ ಬಿಬಿಎಂಪಿ ಸಿಬ್ಬಂದಿ

ರಸ್ತೆ ಗುಂಡಿ ಮುಚ್ಚುತ್ತಿರುವ ಬಿಬಿಎಂಪಿ ಸಿಬ್ಬಂದಿ

  • Share this:
ಬೆಂಗಳೂರು: ನ್ಯೂಸ್​18 ಕನ್ನಡ ತಂಡ ಇತ್ತೀಚೆಗಷ್ಟೇ ಬೆಂಗಳೂರಿನ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳನ್ನು ಮುಚ್ಚಿಸಲು ಪಣ ತೊಟ್ಟಿತ್ತು. ಅದರಂತೆ #ShutThePothole ಅಭಿಯಾನವನ್ನು ಆರಂಭಿಸಿತ್ತು. ನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆಗಳ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ನಗರದ ಪ್ರಯಾಣಿಕರು ಪಡುತ್ತಿರುವ ಕಷ್ಟ, ಬಿಬಿಎಂಪಿ ಮತ್ತು ಸರ್ಕಾರದ ನಿರ್ಲಕ್ಷ್ಯ, ಎಲ್ಲವನ್ನೂ ವರದಿ ಮಾಡಿತ್ತು. ಇದೀಗ ನ್ಯೂಸ್​18 ಅಭಿಯಾನಕ್ಕೆ ಮಣಿದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike) ರಸ್ತೆ ಗುಂಡಿಗಳನ್ನು ಮುಚ್ಚಲು ವಿಶೇಷ ಕಾರ್ಯಪಡೆಯನ್ನು ರಚಿಸಿದೆ (Special Task Force to Fill Potholes). ನ್ಯೂಸ್​18 ಕನ್ನಡದ ವರದಿಯನ್ನು ಪ್ರಸ್ತಾಪಿಸಿ, ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತ ಈ ಆದೇಶವನ್ನು ಹೊರಡಿಸಿದ್ದಾರೆ.

ನಗರದಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ ಜೀವ ಕೈಯಲ್ಲಿಟ್ಟುಕೊಂಡು ವಾಹನ ಸವಾರಿ ಮಾಡುವ ಪರಿಸ್ಥಿತಿ ಉಂಟಾಗಿದೆ. ಅದೂ ಇತ್ತೀಚೆಗೆ ನಗರದಾದ್ಯಂತ ಮಳೆ ಆರ್ಭಟಿಸಿದ ಹಿನ್ನೆಲೆಯಲ್ಲಿ, ರಸ್ತೆಗುಂಡಿಗಳು ಎಲ್ಲಿದೆ ಎಂಬುದು ಕಾಣಿಸುತ್ತಲೂ ಇರಲಿಲ್ಲ. ಎರಡು ಲಾಕ್​ಡೌನ್​ಗಳ ನಂತರ ಈಗ ಹಿಂದಿನಂತೆ ಮತ್ತೆ ವಾಹನ ದಟ್ಟಣೆ ನಗರದಲ್ಲಿ ಹೆಚ್ಚುತ್ತಿದೆ. ಇದರ ಅರಿವಿದ್ದರೂ ಸಾರ್ವಜನಿಕ ಸೌಲಭ್ಯ ಸಂಸ್ಥೆಗಳು ಕಣ್ಮುಚ್ಚಿ ಕುಳಿತಿದ್ದವು. ಮಲಗಿದ್ದ ಇಲಾಖೆಗಳನ್ನು ಬಡಿದೆಬ್ಬಿಸುವ ಕೆಲಸಕ್ಕೆ ನ್ಯೂಸ್​18 ಕೈ ಹಾಕಿದ ಕೆಲವೇ ದಿನಗಳಲ್ಲಿ, ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. ಇದು ನ್ಯೂಸ್​18 ಇಂಪ್ಯಾಕ್ಟ್​ ಎಂಬುದಕ್ಕಿಂತ, ನಗರವಾಸಿಗಳ ಸುರಕ್ಷತೆಗೆ ಸಿಕ್ಕ ಗೆಲುವು ಎಂದು ನಮ್ಮ ತಂಡ ಪರಿಗಣಿಸುತ್ತದೆ.

ಗುಂಡಿಗಳನ್ನು ಮುಚ್ಚಲು ವಿಶೇಷ ಟಾಸ್ಕ್ ಫೋರ್ಸ್:

ನಿನ್ನೆ ನ್ಯೂಸ್ 18 ಕನ್ನಡ ವರದಿ ಪ್ರಸ್ತಾಪಿಸಿಕೊಂಡು ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದ ಬಿಬಿಎಂಪಿ  ಆಯುಕ್ತ ಗೌರವ್ ಗುಪ್ತಾ, ಈಗ ಸಭೆ ನಡೆಸಿ ನಗರದ ರಸ್ತೆ ಗುಂಡಿ ಮುಚ್ಚಲು ಝೊನ್ ಮಟ್ಟದಲ್ಲಿ ವಿಶೇಷ ತಂಡ ರಚನೆಗೆ ಸೂಚನೆ ನೀಡಿದ್ದಾರೆ. ಜತೆಗೆ ರಾತ್ರೋರಾತ್ರಿ ಬೆಂಗಳೂರಿನ ಹಲವೆಡೆ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯವೂ ಆರಂಭವಾಗಿದೆ.

BBMP filling potholes after News18 campaign
ಬಿಬಿಎಂಪಿ ಸಿಬ್ಬಂದಿ ರಾತ್ರಿ ರಸ್ತೆಗುಂಡಿ ಮುಚ್ಚುತ್ತಿರುವ ದೃಶ್ಯ


ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ ನೀಡಿದ ಆದೇಶಗಳು:

  1. ಎಲ್ಲಾ ವಲಯದಲ್ಲಿ ಸಂಬಂಧಪಟ್ಟ ವಲಯದ ಮುಖ್ಯ ಅಭಿಯಂತರರು, ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ವಾರ್ಡ್ ಅಭಿಯಂತರರನ್ನು ಒಳಗೊಂಡಂತೆ ರಸ್ತೆಗುಂಡಿಗಳನ್ನು ಮುಚ್ಚಲು ಟಾಸ್ಕ್ ಫೋರ್ಸ್ ರಚನೆ ಮಾಡುವುದು

  2. ವಲಯ ಮಟ್ಟದಲ್ಲಿನ ವಿಭಾಗದ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ರಸ್ತೆಗಳ (ಆರ್ಟರಿಯಲ್ & ಸಬ್– ಆರ್ಟಿರಿಯಲ್ ರಸ್ತೆಗಳನ್ನು ಸೇರಿದಂತೆ) ಪಟ್ಟಿ ಮಾಡಿ ರಸ್ತೆಗುಂಡಿಗಳನ್ನು ಗುರುತಿಸಿ ಅಗತ್ಯಕ್ಕೆ ತಕ್ಕಂತೆ ಡಾಂಬರು ಮಿಶ್ರಣದ ಪ್ರಮಾಣಕ್ಕೆ ಬೇಡಿಕೆ ಸಲ್ಲಿಸಿ ರಸ್ತೆಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮವಹಿಸುವುದು. ಇದಕ್ಕೆ ಪೂರಕವಾಗಿ ರಸ್ತೆಮೂಲಭೂತಸೌಕರ್ಯ, ಯೋಜನೆ-ಕೇಂದ್ರದ ಕಾರ್ಯಪಾಲಕ ಅಭಿಯಂತರರು/ಸಹಾಯಕ ಕಾರ್ಯಪಾಲಕ ಅಭಿಯಂತರರು ಸಮನ್ವಯ ಸಾಧಿಸಿ ಅಗತ್ಯ ಮಾಹಿತಿ ಒದಗಿಸಿ ರಸ್ತೆಗುಂಡಿಗಳನ್ನು ಮುಚ್ಚಲು ಸಹಕರಿಸುವುದು.

  3. ರಸ್ತೆಮೂಲಭೂತಸೌಕರ್ಯ ಯೋಜನೆ-ಕೇಂದ್ರದ ಕಾರ್ಯಪಾಲಕ ಅಭಿಯಂತರರು ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ದೋಷಮುಕ್ತ ಅವಧಿಯಲ್ಲಿರುವ ರಸ್ತೆ ಭಾಗದ ವಿವರಗಳನ್ನು ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ನೀಡುವುದು. ಈ ರಸ್ತೆಗಳಲ್ಲಿ ಗುಂಡಿಗಳು ಉಂಟಾದಲ್ಲಿ ಅಥವಾ ಇತರೆ ದುರಸ್ಥಿ ಇದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮವಹಿಸುವಂತೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಂಬಂಧಪಟ್ಟ ರಸ್ತೆಮೂಲಭೂತಸೌಕರ್ಯ/ಯೋಜನೆ - ಕೇಂದ್ರದ ವಿಭಾಗಕ್ಕೆ ಸೂಚಿಸಿ ದುರಸ್ಥಿಪಡಿಸಿರುವುದನ್ನು ದೃಢಿಕರಿಸಿಕೊಳ್ಳುವುದು.

  4. ವಾರ್ಡ್ ಅಭಿಯಂತರರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಗಳ ರಸ್ತೆವಾರು ಮಾಹಿತಿಯನ್ನು ಸಂಗ್ರಹಸಿಡತಕ್ಕದ್ದು. ಇದರಲ್ಲಿ ವಾರ್ಡ್ ರಸ್ತೆಗಳನ್ನು ಸೇರಿದಂತೆ ರಸ್ತೆಮೂಲಭೂತಸೌಕರ್ಯ/ಯೋಜನೆ - ಕೇಂದ್ರ 1 ಅಥವಾ ಇತರೆ ವಿಭಾಗದಿಂದ ಅಭಿವೃದ್ಧಿಪಡಿಸಿರುವ/ದೋಷಮುಕ್ತ ಅವಧಿಯಲ್ಲಿರುವ/ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಭಾಗದ ವಿವರಗಳು ಇರತಕ್ಕದ್ದು. ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಆಗಿಂದ್ದಾಗೆ ಮುಚ್ಚಲು ಕ್ರಮವಹಿಸುವುದು.

  5. ವಲಯ ಮಟ್ಟದಲ್ಲಿನ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಇತರೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಮಾಹಿತಿಗಳನ್ನು ವಿಭಾಗದ ಕಾರ್ಯಪಾಲಕ ಅಭಿಯಂತರವರಿಗೆ ನೀಡುವುದು. ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ರಸ್ತೆಗಳ ರಸ್ತೆಗುಂಡಿ ಮುಚ್ಚುವ ಕಾರ್ಯದ ಮೇಲುಸ್ತುವಾರಿ ವಹಿಸುವುದು.

  6. ಕಾರ್ಯಪಾಲಕ ಅಭಿಯಂತರರು, ರಸ್ತೆಮೂಲಭೂತಸೌಕರ್ಯ-ಟಿ.ಇ.ಸಿ ವಿಭಾಗರವರು ವಲಯದ ಕಾರ್ಯಪಾಲಕ ಅಭಿಯಂತರರ ಬೇಡಿಕೆ ಅನುಸಾರ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಡಾಂಬರು ಮಿಶ್ರಣವನ್ನು ಸರಬರಾಜು ಮಾಡುವುದು. ಡಾಂಬರು ಮಿಶ್ರಣ ತಯಾರಿಕಾ ಘಟಕದಿಂದ ಪ್ರತಿ ದಿನ ವಲಯವಾರು ಸರಬರಾಜು ಮಾಡಿರುವ ಡಾಂಬರು ಮಿಶ್ರಣದ ಪ್ರಮಾಣದ ಆಯಾ ವಲಯದ ಮುಖ್ಯ ಅಭಿಯಂತರರುಗಳಿಗೆ ಮಾಹಿತಿ ಸಲ್ಲಿಸುವುದು.

  7. ವಲಯದ ಮುಖ್ಯ ಅಭಿಯಂತರರು ತಮ್ಮ ವಲಯ ವ್ಯಾಪ್ತಿಯಲ್ಲಿನ ರಸ್ತೆಗಳ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆ ವಹಿಸುವುದು. ವಿವಿಧ ವಿಭಾಗಗಳೊಂದಿಗೆ ಸಮನ್ವಯ ಕೊರತೆಯಾಗದಂತೆ ನಿಗಾವಹಿಸಿ ಅಗತ್ಯ ನೆರವು ನೀಡುವುದು. ಪ್ರತಿದಿನ ತಮ್ಮ ವಲಯ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿರುವ ಬಗ್ಗೆ ವಿಭಾಗವಾರು ರಸ್ತೆಗಳ ವಿವರವನ್ನು ಕ್ರೂಢಿಕರಿಸಿ ತಮ್ಮ ವಲಯ ಆಯುಕ್ತರುಗಳಿಗೆ ಮಾಹಿತಿಯನ್ನು ಸಲ್ಲಿಸುವುದು.

  8. ಎಲ್ಲಾ ವಲಯದ ರಸ್ತೆಗುಂಡಿಗಳನ್ನು ಮುಚ್ಚಿರುವ ಅಗತ್ಯ ಮಾಹಿತಿಯನ್ನು ಪ್ರಧಾನ ಅಭಿಯಂತರರ ಕಛೇರಿಯಲ್ಲಿ ಕ್ರೂಢೀಕರಿಸಿ ಪ್ರತಿ ದಿನದ ಮಾಹಿತಿಯನ್ನು ಮಾನ್ಯ ಆಡಳಿತಗಾರರ ಕಛೇರಿಗೆ ಮತ್ತು ಈ ಕಛೇರಿಗೆ ಸಲ್ಲಿಸುವುದು.

Published by:Sharath Sharma Kalagaru
First published: